ಆಗಸ್ಟ್​ 1ರಿಂದ ಹಾಲಿನ ದರ ಏರಿಕೆ ಜತೆಗೆ ಹೋಟೆಲ್ ತಿಂಡಿ-ತಿನಿಸುಗಳ ಬೆಲೆಯೂ ಶೇ. 10 ಹೆಚ್ಚಳ!

Hotel Price
Published on

ಬೆಂಗಳೂರು: ಸರ್ಕಾರದಿಂದ ಹಾಲಿನ ದರ ಏರಿಕೆ ನಿರ್ಧಾರ ಪ್ರಕಟವಾದ ಬೆನ್ನಲ್ಲೇ ಹೋಟೆಲ್​ ಮಾಲೀಕರು ಬೆಲೆ ಹೆಚ್ಚಳ ಮಾಡಲು ನಿರ್ಧಾರ ಮಾಡಿದ್ದು, ಗ್ರಾಹಕರ ಜೇಬಿಗೆ ಮತ್ತಷ್ಟು ಕತ್ತರಿ ಬೀಳಲಿದೆ. ಈಗಾಗಲೇ ಸಾಲು ಸಾಲು ದರ ಏರಿಕೆಯಿಂದ ಜನರು ಕಂಗಾಲಾಗಿದ್ದು, ಹೊಸ ಸರ್ಕಾರ ಬಂದರೆ ದರ ಏರಿಕೆಗೆ ಕಡಿವಾಣ ಬೀಳಬಹುದು ಎಂಬ ನಿರೀಕ್ಷೆಯಲ್ಲಿದ್ದರು. ಆದರೆ, ಆ ನಿರೀಕ್ಷೆ ಹುಸಿಯಾಗುತ್ತಿದೆ.

ಆಗಸ್ಟ್ 1ರಿಂದ‌ ನಂದಿನ ಹಾಲಿನ ದರ ಏರಿಕೆಯ ಜತೆಗೆ ಹೋಟೆಲ್ ತಿಂಡಿ-ತಿನಿಸುಗಳ ಬೆಲೆಯಲ್ಲೂ ಹೆಚ್ಚಳವಾಗಲಿದೆ. ಶೇ. 10 ರಷ್ಟು ದರ ಏರಿಕೆಗೆ ಹೋಟೆಲ್ ಸಂಘಟನೆಗಳ ಸಭೆಯಲ್ಲಿ ನಿರ್ಧರಿಸಲಾಗಿದೆ. ಹೊಸ ದರ ಆಗಸ್ಟ್ 1ರಿಂದ ಅನ್ವಯವಾಗಲಿದೆ.

ಬೆಲೆ ಏರಿಕೆ ಅನಿವಾರ್ಯ

ಈಗಾಗಲೇ ಆಹಾರ ಪದಾರ್ಥಗಳ ಬೆಲೆ ಹೆಚ್ಚಳವಾಗಿರುವುದರಿಂದ ಹೋಟೆಲ್​ ನಿರ್ವಹಣೆ ಕಷ್ಟವಾಗಿದ್ದು, ಬೆಲೆ ಏರಿಕೆ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ. ಹೀಗಾಗಿ ಆಗಸ್ಟ್​ ಒಂದರಿಂದಲೇ ದರ ಏರಿಕೆ ಮಾಡಲು ತೀರ್ಮಾನಿಲಾಗಿದೆ. ಈಗಾಗಲೇ ದರ ಹೆಚ್ಚಳವಾಗಿರುವ ಹೋಟೆಲ್​ಗಳಿಗೆ ಇದು ಅನ್ವಯವಾಗುವುದಿಲ್ಲ. ಗ್ರಾಹಕರಿಗೂ ಹೊರೆಯಾಗದಂತೆ ಕೇವಲ 10 ರಷ್ಟು ಬೆಲೆ ಏರಿಕೆಗೆ ನಿರ್ಧಾರ ಮಾಡಲಿದ್ದೇವೆ ಎಂದು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಪಿಸಿ ರಾವ್ ತಿಳಿಸಿದ್ದಾರೆ.

ಸರ್ಕಾರ ರಚನೆಯಾದ ಬೆನ್ನಲ್ಲೇ ಜನರಿಗೆ ವಿದ್ಯುತ್​ ದರ ಏರಿಕೆ ಶಾಕ್​ ಎದುರಾಗಿತ್ತು. ಇದೀಗ ಹಾಲಿನ ದರವು ಏರಿಕೆಯಾಗಲಿದೆ. ಹಾಲು ಒಕ್ಕೂಟಗಳ ಜತೆ ನಡೆದ ಸಭೆಯ ಬಳಿಕ ಪ್ರತಿ ಲೀಟರ್​ಗೆ 3 ರೂಪಾಯಿ ಹೆಚ್ಚಳ ಮಾಡಲು ಸಿಎಂ ಸಿದ್ದರಾಮಯ್ಯ ಅಸ್ತು ಎಂದಿದ್ದಾರೆ. ಆಗಸ್ಟ್​ 1ರಿಂದ ಪರಿಷ್ಕೃತ ದರ ಜಾರಿಗೆ ಬರಲಿದೆ. ಹಾಲಿನ ದರ ಏರಿಕೆಯ ಬೆನ್ನಲ್ಲೇ ಇದೀಗ ಹೋಟೆಲ್​ ತಿಂಡಿ-ತಿನಿಸುಗಳ ದರವೂ ಏರಿಕೆಯಾಗಲಿದೆ.

ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸುತ್ತಿರುವ ಜನರಿಗೆ ಹಾಲಿನ ಬೆಲೆ ಏರಿಕೆಯ ಬಿಸಿ ತಟ್ಟಲಿದೆ. ಇದರ ಬೆನ್ನಲ್ಲೇ ಹೋಟೆಲ್​ ಬಿಲ್​ ದರವು ಹೆಚ್ಚಾಗಲಿದ್ದು, ಜನರ ಜೇಬಿಗೆ ಮತ್ತಷ್ಟು ಕತ್ತರಿ ಬೀಳಲಿದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net