ಕಾರು ಒರಗಿಕೊಂಡು ನಿಂತಿದ್ದ ಬಾಲಕನಿಗೆ ಜಾಡಿಸಿ ಒದ್ದ ಯುವಕ: ದರ್ಪ ಮೆರೆದವನಿಗೆ ಮರು ಕ್ಷಣವೇ ಶಾಕ್​!

Kerala Boy
Published on

ಕಣ್ಣೂರು: ಮಾನವೀಯತೆಯನ್ನು ಅಣುಕಿಸುವಂತೆ ಘಟನೆ ಕೇರಳದ ಥಲಸ್ಸೆರಿಯಲ್ಲಿ ಗುರುವಾರ ಬೆಳಕಿಗೆ ಬಂದಿದೆ. ಯುವಕನೊಬ್ಬ ಆರು ವರ್ಷದ ಬಾಲಕನ ಮೇಲೆ ಮೃಗೀಯವಾಗಿ ಹಲ್ಲೆ ಮಾಡಿರುವ ಶಾಕಿಂಗ್​ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ವಿಡಿಯೋದಲ್ಲಿ ಕಾರನ್ನು ಒರಗಿಕೊಂಡಿದ್ದ ಬಾಲಕನಿಗೆ ಪೊನ್ನಿಯಾಂಪಲಂ ನಿವಾಸಿ ಸಿಶಾದ್​ ಎಂಬಾತ ಬಲವಾಗಿ ಜಾಡಿಸಿ, ಒದ್ದಿರುವಂತಹ ಆಘಾತಕಾರಿ ದೃಶ್ಯವಿದೆ. ಸಿಸಿಟಿವಿಯಲ್ಲಿ ಈ ದೃಶ್ಯ ಸೆರೆಯಾಗಿದ್ದು, ವಿಡಿಯೋ ತುಣುಕು ಜಾಲತಾಣದಲ್ಲಿ ಹರಿದಾಡುತ್ತಿದ್ದಂತೆ ಪ್ರಕರಣ ಬೆಳಕಿಗೆ ಬಂದಿದೆ.

ವಿಡಿಯೋವನ್ನು ಗಂಭೀರವಾಗಿ ಪರಿಗಣಿಸಿರುವ ಕೇರಳ ಪೊಲೀಸರು ಆರೋಪಿ ಸಿಶಾದ್​ನನ್ನು ಬಂಧಿಸಿದ್ದಾರೆ. ಕೊಲೆ ಯತ್ನ ಪ್ರಕರಣ ಸೇರಿದಂತೆ ಆತನ ಮೇಲೆ ಜಾಮೀನು ರಹಿತ ಪ್ರಕರಣ ದಾಖಲಿಸಿರುವುದಾಗಿ ತಿಳಿಸಿದ್ದಾರೆ. ಅಲ್ಲದೆ, ಕಾರನ್ನು ಸಹ ಸೀಜ್​ ಮಾಡಲಾಗಿದೆ.

ಆರೋಪಿ ಸಿಶಾದ್​, ರಾಜಸ್ಥಾನ ಮೂಲದ ಗಣೇಶ್​ (6) ಎಂಬುವನ ಮೇಲೆ ಹಲ್ಲೆ ಮಾಡಿದ್ದಾನೆ. ರಸ್ತೆ ಪಕ್ಕ ನಿಲ್ಲಿಸಿದ್ದ ಕಾರಿಗೆ ಬಾಲಕ ಒರಗಿಕೊಂಡಿದ್ದ. ಈ ವೇಳೆ ಸಿಶಾದ್​ ಜೋರಾಗಿ ಒದ್ದಿದ್ದಾನೆ. ಇದರಿಂದ ಬಾಲಕನ ಬೆನ್ನಿಗೆ ಗಾಯವಾಗಿದೆ. ಈ ವೇಳೆ ಸಿಶಾದ್​ ಜೊತೆ ಓರ್ವ ಮಹಿಳೆಯು ಸಹ ಇದ್ದಳು. ಇಷ್ಟೆಲ್ಲ ಆದರೂ ಬಾಲಕನನ್ನು ಸಂತೈಸದೇ ಆಕೆ ಕಾರು ಹತ್ತಿ ಕುಳಿತಳು.

ಕೆಲವು ಮಂದಿ ಸಿಶಾದ್​ ಕೃತ್ಯವನ್ನು ನೋಡಿ, ಆತನ ಬಳಿ ಧಾವಿಸಿ ಪ್ರಶ್ನೆ ಮಾಡಿದರು. ಆದರೆ, ತನ್ನನ್ನು ತಾನು ಸಮರ್ಥನೆ ಮಾಡಿಕೊಂಡ ಸಿಶಾದ್​, ಅಲ್ಲಿಂದ ಕಾಲ್ಕಿತ್ತಿದ್ದ. ಬಾಲಕ ಗಣೇಶ್ ಕೇರಳಕ್ಕೆ ಉದ್ಯೋಗ ಅರಸಿ ವಲಸೆ ಬಂದ ಕುಟುಂಬದ ಸದಸ್ಯ.

ಈ ಘಟನೆ ಕುರಿತು ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಕೆ.ವಿ.ಮನೋಜ್ ಕುಮಾರ್ ಪ್ರತಿಕ್ರಿಯಿಸಿ, ಆಯೋಗ ಮಧ್ಯಪ್ರವೇಶಿಸಿ ವರದಿ ಒಡೆಯಲಿದೆ ಎಂದು ತಿಳಿಸಿದರು. ಅಗತ್ಯಬಿದ್ದರೆ ಆಯೋಗವು ಬಾಲಕನಿಗೆ ವೈದ್ಯಕೀಯ ಸೇವೆ ನೀಡಲು ವ್ಯವಸ್ಥೆ ಮಾಡಲಿದೆ ಎಂದು ಹೇಳಿದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net