More

    ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರ: ಸರತಿಯಲ್ಲಿ ನಿಂತು ಮತ ಹಾಕಿದ ಜನ

    ಬೆಂಗಳೂರು: ರಾಜ್ಯದಲ್ಲಿ ಅತೀ ಹೆಚ್ಚಿನ ಮತದಾರರನ್ನು ಹೊಂದಿರುವ ಖ್ಯಾತಿಯ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ ಹಿಂದಿನ ಚುನಾವಣೆಗಿಂತ ಈ ಬಾರಿ ತುಸು ಮತ ಪ್ರಮಾಣ ಹೆಚ್ಚಿದೆ. ಯುವಕರು ಹಾಗೂ ಮಹಿಳಾ ಮತದಾರರು ಹುರುಪಿನಿಂದ ಮತಗಟ್ಟೆಗಳಿಗೆ ಧಾವಿಸಿಬಂದು ಮತ ಹಾಕಿ ಸಂಭ್ರಮಿಸಿದರು.

    ಬೆಳಗ್ಗೆಯೇ ಹಲವು ಮತಗಟ್ಟೆಗಳಲ್ಲಿ ಉದ್ದನೆಯ ಸಾಲು ಕಂಡುಬಂತು. ಬಿಸಿಲ ಕಾರಣದಿಂದ ಹಲವರು ಬೇಗನೆ ಬಂದು ತಮ್ಮ ಹಕ್ಕು ಚಲಾಯಿಸಿದರು. ಇವರಲ್ಲಿ ದಂಪತಿ ಸಮೇತ ಆಗಮಿಸಿ ಸಾಲಿನಲ್ಲಿ ನಿಂತು ಮತ ಹಾಕಿದರು. ತಲಘಟ್ಟಪುರದ ಯಶಸ್ವಿನಿ ಇಂಟರ್ ನ್ಯಾಷನಲ್ ಶಾಲೆಯಲ್ಲಿ ಸ್ಥಾಪಿಸಿದ್ದ ನಾಲ್ಕು ಬೂತ್‌ಗಳಲ್ಲಿ ಬೆಳಗ್ಗೆ 9ರಿಂದ 11ರ ವೇಳೆ ಸುಮಾರು 200 ಮಂದಿ ಪುರುಷರು ಹಾಗೂ ಮಹಿಳೆಯರು ಪ್ರತ್ಯೇಕ ಸಾಲಿನಲ್ಲಿ ನಿಂತಿದ್ದ ದೃಶ್ಯ ಕಂಡುಬಂದಿತು. ಹಲವರು ಅರ್ಧ ಗಂಟೆ ಕಾಲ ಕ್ಯೂನಲ್ಲಿ ನಿಂತು ಮತ ಚಲಾಯಿಸಿದರು. ಅಪರೂಪಕ್ಕೆ ಇಂತಹ ದೃಶ್ಯವನ್ನು ಸೆರೆಹಿಡಿಯಲು ಮಾಧ್ಯಮ ಮಂದಿ ಮುಗಿಬಿದ್ದರು. ಬೇರೆ ಕಡೆಗಳಲ್ಲೂ ಜನರು ಸಾಲಿನಲ್ಲಿ ನಿಂತು ಮತ ಚಲಾಯಿಸಲು ಹಿಂದೇಟು ಹಾಕಬಾರದು ಎಂದು ಅಲ್ಲಿನ ನಿವಾಸಿ ನಾಗರಾಜ್ ಪ್ರತಿಕ್ರಿಯಿಸಿದರು.

    ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಎಂಟೂ ವಿಧಾನಸಭಾ ಕ್ಷೇತ್ರಗಳಲ್ಲಿ ಶೇ.50ಕ್ಕಿಂತ ಹೆಚ್ಚು ಮತದಾನ ಆಗಿದೆ. ಗ್ರಾಮೀಣ ಪ್ರದೇಶ ಒಳಗೊಂಡಿರುವ ಬ್ಯಾಟರಾಯನಪುರ, ದಾಸರಹಳ್ಳಿ ಹಾಗೂ ಯಶವಂತಪುರ ವಿಧಾನಸಭಾ ಕ್ಷೇತ್ರದಲ್ಲಿ ತಲಾ ಶೇ.55ಕ್ಕಿಂತ ಹೆಚ್ಚು ಮತ ಚಲಾವಣೆಯಾಗಿದೆ. ಇಲ್ಲಿ ಇತರ ಪ್ರದೇಶಗಳಿಗಿಂತ ಆಯಾ ಪಕ್ಷಗಳ ಕಾರ್ಯಕರ್ತರು ಮತಗಟ್ಟೆ ಹೊರಗೆ ಮತಯಾಚಿಸುತ್ತಿದ್ದದ್ದು ಕಂಡುಬಂತು. ಬಿಸಿಲಿನ ಝಳದಿಂದ ತಪ್ಪಿಸಿಕೊಳ್ಳಲು ಟೋಪಿ ಧರಿಸಿ ತಮ್ಮ ಪಕ್ಷದ ಅಭ್ಯರ್ಥಿಗೆ ಮತ ಹಾಕುವಂತೆ ಮತದಾರರಿಗೆ ದುಂಬಾಲು ಬಿದ್ದರು.

    ಸಂಜೆ ಮತ ಹಾಕಲು ತರಾತುರಿ:

    ಬಿಸಿಲಿನ ಕಾರಣದಿಂದ ಕೆಲ ಹಿರಿಯರು ಸೇರಿ ಹಲವು ಮತದಾರರು ಸಂಜೆ 4ರ ಬಳಿಕ ಮತಗಟ್ಟೆಗಳಿಗೆ ಆಗಮಿಸಿ ಮತ ಹಾಕಿದರು. ಕೊನೆಯ ಒಂದು ಗಂಟೆ ಅವಧಿಯಲ್ಲಿ ಹಲವೆಡೆ ಉದ್ದನೆಯ ಸಾಲು ಕಂಡುಬಂದಿತು. ಹೆಚ್ಚಿನ ಮತದಾರರು ಸಾಲಿನಲ್ಲಿ ನಿಂತಿದ್ದ ಕಾರಣ ಕೆಂಗೇರಿ ಹಾಗೂ ಬಾಗಲೂರು ಮತಗಟ್ಟೆಗಳಲ್ಲಿ ಸಂಜೆ 7ರ ವರೆಗೂ ಮತ ಹಾಕಲು ಅವಕಾಶ ನೀಡಲಾಯಿತು. ಸೂಕ್ಷ್ಮ ಹಾಗೂ ಅತೀ ಸೂಕ್ಷ್ಮ ಮತಗಟ್ಟೆಗಳ ಬಳಿ ಹೆಚ್ಚಿನ ಪೊಲೀಸ್ ಸಿಬ್ಬಂದಿ ನಿಯೋಜಿಸಿದ್ದ ಕಾರಣ ಯಾವುದೇ ಅಹಿತಕರ ಘಟನೆ ನಡೆಯಲಿಲ್ಲ. ಒಟ್ಟಾರೆ ಮತದಾನ ಶಾಂತಿಯುತವಾಗಿ ನಡೆದಿದ್ದಕ್ಕೆ ಆಯಾ ಪಕ್ಷಗಳ ಮುಖಂಡರು ನಿಟ್ಟಿಸಿರುಬಿಟ್ಟರು.

    ಗಣ್ಯರಿಂದ ಮತದಾನ:

    ಸಚಿವ ಕೃಷ್ಣಬೈರೇಗೌಡ ಅವರು ಬ್ಯಾಟರಾಯನಪುರದ ಇಂಪ್ಯಾಕ್ಟ್ ಕಾಲೇಜಿನ ಮತಗಟ್ಟೆಯಲ್ಲಿ ಮತ ಚಲಾಯಿಸಿದರು. ಮತ್ತೊಬ್ಬ ಸಚಿವ ಬಿ.ಎಸ್.ಸುರೇಶ್ ಅವರು ಬೈರತಿ ಗ್ರಾಮದಲ್ಲಿ ಮತ ಹಾಕಿದರು. ಕ್ಷೇತ್ರದ ಹಾಲಿ ಸಂಸದ ಡಿ.ವಿ.ಸದಾನಂದಗೌಡ ಅವರು ತಮ್ಮ ಪತ್ನಿ ಡಾಟಿ ಅವರೊಂದಿಗೆ ಹೆಬ್ಬಾಳ ಸಮೀಪದ ಆರ್‌ಎಂವಿ ಬಡಾವಣೆಯ ಸರ್ಕಾರಿ ಶಾಲೆಯಲ್ಲಿ ಮತಚಲಾಯಿಸಿದರು.

    ಕೈ ಅಭ್ಯರ್ಥಿಯಿಂದ ಕ್ಷೇತ್ರದ ಹೊರಗೆ ಮತ:
    ಬೆಂಗಳೂರು ಉತ್ತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಅವರು ಆರ್‌ಎಂವಿ ಬಡಾವಣೆಯ ಸರ್ಕಾರಿ ಶಾಲೆಯ ಮತಗಟ್ಟೆಯಲ್ಲಿ ಮತ ಚಲಾಯಿಸಿದರು. ಆದರೆ, ಕಾಂಗ್ರೆಸ್ ಅಭ್ಯರ್ಥಿ ಪ್ರೊ.ಎಂ.ವಿ. ರಾಜೀವ್‌ಗೌಡ ಅವರ ಮತ ಕ್ಷೇತ್ರದಲ್ಲಿ ಇರಲಿಲ್ಲ. ಹಾಗಾಗಿ ಅವರು ತಮ್ಮ ಕುಟುಂಬ ಸದಸ್ಯರೊಂದಿಗೆ ಜೆ.ಪಿ. ನಗರದ ಸಾರಕ್ಕಿಯ ಸರ್ಕಾರಿ ಪ್ರೌಢ ಶಾಲೆಯಲ್ಲಿ ಮತ ಚಲಾಯಿಸಿದರು.

    ಬೂತುಗನ್ನಡಿ ಬಳಸಿದ ಸಿಬ್ಬಂದಿ:

    ಕೆಲ ಮತಗಟ್ಟೆ ಕೇಂದ್ರಗಳಲ್ಲಿ ಚುನಾವಣಾ ಸಿಬ್ಬಂದಿಗೆ ನೀಡಲಾಗಿದ್ದ ಮತದಾರರ ಪಟ್ಟಿಯಲ್ಲಿರುವ ಹೆಸರುಗಳು ಸಣ್ಣ ಅಕ್ಷರಗಳಲ್ಲಿದ್ದವು. ಇದರಿಂದ ಅಂತಹ ಬೂತ್‌ಗಳಲ್ಲಿ ಮತದಾನ ಪ್ರಕ್ರಿಯೆ ತುಸು ನಿಧಾನಗೊಂಡಿತು. ಇಂತಹ ಕಡೆಗಳಲ್ಲಿ ಕೆಲ ಸಿಬ್ಬಂದಿ ಬೂತುಗನ್ನಡಿ ಹಿಡಿದು ಮತದಾರರ ಹೆಸರು ಹಾಗೂ ವಯಸ್ಸಿನ ಖಾತರಿಪಡಿಸಿಕೊಂಡು ಮತ ಚಲಾವಣೆಗೆ ಅವಕಾಶ ಮಾಡಿಕೊಟ್ಟರು. ಬ್ಯಾಟರಾಯನಪುರ ಮತಗಟ್ಟೆ ಕೇಂದ್ರದಲ್ಲಿ 8 ಬೂತ್‌ಗಳಿದ್ದು, ಎರಡು ಕಡೆ ಬೂತುಗನ್ನಡಿ ಹಿಡಿದು ಹೆಸರುಗಳನ್ನು ಹುಡುಕಲು ಸಿಬ್ಬಂದಿ ತ್ರಾಸ ಅನುಭವಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts