ಪಟಾಕಿ ಗೋದಾಮುಗಳನ್ನು ನಗರದಿಂದ ಸ್ಥಳಾಂತರಿಸಲು ಒತ್ತಾಯ; ಕರವೇದಿಂದ ಮನವಿ ಸಲ್ಲಿಕೆ

3-RNR-06
Published on

ಹಾವೇರಿ: ತಾಲೂಕಿನ ಆಲದಕಟ್ಟಿ ಗ್ರಾಮದಲ್ಲಿ ಸಂಭವಿಸಿದ ಪಟಾಕಿ ಸ್ಪೋಟದಲ್ಲಿ ಮೃತಪಟ್ಟ ಕುಟುಂಬಗಳಿಗೆ ಪರಿಹಾರ ಕಲ್ಪಿಸಬೇಕು. ಪಟಾಕಿ, ಗ್ಯಾಸ ಸಿಲಿಂಡರ್ ಮುಂತಾದ ಸ್ಪೊಟಕ ವಸ್ತುಗಳ ಅಂಗಡಿ, ಖಾರ್ಕಾನೆಗಳನ್ನು ಜನವಸತಿ ಪ್ರದೇಶದಿಂದ ಸ್ಥಳಾಂತರಿಸಲು ಆದೇಶ ಹೊರಡಿಸುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆಯ ಜಿಲ್ಲಾ ಸಮಿತಿಯ ಪದಾಧಿಕಾರಿಗಳು ಶನಿವಾರ ಜಿಲ್ಲಾಧಿಕಾರಿ ರಘುನಂದನ ಮೂರ್ತಿಗೆ ಮನವಿ ಸಲ್ಲಿಸಿದರು.
ಸಂಘಟನೆಯ ಜಿಲ್ಲಾಧ್ಯಕ್ಷ ರಾಮು ತಳವಾರ ಮಾತನಾಡಿ, ಆಲದಕಟ್ಟಿ ಗ್ರಾಮದಲ್ಲಿ ಪಟಾಕಿ ಅಂಗಡಿಯಲ್ಲಿ ಅಗ್ನಿಅವಗಡ ಸಂಭವಿಸಿ ಕಾಟೇನಹಳ್ಳಿ ಗ್ರಾಮದ ಮೂರು ಜನ ಕೂಲಿ ಕಾರ್ಮಿಕರು ಹಾಗೂ ದಾವಣಗೆರೆಯ ಓರ್ವ ವ್ಯಕ್ತಿ ಸೇರಿ ನಾಲ್ಕು ಜನ ಸಾವನ್ನಪ್ಪಿದ್ದಾರೆ. ಸದರಿ ಕೂಲಿಕಾರ್ಮಿಕರು ತುಂಬಾ ಬಡತನದಲ್ಲಿದ್ದು ಇವರನ್ನು ನಂಬಿಕೊಂಡಂತಹ ಕುಟುಂಬದ ಸದಸ್ಯರು ಬೀದಿಯಲ್ಲಿ ನಿಲ್ಲುವ ಸ್ಥಿತಿಯ ನಿರ್ಮಾಣವಾಗಿದೆ. ಕಾರಣ ಪಟಾಕಿ ಅಂಗಡಿಯ ಮಾಲೀಕರಿಂದ ಹಾಗೂ ಸರಕಾರದಿಂದ ಈ ಬಡ ಕುಟುಂಬಗಳಿಗೆ ಸರಕಾರದಿಂದ ಪರಿಹಾರ ದೊರೆಯಬೇಕು. ಅಲ್ಲದೇ ಮೂಲ ಆರೋಪಿತರನ್ನು ಇಲ್ಲಿಯವರೆಗೆ ಬಂಧಿಸಿರುವುದಿಲ್ಲ. ಇವರನ್ನು ಕೂಡಲೇ ಬಂಧಿಸಿ ಬಡ ಕುಟುಂಬಗಳಿಗೆ ನ್ಯಾಯ ಕಲ್ಪಿಸಬೇಕೆಂದು ಅವರು ಆಗ್ರಹಿಸಿದರು.
ಜಿಲ್ಲಾ ಗೌರವಾಧ್ಯಕ್ಷ ಎಂ.ಕೆ. ತಿಮ್ಮಾಪುರ ಮಾತನಾಡಿ, ಪಟಾಕಿ ಅಂಗಡಿಗಳು, ಗ್ಯಾಸ ಸಿಲಿಂಡರ್ ಅಂಗಡಿಗಳು ಹಾಗೂ ಇತರೆ ಸ್ಪೋಟಕ ಕಾರ್ಖಾನೆಗಳು ಸೇರಿದಂತೆ ಸ್ಪೊಟಕ ಸಾಮಗ್ರಿಗಳ ಅಂಗಡಿಗಳನ್ನು ಜನವಸತಿ ಪ್ರದೇಶದಿಂದ ದೂರಕ್ಕೆ ಸ್ಥಾಳಾಂತರಿಸಲು ಈ ಕೂಡಲೆ ಕಟ್ಟುನಿಟ್ಟಾಗಿ ಆದೇಶ ಹೊರಡಿಸಬೇಕು. ಅಲ್ಲದೇ ಮೃತ ಕುಟುಂಬಗಳ ಮನೆಗೆ ತೆರಳಿ ಸಾಂತ್ವಾನ ಹೇಳಿ ಅವರ ಸ್ಥಿತಿಗಳ ಅಧ್ಯಯನ ನಡೆಸಿ ಸಂಬಂಧಿಸಿದ ಪಟಾಕಿ ಅಂಗಡಿಯ ಮಾಲೀಕರಿಂದ ಹಾಗೂ ಸರ್ಕಾರದಿಂದ ಪರಿಹಾರ ಕಲ್ಪಿಸಲು ಅವರು ಒತ್ತಾಯಿಸಿದರು.
ಪ್ರಮುಖರಾದ ಸುಮಾ ಪುರದ, ಗೌರಮ್ಮ ಕುಲಕರ್ಣಿ, ಮಂಜುನಾಥ ದಾನಪ್ಪನವರ, ಚನ್ನಬಸಪ್ಪ ಸೋಮಸಾಗರ, ಶಿವಪ್ಪ ಬಳಲಕೊಪ್ಪದ, ಸುಶೀಲಾಬಾಯಿ ಅರ್ಕಸಾಲಿ, ಶೋಭಾ ಹಳಕಟ್ಟಿ, ನಿರ್ಮಲಾ ಶೀಲವಂತರ, ನೀಲಮ್ಮ ರಟಗೋಳಪ್ಪನವರ, ಸೈನಾಜ್ ಮುಲ್ಲಾ, ಹಜರತ್ ದೊಡ್ಡಮನಿ ಮತ್ತಿತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net