

ನಾಗಪುರ: ಶಿವಸೇನಾ ನಾಯಕ ನಿತಿನ್ ನಂದಗಾಂವ್ಕರ್ ಫೇಸ್ಬುಕ್ ವಿಡಿಯೋದಲ್ಲಿ 'ಕರಾಚಿ ಸ್ವೀಟ್ಸ್/ಕರಾಚಿ ಬೇಕರಿ' ಹೆಸರು ಬದಲಾಯಿಸುವಂತೆ 15 ದಿನಗಳ ಗಡುವು ನೀಡಿರುವುದು ರಾಜಕೀಯವಾಗಿ ಸದ್ದು ಉಂಟುಮಾಡಿದೆ. ಅವರ ವಿಡಿಯೋ ಅಪ್ಲೋಡ್ ಆದ ಕೆಲವೇ ಗಂಟೆಗಳಲ್ಲಿ ಶಿವಸೇನೆ ಅದು ಪಕ್ಷದ ನಿಲುವಲ್ಲ, ನಿತಿನ್ ಅವರ ವೈಯಕ್ತಿಕ ನಿಲುವು ಎಂದು ಅಂತರ ಕಾಯ್ದುಕೊಂಡಿತ್ತು.
ಈ ಬಗ್ಗೆ ಮಹಾರಾಷ್ಟ್ರದ ಮಾಜಿ ಸಿಎಂ ದೇವೇಂದ್ರ ಫಡ್ನಾವೀಸ್ ಪ್ರತಿಕ್ರಿಯಿಸಿದ್ದು, 'ಕರಾಚಿ'ಯೂ ಭಾರತದ ಭಾಗವಾಗಲಿದೆ ಎಂದು ವಿರೋಧಿಗಳ ಕಣ್ಣು ಕೆಂಪಾಗುವಂತೆ ಮಾಡಿದ್ದಾರೆ. ನಿತಿನ್ ಗಾಂವ್ಕರ್ ಮುಂಬೈನ ಬಾಂದ್ರಾದಲ್ಲಿರುವ ಕರಾಚಿ ಸ್ವೀಟ್ಸ್ ಶಾಪ್ಗೆ ತೆರಳಿ ಕರಾಚಿ ಪಾಕಿಸ್ಥಾನದ ನಗರವಾಗಿದ್ದು, ಅದನ್ನು ಬದಲಾಯಿಸಿ ಎಂದು ಹದಿನೈದು ದಿನಗಳ ಗಡುವು ನೀಡಿದ್ದು ವಿಡಿಯೋದಲ್ಲಿ ದಾಖಲಾಗಿದೆ.
ಈ ವಿಚಾರವಾಗಿ ಪ್ರತಿಕ್ರಿಯಿಸಿದ ದೇವೇಂದ್ರ ಫಡ್ನಾವೀಸ್, ಅಖಂಡ ಭಾರತದ ಪರಿಕಲ್ಪನೆಯಲ್ಲಿ ನಂಬಿಕೆ ಉಳ್ಳವರು ನಾವು. ಅದೇ ರೀತಿ ಕರಾಚಿಯೂ ಭಾರತದ ಭಾಗವಾಗಿರಲಿದೆ ಎಂದೂ ನಂಬಿದ್ದೇವೆ ಎಂದು ಕುಟುಕು ಪ್ರತಿಕ್ರಿಯೆ ನೀಡಿ ಗಮನಸೆಳೆದ್ದಿದ್ದಾರೆ. (ಏಜೆನ್ಸೀಸ್)