ಉದ್ಯೋಗ ನೇಮಕದಲ್ಲಿ ಕನ್ನಡಿಗರಿಗೆ ಇರಲಿ ಪ್ರಾಶಸ್ತ್ಯ

17sor2..
ಸೊರಬ ಪಟ್ಟಣಕ್ಕೆ ಆಗಮಿಸಿದ ಕರ್ನಾಟಕ ಸುವರ್ಣ ಸಂಭ್ರಮ ರಥವನ್ನು ವಿವಿಧ ಸಂಘಟನೆಗಳ ಪ್ರಮುಖರು ಸ್ವಾಗತಿಸಿದರು. ಡಾ. ಎನ್.ಆರ್.ಪ್ರದೀಪ್ ಕುಮಾರ್, ಡಾ. ವಿನಯ್ ಪಾಟೀಲ್, ಆರ್.ಪುಷ್ಪಾ, ಕೆ.ಜಿ.ಕುಮಾರ್ ಇತರರಿದ್ದರು.
Published on

ಸೊರಬ: ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣಗೊಂಡು ಐವತ್ತು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಸಂಚರಿಸುತ್ತಿರುವ ಕರ್ನಾಟಕ ಸುವರ್ಣ ಸಂಭ್ರಮ ರಥವನ್ನು ಅದ್ದೂರಿಯಾಗಿ ಸ್ವಾಗತಿಸಲಾಯಿತು.

ಪಟ್ಟಣದ ಪುರಸಭೆ ಮುಂಭಾಗದ ವೃತ್ತದಲ್ಲಿ ತಾಲೂಕು ಆಡಳಿತ, ಪುರಸಭೆ, ಕನ್ನಡ ಸಾಹಿತ್ಯ ಪರಿಷತ್ ಸೇರಿ ವಿವಿಧ ಕನ್ನಡಪರ ಸಂಘಟನೆಗಳ ಪ್ರಮುಖರು ಪಾಲ್ಗೊಂಡಿದ್ದರು. ತಾಲೂಕಿನ ಗಡಿಭಾಗ ಛತ್ರದಹಳ್ಳಿಗೆ ರಥ ಆಗಮಿಸುತ್ತಿದ್ದಂತೆ ತಹಸೀಲ್ದಾರ್ ಮಂಜುಳಾ ಹೆಗಡಾಳ್ ಮಾಲಾರ್ಪಣೆ ಮಾಡಿ ಸ್ವಾಗತಿಸಿದರು.

ಪುರಸಭೆ ಮುಂಭಾಗದಲ್ಲಿ ಪುರಸಭೆ ಸದಸ್ಯ ಎಂ.ಡಿ.ಉಮೇಶ್ ಭುವನೇಶ್ವರಿ ದೇವಿಗೆ ಪುಷ್ಪಾರ್ಷನೆ ಸಲ್ಲಿಸಿದರು. ಪುರಸಭೆ ವೃತ್ತದಿಂದ ಮುಖ್ಯರಸ್ತೆಯಲ್ಲಿ ರಥವು ಗುಡ್ಡೆಕೊಪ್ಪದ ಶ್ರೀ ಸಿದ್ದರಾಮೇಶ್ವರ ಯುವಕ ಸಂಘದ ಡೊಳ್ಳು ಕುಣಿತದೊಂದಿಗೆ ಸಂಚರಿಸಿತು. ಕಸಾಪ ಗೌರವಾಧ್ಯಕ್ಷ ರಾಜಪ್ಪ ಮಾಸ್ತರ್ ಮಾತನಾಡಿ, ಕನ್ನಡ ನಾಡು, ನುಡಿಯ ಇತಿಹಾಸ ಅರಿಯಲು ಉತ್ತಮ ಕಾರ್ಯ. ಸುವರ್ಣ ವರ್ಷದ ಆಚರಣೆ ಸಂದರ್ಭದಲ್ಲಿ ಕರುನಾಡಿನ ಹಿರಿಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಕಾರ್ಯವಾಗಬೇಕು ಎಂದರು.

ಕರ್ನಾಟಕದಲ್ಲಿ ಕನ್ನಡಿಗರು ವಿವಿಧತೆಯಲ್ಲಿ ಏಕತೆ ಸಾಧಿಸಿದ್ದು, ಬಹುಸಂಸ್ಕೃತಿ ನಾಡಿನಲ್ಲಿ ಹಿಂದಿ ಹೇರಿಕೆ ಸಲ್ಲದು. ಕನ್ನಡಕ್ಕೆ ಎರಡು ಸಾವಿರ ವರ್ಷಗಳ ಇತಿಹಾಸವಿದ್ದು, ಶಾಸೀಯ ಭಾಷಾ ಸ್ಥಾನಮಾನ ಲಭಿಸಿದೆ. ಕನ್ನಡ ನಾಡು, ನುಡಿ ಬೆಳವಣಿಗೆಗೆ ಪ್ರತಿಯೊಬ್ಬರು ಶ್ರಮಿಸಬೇಕು. ಸರ್ಕಾರಗಳು ಕನ್ನಡಿಗರಿಗೆ ಉದ್ಯೋಗದಲ್ಲಿ ಮೊದಲ ಪ್ರಾಶಸ್ತ್ಯ ನೀಡಬೇಕು ಎಂದರು.

ತಾಪಂ ಇಒ ಡಾ. ಎನ್.ಆರ್.ಪ್ರದೀಪ್ ಕುಮಾರ್, ತಾಲೂಕು ಆರೋಗ್ಯಾಧಿಕಾರಿ ಡಾ. ವಿನಯ್ ಪಾಟೀಲ್, ಬಿಇಒ ಆರ್.ಪುಷ್ಪಾ, ಸಹಾಯಕ ಕೃಷಿ ನಿರ್ದೇಶಕ ಕೆ.ಜಿ.ಕುಮಾರ್, ವಲಯ ಅರಣ್ಯಾಧಿಕಾರಿ ಜಾವೇದ್ ಬಾಷಾ ಅಂಗಡಿ, ಕಸಾಪ ಅಧ್ಯಕ್ಷ ಶಿವಾನಂದ ಪಾಣಿ, ಬಿ.ರೇವಣಪ್ಪ, ಎಚ್.ಎಂ.ಪ್ರಶಾಂತ್, ಡಿ.ಎಸ್.ಶಂಕರ್ ಶೇಟ್, ಡಾ. ಎಸ್.ಎಂ.ನೀಲೇಶ್, ನಾಗರಾಜ ಅನ್ವೇಕರ್, ಶ್ರೀಕಾಂತ್, ನೇತ್ರಾವತಿ, ಮಹಾಬಲೇಶ್ವರ ನಾಯ್ಕ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net