ಕಾರ್ಗಿಲ್​ ವಿಜಯ ದಿವಸ: ಪ್ರಧಾನಿ, ರಕ್ಷಣಾ ಸಚಿವ, ಸೇನಾ ಮುಖ್ಯಸ್ಥರಿಂದ ವೀರ ಯೋಧರಿಗೆ ಗೌರವ ನಮನ

Kargil War Memorial
Published on

ನವದೆಹಲಿ: ಇಂದು ಕಾರ್ಗಿಲ್ ವಿಜಯ ದಿವಸ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ, ರಕ್ಷಣಾ ಸಚಿವ ರಾಜನಾಥ್​ ಸಿಂಗ್ ಹಾಗೂ ಸೇನಾ ಮುಖ್ಯಸ್ಥರು ಸೇರಿದಂತೆ ಅನೇಕ ಗಣ್ಯರು​ ಕಾರ್ಗಿಲ್ ಯುದ್ಧದಲ್ಲಿ ಮಡಿದ ಹುತಾತ್ಮ ಯೋಧರ ತ್ಯಾಗ ಬಲಿದಾನವನ್ನು ಸ್ಮರಿಸಿ, ಗೌರವ ಸಮರ್ಪಿಸಿದ್ದಾರೆ.

ಇಂದು ಬೆಳಗ್ಗೆ ಟ್ವೀಟ್​ ಮಾಡಿರುವ ಪ್ರಧಾನಿ ಮೋದಿ, ಕಾರ್ಗಿಲ್ ವಿಜಯ್ ದಿವಸವು ಭಾರತದ ಅದ್ಭುತ ಧೈರ್ಯಶಾಲಿಗಳ ವೀರಗಾಥೆಯನ್ನು ಮುನ್ನೆಲೆಗೆ ತರುತ್ತದೆ. ಯುದ್ಧದಲ್ಲಿ ಹೋರಾಡಿದ ಪ್ರತಿಯೊಬ್ಬರು ಎಂದೆಂದಿಗೂ ಈ ದೇಶವಾಸಿಗಳಿಗೆ ಸ್ಫೂರ್ತಿಯ ಸೆಲೆಯಾಗಿಯೇ ಉಳಿಯುತ್ತಾರೆ. ಈ ವಿಶೇಷ ದಿನದಂದು, ನನ್ನ ಹೃದಯದ ಅಂತರಾಳದಿಂದ ವೀರ ಯೋಧರಿಗೆ ನಮಸ್ಕರಿಸುತ್ತೇನೆ. ಭಾರತಕ್ಕೆ ಜಯವಾಗಲಿ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ರಕ್ಷಣಾ ಸಚಿವ ರಾಜನಾಥ್​ ಸಿಂಗ್​ ಅವರು ದ್ರಾಸ್​ನಲ್ಲಿರುವ ಕಾರ್ಗಿಲ್​ ಯುದ್ಧ ಸ್ಮಾರಕಕ್ಕೆ ಭೇಟಿ ನೀಡಿ 1999ರಲ್ಲಿ ನಡೆದ ಯುದ್ಧದಲ್ಲಿ ಹುತಾತ್ಮರಾದ ಯೋಧರಿ ಸ್ಮಾರಕಕ್ಕೆ ಗೌರವ ಸಮರ್ಪಿಸಿದರು.

ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಜನರಲ್​ ಅನಿಲ್​ ಚೌಹಾಣ್​, ಸೇನಾ ಮುಖ್ಯಸ್ಥ ಜನರಲ್​ ಮನೋಜ್​ ಪಾಂಡೆ, ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್​ ಆರ್​ ಹರಿ ಕುಮಾರ್​ ಹಾಗೂ ವಾಯುಪಡೆಯ ಮುಖ್ಯಸ್ಥರಾದ ಏರ್​ಚೀಫ್​ ಮಾರ್ಷಲ್​ ವಿ.ಆರ್​. ಚೌಧರಿ ಅವರು ದ್ರಾಸ್​ನಲ್ಲಿರುವ ಯುದ್ಧ ಸ್ಮಾರಕಕ್ಕೆ ಭೇಟಿ ನೀಡಿ ಹುತಾತ್ಮ ಯೋಧರಿಗೆ ಗೌರವ ಸಲ್ಲಿಸಿದರು.

1999ರಲ್ಲಿ ಪಾಕಿಸ್ತಾನದ ವಿರುದ್ಧ ನಡೆದ ಯುದ್ಧದಲ್ಲಿ ಭಾರತ ಜಯ ಸಾಧಿಸಿತು. ಈ ಯುದ್ಧದಲ್ಲಿ ಸಾಕಷ್ಟು ಭಾರತೀಯ ಯೋಧರು ಹುತಾತ್ಮರಾದರು. ಹೀಗಾಗಿ ಪ್ರತಿವರ್ಷ ಜುಲೈ 26ರಂದು ಕಾರ್ಗಿಲ್ ಯುದ್ಧದಲ್ಲಿ ತಾಯ್ನಾಡಿಗಾಗಿ ಧೈರ್ಯ, ಸಾಹಸ ಪ್ರದರ್ಶಿಸಿ ಹುತಾತ್ಮರಾದ ಭಾರತೀಯ ವೀರ ಸೈನಿಕರನ್ನು ಹೆಮ್ಮೆಯಿಂದ ಸ್ಮರಿಸುವ ಹಿನ್ನೆಲೆಯಲ್ಲಿ ಕಾರ್ಗಿಲ್ ವಿಜಯ ದಿವಸವನ್ನು ಆಚರಿಸಲಾಗುತ್ತದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net