

ಬೆಂಗಳೂರು: ಜಗತ್ತಿನಾದ್ಯಂತ ವಿಜಯ ಪತಾಕೆ ಹಾರಿಸಿದ್ದ ಕಾಂತಾರ, ಅನೇಕ ವಿಚಾರಗಳಿಗೆ ಆಗಾಗ ಸುದ್ದಿ ಆಗುತ್ತಲೇ ಇರುತ್ತದೆ. ಒಮ್ಮೆ ವರಾಹರೂಪಂ ಹಾಡಿನ ಬಗ್ಗೆ ಕಿರಿಕ್ ಆದರೆ ಇನ್ನೊಮ್ಮೆ ಜಯಾ ಬಚ್ಚನ್, ರಿಷಭ್ ಶೆಟ್ರ ಪಂಚೆಯ ಬಗ್ಗೆ ಮಾತನಾಡುತ್ತಾರೆ. ಮತ್ತೊಮ್ಮೆ, ಅನುರಾಗ್ ಕಶ್ಯಪ್ರಂತಹ ಹೆಸರುವಾಸಿ ನಿರ್ದೇಶಕರು ಕಾಂತಾರದ ಕಾರಣ ಬಾಲಿವುಡ್ ಸಾಯುತ್ತಿದೆ ಎನ್ನುತ್ತಾರೆ.
ಆದರೆ ಈಗ ನಡೆದಿರುವ ಸುದ್ದಿ ಬೇರೆಯದೇ ರೀತಿಯದ್ದು. ಕಾಂತಾರದಲ್ಲಿ ಮುರಳೀಧರ ಪಾತ್ರಕ್ಕೆ ಬಣ್ಣ ಹಚ್ಚಿದ್ದ ಕಿಶೋರ್ ಅವರ ಟ್ವಿಟರ್ ಖಾತೆ ಸಸ್ಪೆಂಡ್ ಆಗಿದೆ. ಈ ಬಗ್ಗೆ ಎಸ್ ಶ್ಯಾಮ್ ಪ್ರಸಾದ್ ಎನ್ನುವವರು ಟ್ವೀಟ್ ಮಾಡಿದ್ದಾರೆ. ಈಗ ಕೀಶೋರ್ರ ಟ್ವಿಟರ್ ಖಾತೆಗೆ ಹೋದರೆ, ಟ್ವಿಟರ್ ನಿಯಮಗಳನ್ನು ಉಲ್ಲಂಘಿಸಿದ್ದಕ್ಕೆ ಖಾತೆಯನ್ನು ನಿಷ್ಕ್ರಿಯ ಮಾಡಲಾಗಿದೆ ಎಂದು ಬರುತ್ತಿದೆ.
ಈ ಬಗ್ಗೆ ಎಸ್ ಶ್ಯಾಮ್ ಪ್ರಸಾದ್ರ ಟ್ವೀಟ್ಗೆ ಜನರು ತರಹೇವಾರಿಯಾಗಿ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಒಬ್ಬರು 'ಟ್ವಿಟರ್ಗೆ ಟೇಸ್ಟೇ ಇಲ್ಲ' ಎಂದರೆ, ಇನ್ನೊಬ್ಬರು 'ನಂದಿನಿ ಹಾಲಿನ ಬಗ್ಗೆ ಮಾತಾಡ್ತಾನೆ ಅಂತಲಾ' ಎಂದು ಪ್ರಶ್ನಿಸಿದ್ದಾರೆ.
ಇನ್ನೊಬ್ಬರು ಕಿಶೋರ್ ಖಾಸಗಿಕರಣದ ವಿರುದ್ಧ ಧ್ವನಿ ಎತ್ತುತ್ತಾರೆ ಎಂದು ಅವರ ಖಾತೆಯನ್ನು ಸಸ್ಪೆಂಡ್ ಮಾಡಲಾಗಿದೆ ಎಂದಿದ್ದಾರೆ. ಒಟ್ಟಿನಲ್ಲಿ ಈ ಬಗ್ಗೆ ಜನರಿಂದ ಆಕ್ರೋಶ ವ್ಯಕ್ತವಾಗಿದೆ ಎನ್ನಬಹುದು.