ಟಿ20 ಕ್ರಿಕೆಟ್‌ನಲ್ಲಿ ಹೊಸ ದಾಖಲೆ ಬರೆದ ಪಂಜಾಬ್ ಕಿಂಗ್ಸ್: ಕೆಕೆಆರ್ ಎದುರು ಆರ್‌ಸಿಬಿ ದಾಖಲೆ ಮುರಿದ ಕರ್ರನ್ ಪಡೆ

2 Min Read
ಟಿ20 ಕ್ರಿಕೆಟ್‌ನಲ್ಲಿ ಹೊಸ ದಾಖಲೆ ಬರೆದ ಪಂಜಾಬ್ ಕಿಂಗ್ಸ್: ಕೆಕೆಆರ್ ಎದುರು ಆರ್‌ಸಿಬಿ ದಾಖಲೆ ಮುರಿದ ಕರ್ರನ್ ಪಡೆ

ಕೋಲ್ಕತ: ಈಡನ್ ಗಾರ್ಡನ್ಸ್‌ನಲ್ಲಿ ಉಕ್ಕಿ ಹರಿದ ರನ್‌ಪ್ರವಾಹದಲ್ಲಿ ಯಶಸ್ವಿಯಾಗಿ ದಡ ಸೇರಿದ ಪಂಜಾಬ್ ಕಿಂಗ್ಸ್ ಐಪಿಎಲ್ ಇತಿಹಾಸದಲ್ಲಿ ಗರಿಷ್ಠ ಯಶಸ್ವಿ ಚೇಸಿಂಗ್ ನಡೆಸಿದ ಹೊಸ ಮೈಲಿಗಲ್ಲು ನೆಟ್ಟಿದೆ. ಆರಂಭಿಕ ಜಾನಿ ಬೇರ್‌ಸ್ಟೋ (108* ರನ್, 48 ಎಸೆತ, 8 ಬೌಂಡರಿ, 9 ಸಿಕ್ಸರ್) ಸ್ಫೋಟಕ ಶತಕ ಹಾಗೂ ಶಶಾಂಕ್ ಸಿಂಗ್ (68*ರನ್, 28 ಎಸೆತ, 2 ಬೌಂಡರಿ, 8 ಸಿಕ್ಸರ್) ಮಿಂಚಿನ ಬ್ಯಾಟಿಂಗ್ ನೆರವಿನಿಂದ ಪಂಜಾಬ್ ಕಿಂಗ್ಸ್ ಐಪಿಎಲ್-17ರಲ್ಲಿ ಆತಿಥೇಯ ಕೋಲ್ಕತ ನೈಟ್‌ರೈಡರ್ಸ್‌ ತಂಡವನ್ನು 8 ವಿಕೆಟ್‌ಗಳಿಂದ ಬಗ್ಗುಬಡಿಯಿತು.

ಶುಕ್ರವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿದ ಕೆಕೆಆರ್, ಆರಂಭಿಕ ಫಿಲ್ ಸಾಲ್ಟ್ (75 ರನ್, 37 ಎಸೆತ, 6 ಬೌಂಡರಿ, 6 ಸಿಕ್ಸರ್) ಹಾಗೂ ಸುನೀಲ್ ನಾರಾಯಣ್ (71 ರನ್, 32 ಎಸೆತ, 9 ಬೌಂಡರಿ, 4 ಸಿಕ್ಸರ್) ಹಾಕಿಕೊಟ್ಟ ಭದ್ರ ಅಡಿಪಾಯದ ನೆರವಿನಿಂದ 6 ವಿಕೆಟ್‌ಗೆ 261 ರನ್ ಪೇರಿಸಿತು. ಪ್ರತಿಯಾಗಿ ಪ್ರಭ್‌ಸಿಮ್ರಾನ್ ಸಿಂಗ್ (54 ರನ್, 20 ಎಸೆತ, 4 ಬೌಂಡರಿ, 5 ಸಿಕ್ಸರ್) ಒದಗಿಸಿದ ಬಿರುಸಿನ ಆರಂಭ, ಬೇರ್ ಸ್ಟೋ- ಶಶಾಂಕ್ ಭರ್ಜರಿ ಜತೆಯಾಟದ ನೆರವಿನಿಂದ ಪಂಜಾಬ್ ಕಿಂಗ್ಸ್ 18.4 ಓವರ್‌ಗಳಲ್ಲಿ 2 ವಿಕೆಟ್‌ಗೆ 262 ರನ್‌ಗಳಿಸಿ 8 ಎಸೆತ ಬಾಕಿಯಿರುವಂತೆಯೇ ದಾಖಲೆಯ ಯಶಸ್ವಿ ಚೇಸಿಂಗ್ ನಡೆಸಿತು.

ಪ್ರಭ್‌ಸಿಮ್ರಾನ್ ಸ್ಫೋಟಕ ಆರಂಭ: ಬೃಹತ್ ಮೊತ್ತದ ಚೇಸಿಂಗ್‌ಗೆ ಇಳಿದ ಪಂಜಾಬ್‌ಗೆ ಇಂಪಾಕ್ಟ್ ಆಟಗಾರ ಪ್ರಭ್‌ಸಿಮ್ರಾನ್ ಸಿಂಗ್ ಸ್ಫೋಟಕ ಆರಂಭ ಒದಗಿಸಿದರು. ಬೇರ್ ಸ್ಟೋ ಜತೆಯಾಗಿ ಕೆಕೆಆರ್ ಬೌಲರ್‌ಗಳನ್ನು ದಂಡಿಸಿದ ಪ್ರಭ್‌ಸಿಮ್ರಾನ್ ಮೊದಲ ವಿಕೆಟ್‌ಗೆ 36 ಎಸೆತಗಳಲ್ಲಿ 93 ರನ್ ಕಸಿದು ಚೇಸಿಂಗ್‌ಗೆ ಭದ್ರ ಬುನಾದಿ ಹಾಕಿಕೊಟ್ಟರು. 18 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ ಪ್ರಭ್‌ಸಿಮ್ರಾನ್ ರನ್ ಕಸಿಯುವ ಯತ್ನದಲ್ಲಿ ರನೌಟ್ ಆದರು. 6ನೇ ಓವರ್‌ನಲ್ಲಿ 24 ರನ್ ಕಸಿದ ಬೇರ್‌ಸ್ಟೋ ಪವರ್‌ಪ್ಲೇನಲ್ಲಿ 93 ರನ್ ಕಸಿಯಲು ನೆರವಾದರು.

See also  VIDEO | ಧೋನಿ ಬರ್ತ್‌ಡೇಗೆ ಅಚ್ಚರಿ ನೀಡಲು ರಾಂಚಿಗೆ ಹೋದ ಪಾಂಡ್ಯ ಬ್ರದರ್ಸ್‌!

ಬೇರ್‌ಸ್ಟೋ-ಶಶಾಂಕ್ ಗೆಲುವಿನ ಆಟ: ಬೇರ್‌ಸ್ಟೋ ಹಾಗೂ ರಿಲೀ ರೋಸೌ (26) ಜೋಡಿ ಕೆಕೆಆರ್‌ಗೆ ಸವಾಲೆನಿಸಿತು. ಬಿರುಸಿನಾಟಕ್ಕಿಳಿದ ಬೇರ್‌ಸ್ಟೋ 23 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ ಕಳಪೆ ಾರ್ಮ್‌ನಿಂದ ಹೊರಬಂದು ರನ್ ಬೇಟೆ ಆಡಿದರು. 11 ಓವರ್‌ನಲ್ಲಿ 150 ರನ್ ಕಸಿದ ಪಂಜಾಬ್ ಹೋರಾಟ ಜೀವಂತವಿರಿಸಿತು. ಅರ್ಧಶತಕದ ಬಳಿಕ ಚೇಸಿಂಗ್‌ಗೆ ಚುರುಕು ನೀಡಿದ ಬೇರ್ ಸ್ಟೋ 45 ಎಸೆತಗಳಲ್ಲಿ ಶತಕ ಸಿಡಿಸಿ ಚೇಸಿಂಗ್ ಸುಲಭಗೊಳಿಸಿದರು. ರಿಲೀ ರೋಸೌ ನಿರ್ಗಮನದ ಬಳಿಕ ಬೌಂಡರಿ-ಸಿಕ್ಸರ್‌ಗಳ ಮಳೆಗೈದ ಬೇರ್‌ಸ್ಟೋ-ಶಶಾಂಕ್ ಮುರಿಯದ 3ನೇ ವಿಕೆಟ್‌ಗೆ 37 ಎಸೆತಗಳಲ್ಲಿ 84 ರನ್ ಕಸಿದರು. 23 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ ಶಶಾಂಕ್ ಸಿಂಗ್ ಪಂಜಾಬ್ ಗೆಲುವಿನಲ್ಲೂ ಮಿಂಚಿದರು.

Share This Article