

Kantara Chapter 1: ಜಾಗತಿಕವಾಗಿ ತೆರೆಕಂಡ ಎರಡೇ ದಿನಗಳಲ್ಲಿ 100 ಕೋಟಿ ಕ್ಲಬ್ ಸೇರಿದ ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿದ 'ಕಾಂತಾರ ಚಾಪ್ಟರ್ 1' ಚಿತ್ರಕ್ಕೆ ಇದೀಗ ಎಲ್ಲೆಡೆಯಿಂದ ವಿಶೇಷ ಮನ್ನಣೆ ಲಭಿಸುತ್ತಿದೆ. ಸಿನಿಪ್ರೇಕ್ಷಕರಿಗೆ ರೋಮಾಂಚನಕಾರಿ ಅನುಭವವನ್ನು ನೀಡಿರುವ ರಿಷಬ್, ನಮ್ಮ ನಾಡಿನ ಮಣ್ಣಿನ ಕಥೆಯನ್ನು ವಿಶ್ವಕ್ಕೆ ಪಸರಿಸಿರುವುದು ಚಿತ್ರದ ಗೆಲುವಿಗೆ ದೊಡ್ಡ ಸಾಕ್ಷಿಯಾಗಿ ನಿಂತಿದೆ. ಬ್ಲಾಕ್ಬಸ್ಟರ್ನತ್ತ ಸಾಗುತ್ತಿರುವ ಕಾಂತಾರ ಕುರಿತು ಮಲಯಾಳಂ ನಟ ಜಯರಾಂ ಸಂತಸ ವ್ಯಕ್ತಪಡಿಸಿದ್ದಾರೆ.
ತಮ್ಮ ಅದ್ಭುತ ಅಭಿನಯದಿಂದ ಪ್ರೇಕ್ಷಕರನ್ನು ಬೆರಗುಗೊಳಿಸಿರುವ ನಟ ಜಯರಾಮ್, ಮಲಯಾಳಂ ಚಿತ್ರದ ಸೆಟ್‌ನಲ್ಲಿ ಕೇಕ್ ಕತ್ತರಿಸುವ ಮೂಲಕ 'ಕಾಂತಾರ' ಯಶಸ್ಸನ್ನು ಸಂಭ್ರಮಿಸಿದ್ದಾರೆ. ಈ ವೇಳೆ ಮಾತನಾಡಿರುವ ಅವರು, "ನಾನು ನಟಿಸಿದ ಕನ್ನಡ ಸಿನಿಮಾ ಬಗ್ಗೆ ನನಗೆ ಅತೀವ ಸಂತಸವಿದೆ. ಚಿತ್ರದಲ್ಲಿನ ನನ್ನ ಅಭಿನಯ ಕಂಡ ಮಾಲಿವುಡ್ ಹಿರಿಯ ನಟ ಮಮ್ಮುಟ್ಟಿ ಅವರೇ ಸ್ವತಃ ನನ್ನನ್ನು ಹೊಗಳಿದರು. ಅವರಿಂದ ಬಂದ ಅಭಿನಂದನಾ ಸಂದೇಶ ನಿಜಕ್ಕೂ ಖುಷಿ ನೀಡಿದೆ" ಎಂದರು.
"ನಿಮ್ಮ ಜೊತೆ ಮಾತನಾಡುವ ಕೇವಲ ಒಂದು ನಿಮಿಷದ ಹಿಂದಷ್ಟೇ, ನನ್ನ ಫೋನ್‌ಗೆ ಒಂದು ಮಸೇಜ್ ಬಂದಿತು. ಅದನ್ನು ನೋಡಿದಾಗ, ಅದು ಮಮ್ಮುಟ್ಟಿ ಅವರಿಂದ ಬಂದ ಸಂದೇಶ ಎಂದು ತಿಳಿಯಿತು. ಕೂಡಲೇ ಓದಿದೆ. ಅದರಲ್ಲಿ ಅವರು, ಕಾಂತಾರ ಚಿತ್ರವನ್ನು ವೀಕ್ಷಿಸಿದೆ. ಬಹಳ ಚೆನ್ನಾಗಿ ಮೂಡಿಬಂದಿದೆ ಎಂದು ನನ್ನ ನಟನೆಯನ್ನು ಹೊಗಳಿದರು" ಎಂದು ಹೇಳಿದರು.
"ರಿಷಭ್ ನನಗೆ ಮೊದಲ ಬಾರಿಗೆ ಕರೆ ಮಾಡಿದ ದಿನ ಈಗಲೂ ನನಗೆ ನೆನಪಿದೆ. ಸಂಭಾಷಣೆ ನಡೆಸಿದಾಗ, ರಿಷಬ್ ಅವರು ತಾವು ಕಾಸರಗೋಡು ಗಡಿಯ ಬಳಿ ಹಲವು ವರ್ಷಗಳ ಕಾಲ ಹೇಗೆ ವಾಸಿಸುತ್ತಿದ್ದರು ಎಂಬುದರ ಕುರಿತು ಮಾತನಾಡಿದರು. ಅವರು ಮಲಯಾಳಂ ಸಿನಿಮಾಗಳನ್ನು ನೋಡುತ್ತಾ ಬೆಳೆದರು, ಹೆಚ್ಚಾಗಿ ಮಮ್ಮುಟ್ಟಿ, ಮೋಹನ್ ಲಾಲ್ ಮತ್ತು ನನ್ನ ಚಿತ್ರಗಳನ್ನು ನೋಡಿದ್ದಾಗಿ ಹೇಳಿದರು. ಅವರು ನನ್ನ ಹೆಸರನ್ನು ಹೇಳಿದಾಗ ಒಂದು ನಿಮಿಷ ನನಗೇ ಆಶ್ಚರ್ಯವಾಯಿತು. ನಂತರದಲ್ಲಿ, ಕಾಂತಾರ ಕಥೆಯನ್ನು ಕೇಳಿದೆ. ಸ್ಕ್ರಿಪ್ಟ್ ಕೇಳಿದ ಕೂಡಲೇ ಹೊರಬಂದು ಪತ್ನಿಗೆ ಕರೆಮಾಡಿ, ಕಥೆ ತುಂಬ ಬಲಿಷ್ಠವಾಗಿದೆ. ನನ್ನಲ್ಲಿನ ಉತ್ಸುಕತೆ ಹೆಚ್ಚಾಗುತ್ತಿದೆ. ಈ ಚಿತ್ರದಲ್ಲಿ ನಾನು ನಟಿಸುವೆ" ಎಂದು ಒಪ್ಪಿಕೊಂಡಿದ್ದಾಗಿ ಹೇಳಿಕೊಂಡಿದ್ದಾರೆ,(ಏಜೆನ್ಸೀಸ್).