ಬೆಂಗಳೂರು:
ಕರಾವಳಿ ಭಾಗದಲ್ಲಿರುವ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿ ಕೆಲಸ ಮಾಡುವಂತೆ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ವಿಕಾಸಸೌಧದಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಲಾಯಿತು.
ಕಡಲಕೊರೆತಕ್ಕೆ ಇರುವ ಅನುದಾನ ಸಾಕಾಗುವುದಿಲ್ಲ. ಹೆಚ್ಚಿನ ಅನುದಾನ ಲಭ್ಯವಾದರೆ ಮಾತ್ರ ಇನ್ನು ಹೆಚ್ಚು ಕೆಲಸ ಮಾಡಲು ಸಾಧ್ಯ ಎನ್ನುವುದನ್ನು ಸಭೆಯಲ್ಲಿ ಸಚಿವರುಗಳ ಗಮನಕ್ಕೆ ತರಲಾಯಿತು.
ಕರಾವಳಿ ಭಾಗದಲ್ಲಿ ಕಡಲ ಕೊರೆತ ಸಮಸ್ಯೆ ಗಂಭೀರವಾಗಿದ್ದು, ಈ ಬಗ್ಗೆ ಪ್ರಸ್ತಾವನೆಯನ್ನು ಸಿದ್ಧಪಡಿಸಿ ಸರ್ಕಾರಕ್ಕೆ ಕಳುಹಿಸುವಂತೆ ಸ್ಪೀಕರ್ ಯು.ಟಿ.ಖಾದರ್ ಅವರು ಸೂಚಿಸಿದರು. ಈ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗುವುದಾಗಿ ಸಚಿವ ಮಂಕಳ ವೈದ್ಯ ಸಭೆಗೆ ತಿಳಿಸಿದರು.
ಮರಳು ನೀತಿಯದ್ದೆ ದೊಡ್ಡ ಸಮಸ್ಯೆಯಾಗಿದ್ದು, ಜನರಿಗೆ ಸಮಸ್ಯೆಯಾಗುತ್ತಿದೆ. ಈಗ ಇರುವ ಗೊಂದಲಗಳನ್ನು ನಿವಾರಣೆ ಮಾಡಿ ಎಲ್ಲವನ್ನೂ ಸರಳೀಕರಣ ಮಾಡಬೇಕು ಎಂದು ಸ್ಪೀಕರ್ ಯು.ಟಿ.ಖಾದರ್ ವಿಷಯ ಪ್ರಸ್ತಾಪಿಸಿದರು.
ಕಾರವಾರದಲ್ಲಿ ಈ ಮೊದಲು ಇದ್ದ ಮರಳು ಗಣಿಗಾರಿಕೆ ಸಮಸ್ಯೆ ಬಗೆಹರಿದಿದೆ. ಅದೇ ಮಾದರಿಯ ನೀತಿಯನ್ನ ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೂ ಅಳವಡಿಸಿಕೊಳ್ಳಬಹುದು ಎನ್ನುವ ಅಭಿಪ್ರಾಯ ಹಿನ್ನೆಲೆಯಲ್ಲಿ ಈ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಜಿಲ್ಲಾ ಉಸ್ತುವಾರಿ ಸಚಿವರು ತಿಳಿಸಿದರು.
ನಗರ ಯೋಜನಾ ಇಲಾಖೆಯ ಬಿಲ್ಡಿಂಗ್ ಬೈಲಾಸ್ ಮತ್ತು ರೆನಲ್ ರೆಗ್ಯೂಲೇಶನ್ ಅಂತಿಮಗೊಳಿಸುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಾಯಿತು.
ನೋಂದಣಿ ಮೌಲ್ಯಮಾಪನ ವಿಧಾನ ಬಗ್ಗೆ, ಬಂದರು ಮತ್ತು ಮೀನುಗಾರರ ಸಮಸ್ಯೆ ಹಾಗೂ ಸ್ಪಾರ್ಟ್ ಸಿಟಿ ವಿಷಯ ಬಗ್ಗೆ ಸಭೆಯಲ್ಲಿ ಚರ್ಚೆ ಮಾಡಲಾಯಿತು.
ಸಭೆಯಲ್ಲಿ ಸ್ಪೀಕರ್ ಯು.ಟಿ.ಖಾದರ್, ಸಚಿವರಾದ ದಿನೇಶ್ ಗುಂಡೂರಾವ್, ಮಂಕಳ ವೈದ್ಯ ಹಾಜರಿದ್ದರು.