

ಬೆಂಗಳೂರು: ಕಾರ್ಮಿಕರ ಪರ ಹೋರಾಟಗಾರ, ಮಾಜಿ ಸಚಿವ ಎಸ್.ಕೆ.ಕಾಂತ ಅವರು ರಾಜ್ಯಮಟ್ಟದ ಡಿ.ದೇವರಾಜ ಅರಸು ಪ್ರಶಸ್ತಿ ಜತೆಗೆ ನಗದು ರೂಪದಲ್ಲಿ ತಮಗೆ ನೀಡಿದ ಐದು ಲಕ್ಷ ರೂ.ಗಳನ್ನು ಅಸಂಘಟಿತ ಕಾರ್ಮಿಕರ ಕಲ್ಯಾಣ ಮಂಡಳಿಗೆ ಕಾಣಿಕೆಯಾಗಿ ಅರ್ಪಿಸಿದರೆ, ನೆರೆದ ಜನಸ್ತೋಮ ಚಪ್ಪಾಳೆ ತಟ್ಟಿ, ಪ್ರಶಂಸೆಯ ಹರ್ಷೋದ್ಗಾರ ಮಾಡಿತು.
ವಿಧಾನಸೌಧ ಬ್ಯಾಂಕ್ವೆಟ್ ಹಾಲ್ ನಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮಂಗಳವಾರ ಏರ್ಪಡಿಸಿದ್ದ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು 109ನೇ ಜಯಂತಿ ಹಾಗೂ ಡಿ.ದೇವರಾಜ ಅರಸು ರಾಜ್ಯಮಟ್ಟದ 2024ನೇ ಸಾಲಿನ ಪ್ರಶಸ್ತಿ ಪ್ರದಾನ ಸಮಾರಂಭ ಮೇಲ್ಪಂಕ್ತಿಯಾಯಿತು.
ಕಾರ್ಮಿಕರ ಹಿರಿಯ ನಾಯಕ, ಹೋರಾಟಗಾರ, ಮಾಜಿ ಎಸ್.ಕೆ.ಕಾಂತ ಅವರಿಗೆ ಡಿ.ದೇವರಾಜ ಅರಸು ರಾಜ್ಯಮಟ್ಟದ ಪ್ರಶಸ್ತಿ, ಐದು ಲಕ್ಷ ರೂ.ಗಳ ಚೆಕ್, ಪ್ರಶಂಸಾಪತ್ರ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಶಾಲು ಹೊದಿಸಿ, ರೇಷ್ಮೆ ಹಾರ ಹಾಕಿ ಮೈಸೂರು ಪೇಟ ತೊಡಿಸಿ ಸನ್ಮಾನಿಸಿ ಗೌರವಿಸಿದರು.
ಪ್ರಶಸ್ತಿ ಸ್ವೀಕರಿಸಿದ ಎಸ್.ಕೆ.ಕಾಂತ ಮಾತನಾಡಿ ಎಲ್ಲೋ ಮೂಲೆಯಲ್ಲಿದ್ದ ತಮ್ಮನ್ನು ಸರ್ಕಾರ ಗುರುತಿಸಿ, ಅರಸು ಹೆಸರಿನ ರಾಜ್ಯಮಟ್ಟದ ಪ್ರಶಸ್ತಿ ಪ್ರದಾನ ಮಾಡಿದ್ದಕ್ಕೆ ಕೃತಜ್ಞತೆ ಸಲ್ಲಿಸಿದರು. ನಾನು ಸಣ್ಣವ, ಈ ಪ್ರಶಸ್ತಿಗೆ ಅರ್ಹನೋ ಅಲ್ಲವೋ ಗೊತ್ತಿಲ್ಲ. ಅರಸು ಅವರು 70ರ ದಶಕದಲ್ಲಿ ಕೆಟ್ಟ ವ್ಯವಸ್ಥೆಯನ್ನು ಎದುರು ಹಾಕಿಕೊಂಡು ದೇಶಕ್ಕೆ ಮಾದರಿಯಾಗುವ ನೀತಿ ಜಾರಿಗೊಳಿಸಿದರು ಎಂದು ಗುಣಗಾನ ಮಾಡಿದರು.
ಅಲ್ಲದೆ, ಪ್ರಶಸ್ತಿ ಜತೆಗೆ ಕೊಡಮಾಡಿರುವ ಐದು ಲಕ್ಷ ರೂ.ಗಳ ಕಾಣಿಕೆಯನ್ನು ಸರ್ಕಾರಕ್ಕೆ ಹಿಂತಿರುಗಿಸುವೆ. ಈ ಮೊತ್ತವನ್ನು ಅಸಂಘಟಿತ ಕಾರ್ಮಿಕರ ಕಲ್ಯಾಣ ಮಂಡಳಿಗೆ ಬಳಸಿಕೊಳ್ಳಲು ವಿನಮ್ರವಾಗಿ ಕೇಳಿಕೊಳ್ಳುವೆ ಎಂದು ಕಾಂತ ಹೇಳಿದಾಗ ಸಭಾಂಗಣದಲ್ಲಿ ಕರತಾಡನದ ಸುರಿಮಳೆಯಾಯಿತು.