

ಕಾರ್ಗಲ್: ಜೋಗ-ಕಾರ್ಗಲ್ ಪಟ್ಟಣ ಪಂಚಾಯಿತಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆ ಆ.27ರಂದು ನಡೆಯಲಿದೆ. ಅಂದು ಬೆಳಗ್ಗೆ 11ಕ್ಕೆ ನಾಮಪತ್ರ ಸ್ವೀಕಾರ, 11.30ರಿಂದ 11.45ರವರೆಗೆ ಪರಿಶೀಲನೆ ನಡೆಸಲಾಗುವುದು. ಮಧ್ಯಾಹ್ನ 12ರಿಂದ 12.30ವರೆಗೆ ಮತದಾನ ನಡೆಯಲಿದ್ದು, 1 ಗಂಟೆಯೊಳಗೆ ಫಲಿತಾಂಶ ಪ್ರಕಟಿಸಲಾಗುವುದು.
11 ಸದಸ್ಯ ಬಲದ ಪಪಂನಲ್ಲಿ ಬಿಜೆಪಿ 9, ಕಾಂಗ್ರೆಸ್ 1 ಹಾಗೂ ಓರ್ವ ಪಕ್ಷೇತರ ಸದಸ್ಯ ಇದ್ದಾರೆ. ಅಧ್ಯಕ್ಷ ಸ್ಥಾನ ಎಸ್ಸಿ ಹಾಗೂ ಉಪಾಧ್ಯಕ್ಷ ಸ್ಥಾನ ಬಿಸಿಎಂಎ ಮಹಿಳೆಗೆ ಮೀಸಲಾಗಿದೆ. ಚುನಾವಣಾ ದಿನಾಂಕ ನಿಗದಿಯಾದ ಹಿನ್ನೆಲೆಯಲ್ಲಿ ಸಾರಥಿಗಳು ಯಾರಾಗಲಿದ್ದಾರೆ ಎಂಬ ಚರ್ಚೆ ಆರಂಭವಾಗಿದೆ.
ನಿರೀಕ್ಷೆಯಂತೆ ಬಿಜೆಪಿ ಅಧಿಕಾರ ಹಿಡಿಯುವುದು ಪಕ್ಕಾ ಆಗಿದ್ದು, ಲಲಿತಾ ಮಂಜುನಾಥ್ ಎಸ್ಸಿ ಮೀಸಲಾತಿಯ ಏಕೈಕ ಸದಸ್ಯೆ. ಉಪಾಧ್ಯಕ್ಷ ಸ್ಥಾನದ ಮೀಸಲಾತಿ ಪ್ರಕಾರ ಜಯಲಕ್ಷ್ಮೀ ಮತ್ತು ವಾಸಂತಿ ರಮೇಶ್ ಇಬ್ಬರಿಗೆ ಅವಕಾಶ ಸಿಗಲಿದೆ. ಆದರೆ ವಾಸಂತಿ ರಮೇಶ್‌ಗೆ ಮೊದಲ ಅವಧಿಯಲ್ಲಿ ಅಧ್ಯಕ್ಷ ಸ್ಥಾನ ನೀಡಿದ್ದ ಹಿನ್ನೆಲೆಯಲ್ಲಿ ಜಯಲಕ್ಷ್ಮೀ ಅವರಿಗೆ ಉಪಾಧ್ಯಕ್ಷ ಸ್ಥಾನ ಒಲಿಯುವುದು ಬಹುತೇಕ ಖಚಿತವಾಗಿದೆ.
ಮೊದಲ ಅವಧಿಯಲ್ಲಿ ವಾಸಂತಿ ರಮೇಶ್ ಹಾಗೂ ಉಪಾಧ್ಯಕ್ಷರಾಗಿ ಪಿ.ಮಂಜುನಾಥ್ ಆಡಳಿತ ನಡೆಸಿದ್ದರು. ಎರಡನೇ ಅವಧಿಯಲ್ಲಿ ಮೀಸಲಾತಿ ಪ್ರಕಟಿಸುವುದು ತಡವಾಯಿತು. ಎರಡನೇ ಅವಧಿಯ 30 ತಿಂಗಳ ಪೈಕಿ 16 ತಿಂಗಳು ಈಗಾಗಲೇ ಕಳೆದುಹೋಗಿದೆ. ಹೊಸದಾಗಿ ಆಯ್ಕೆಯಾಗುವ ಅಧ್ಯಕ್ಷರು ಮತ್ತು ಉಪಾಧ್ಯಕ್ಷರಿಗೆ ಅಧಿಕಾರ ಭಾಗ್ಯ ಸಿಗುವುದು ಕೇವಲ 14 ತಿಂಗಳು ಮಾತ್ರ.
ಜೋಗ-ಕಾರ್ಗಲ್ ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ಮತದಾರರು ಜಿಜೆಪಿಗೆ ಸ್ಪಷ್ಟ ಬಹುಮತ ನೀಡಿದ್ದಾರೆ. ಇದೀಗ ಮೀಸಲಾತಿ ಪ್ರಕಾರ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಯಾವುದೇ ಗೊಂದಲವಿಲ್ಲದೆ ಆಯ್ಕೆ ಮಾಡಿ ಎರಡೂ ಸ್ಥಾನವನ್ನು ಉಳಿಸಿಕೊಳ್ಳುತ್ತೇವೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್ ತಿಳಿಸಿದ್ದಾರೆ.