ಮೊಕದ್ದಮೆ ವಾಪಸ್​ಗೆ ಒತ್ತಾಯ ಬೀದರ್​ನ ಶಾಹೀನ್ ಶಾಲೆ ಪ್ರಕರಣ

Assembly Session 20 FEB 20
Published on

ವಿಧಾನಪರಿಷತ್: ಬೀದರ್​ನ ಶಾಹೀನ್ ಶಿಕ್ಷಣ ಸಂಸ್ಥೆಯ ಶಾಲೆ ಮುಖ್ಯಗುರು, ವಿದ್ಯಾರ್ಥಿನಿ ತಾಯಿ ವಿರುದ್ಧ ಹೂಡಿರುವ ದೇಶದ್ರೋಹ ಮೊಕದ್ದಮೆ ವಾಪಸ್​ಗೆ ಪ್ರತಿಪಕ್ಷಗಳ ಒತ್ತಾಯ, ಅಡಳಿತ ಪಕ್ಷದ ವಿರೋಧ ಹಾಗೂ ಉಭಯ ಪಕ್ಷಗಳ ಸದಸ್ಯರ ನಡುವೆ ಮಾತಿನ ಚಕಮಕಿಗೆ ವಿಧಾನಪರಿಷತ್ ಗುರುವಾರ ಸಾಕ್ಷಿಯಾಯಿತು.

ಸಾರ್ವಜನಿಕ ಮಹತ್ವದ ವಿಷಯದ ಮೇಲೆ ನಡೆದ ಸುದೀರ್ಘ ಚರ್ಚೆಗೆ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಶಾಹೀನ್ ಶಾಲೆ ಪ್ರಕರಣಕ್ಕೆ ಉತ್ತರಿಸುತ್ತಿದ್ದಾಗ ಮಧ್ಯೆ ಪ್ರವೇಶಿಸಿದ ಕಾಂಗ್ರೆಸ್​ನ ಸಿ.ಎಂ.ಇಬ್ರಾಹಿಂ, ಮರು ಪರಿಶೀಲಿಸುವುದಾಗಿ ಹೇಳಿ ಎಂದು ಕೋರಿದರು. ಇದಕ್ಕೆ ಜೆಡಿಎಸ್​ನ ಕೆ.ಟಿ.ಶ್ರೀಕಂಠೇಗೌಡ, ಭೋಜೇಗೌಡ, ಪಿ.ಆರ್.ರಮೇಶ್, ಡಾ.ಜಯಮಾಲಾ ಇನ್ನಿತರರು ಧ್ವನಿಗೂಡಿಸಿದರು. ಪುಟ್ಟಣ್ಣ, ಆಡಳಿತ ಪಕ್ಷದ ಎಸ್.ವಿ.ಸಂಕನೂರು, ತೇಜಸ್ವಿನಿ ಗೌಡ, ವೈ.ಎ.ನಾರಾಯಣಸ್ವಾಮಿ ತೀವ್ರ ಪ್ರತಿರೋಧವೊಡ್ಡಿದರು.

ಮಕ್ಕಳನ್ನು ಹೀನ ಕೃತ್ಯಕ್ಕೆ ಬಳಸಿದವರ ವಿರುದ್ಧ ತನಿಖೆ ನಡೆಯಲೇಬೇಕು ಎಂದು ಪಟ್ಟುಹಿಡಿದ ಕಾರಣ ಉಭಯ ಪಕ್ಷಗಳ ಸದಸ್ಯರ ಮಧ್ಯೆ ಮಾತಿನ ಚಕಮಕಿ ನಡೆದು ಗದ್ದಲದಲ್ಲಿ ಸದನ ಮುಳುಗಿತು. ವಿಪಕ್ಷದ ಸದಸ್ಯರು ಸಭಾಪತಿ ಪೀಠದ ಮುಂದೆ ಧಾವಿಸಿ ಪ್ರತಿಭಟನೆ ನಡೆಸಿದರು. ಪ್ರತಿಭಟನಾ ನಿರತರ ಮನವೊಲಿಸುವಂತೆ ಎಸ್.ಆರ್.ಪಾಟೀಲ್ ಹಾಗೂ ಬಸವರಾಜ ಹೊರಟ್ಟಿಗೆ ಸಭಾಪತಿ ಸಲಹೆ ನೀಡಿ, ಪ್ರತಿಪಕ್ಷಗಳು ಪಟ್ಟು ಸಡಿಲಿಸದ ಕಾರಣ ಕಲಾಪವನ್ನು ಮುಂದೂಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net