ಕನ್ನೆಹಳ್ಳಿ - ಅಂಗಡಿ ರಸ್ತೆಯಲ್ಲಿ ಬಾಳೆಗಿಡ ನೆಟ್ಟು ಪ್ರತಿಭಟನೆ

D 25 MDG 2P1
ಮೂಡಿಗೆರೆಯ ಕಿರುಗುಂದ, ಕನ್ನೆಹಳ್ಳಿ ರಸ್ತೆ ಕಾಮಗಾರಿ ಕಳಪೆಯಾಗಿದೆ ಎಂದು ಆರೋಪಿಸಿ ಗ್ರಾಮಸ್ಥರು ಬಾಳೆಗಿಡ ನೆಟ್ಟು ಪ್ರತಿಭಟನೆ ನಡೆಸಿದರು.
Published on

ಮೂಡಿಗೆರೆ: ಕಿರುಗುಂದ ಗ್ರಾಮದ ಮುಖ್ಯರಸ್ತೆಯಿಂದ ಕನ್ನೆಹಳ್ಳಿ ಮೂಲಕ ಅಂಗಡಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ 9 ಕಿ.ಮೀ. ನೂತನ ರಸ್ತೆ 4 ತಿಂಗಳಲ್ಲೇ ಡಾಂಬರ್ ಕಿತ್ತು ಗುಂಡಿಯಾಗಿದೆ ಎಂದು ಆರೋಪಿಸಿ ಕಿರುಗುಂದ ಗ್ರಾಮಸ್ಥರು ಶುಕ್ರವಾರ ರಸ್ತೆ ಗುಂಡಿಗೆ ಬಾಳೆ ಗಿಡ ನೆಟ್ಟು ಪ್ರತಿಭಟನೆ ನಡೆಸಿದರು.
ಗ್ರಾಮಸ್ಥ ಹರಿಭಾರ್ಗವ ಮಾತನಾಡಿ, 2020ರಲ್ಲಿ 9 ಕಿ.ಮೀ. ರಸ್ತೆ ನಿರ್ಮಾಣಕ್ಕೆ ಸರ್ಕಾರ 8 ಕೋಟಿ ರೂ. ಅನುದಾನ ಬಿಡುಗಡೆ ಮಾಡಿತ್ತು. 2021ರಲ್ಲಿ ಅಂದಿನ ಶಾಸಕ ಎಂ.ಪಿ.ಕುಮಾರಸ್ವಾಮಿ ರಸ್ತೆ ಕಾಮಗಾರಿಗೆ ಶಂಕಸ್ಥಾಪನೆ ನೆರವೇರಿಸಿದ್ದರೂ ಕೂಡ 1ವರ್ಷ ಕಾಮಗಾರಿ ಆರಂಭಿಸಿರಲಿಲ್ಲ. ನಂತರ ಗ್ರಾಮಸ್ಥರ ಒತ್ತಡಕ್ಕೆ ಮಣಿದ ಗುತ್ತಿಗೆದಾರ 2022ರಲ್ಲಿ ನಿಧಾನಗತಿಯಲ್ಲಿ ಕಾಮಗಾರಿ ಆರಂಭಿಸಿ ಈ ವರ್ಷದ ಏಪ್ರಿಲ್ ನಲ್ಲಿ ಕಾಮಗಾರಿ ಪೂರ್ಣಗೊಳಿಸಿದ್ದಾರೆ ಎಂದರು.
ಈ ಬಾರಿ ಮಳೆ ಕಡಿಮೆಯಾಗಿದೆ. ಸಣ್ಣ ಮಳೆಗೆ ಹೊಸ ಡಾಂಬಾರ್ ಕಿತ್ತು ಹೋಗಿ ಗುಂಡಿಯಾಗಿದೆ. ಕಾಮಗಾರಿ ಕಳಪೆಯಾಗಿದ್ದು, 3 ತಿಂಗಳಲ್ಲಿ ಈ ರಸ್ತೆಯಲ್ಲಿ ಜನ ತಿರುಗಾಡಲಾಗದ ಪರಿಸ್ಥಿತಿ ನಿರ್ಮಾಣವಾಗಲಿದೆ. ದೊಡ್ಡ ಮೊತ್ತದ ಅನುದಾನ ನೀರಿನಲ್ಲಿ ಹೋಮ ಮಾಡಿದಂತಾಗಿದೆ. ಕಳಪೆ ಕಾಮಗಾರಿ ನಡೆಸಿದ ಗುತ್ತಿಗೆದಾರನನ್ನು ಕಪ್ಪುಮಟ್ಟಿಗೆ ಸೇರಿಸಬೇಕೆಂದು ಒತ್ತಾಯಿಸಿದರು.
ಗ್ರಾಮಸ್ಥ ಪ್ರಕಾಶ್ ಮಾತನಾಡಿ, ಕಿರುಗುಂದ ಗ್ರಾಮ ಕೇಂದ್ರ ಸ್ಥಾನದಿಂದ ಪರಿಶಿಷ್ಟ ಬಡಾವಣೆಗೆ ತೆರಳುವ ಈ ಮುಖ್ಯ ರಸ್ತೆ ಕಜ್ಜೇಹಳ್ಳಿ, ಕನ್ನೆಹಳ್ಳಿ, ಜಾಣಿಗೆ ಗ್ರಾಮದ ಮೂಲಕ ಅಂಗಡಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುತ್ತದೆ. ಪ್ರತಿದಿನ ಈ ರಸ್ತೆಯಲ್ಲಿ ನೂರಾರು ವಾಹನಗಳು ಸಂಚರಿಸುತ್ತದೆ. ವಿದ್ಯಾರ್ಥಿಗಳು ಕಾಲ್ನಡಿಗೆಯಲ್ಲಿ ಮುಖ್ಯರಸ್ತೆವರೆಗೂ ತೆರಳಿ ಹಾನುಬಾಳು, ಸಕಲೇಶಪುರ, ಜನ್ನಾಪುರ, ಮೂಡಿಗೆರೆಗೆ ಈ ರಸ್ತೆಯಲ್ಲಿ ತೆರಳಬೇಕಿದೆ. ಈ ಮಾರ್ಗದಲ್ಲಿ ಕೆಎಸ್‌ಆರ್‌ಟಿಸಿ ಬಸ್ ಸಂಚಾರ ಆರಂಭಿಸಲು ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ. ಆದರೆ ಕಳಪೆ ಕಾಮಗಾರಿಯಿಂದ ಈಗಾಗಲೇ ವಾಹನ ಸಂಚರಿಸಲಾರದಷ್ಟು ದೊಡ್ಡ ಗುಂಡಿಯಾಗಿರುವುದರಿಂದ ಹೊಸ ಬಸ್ ಸಂಚಾರ ಆರಂಭಿಸಲು ಅಧಿಕಾರಿಗಳು ಒಪ್ಪಿಗೆ ನೀಡುವುದೇ ಅನುಮಾನವಿದೆ ಎಂದು ದೂರಿದರು.
ಕಳಪೆ ಕಾಮಗಾರಿಯಿಂದ 8 ಕೋಟಿ ಅನುದಾನ ಪೋಲಾಗಿದೆ. ಈ ರಸ್ತೆ ಕಾಮಗಾರಿ ನಿರ್ವಹಿಸಿದ ಇಂಜಿನಿಯರ್‌ರನ್ನು ಅಮಾನತ್ತು ಮಾಡಬೇಕು. ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಬೇಕು ಎಂದು ಒತ್ತಾಯಿಸಿದರು.
ಗ್ರಾಮಸ್ಥರಾದ ಚನ್ನಕೇಶವ, ಪರಮೇಶ್, ಪುನೀತ್, ಹೇಮಂತ್, ಪ್ರಶಾಂತ್, ಸಂದೇಶ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net