

ಬೆಂಗಳೂರು: ಗುಂಡಿಗೆ ಹೋದ ಹೆಣ, ಕರ್ನಾಟಕ ಕಾಂಗ್ರೆಸ್ ನುಂಗಿದ ಹಣ ಎಂಬುದು ಎಂದಿಗೂ ವಾಪಸ್ ಬರುವುದಿಲ್ಲ ಎಂಬುದು ತಿಳಿದಿದ್ದರೂ ಕೊನೆ ಪ್ರಯತ್ನವಾಗಿ ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರಿಗೆ ಬರೆದ ಕನ್ನಡಿಗರ ಪತ್ರವೊಂದನ್ನು ಜೆಡಿಎಸ್ ಶನಿವಾರ ಹಂಚಿಕೊಂಡಿದೆ.
ತೆಲಂಗಾಣ ಸಿಎಂ ರೇವಂತ್ ರೆಡ್ಡಿಗೆ ‘ಕನ್ನಡಿಗರು’ ಹೆಸರಿನಲ್ಲಿ ಬರೆದ ಪತ್ರವೊಂದನ್ನು ಜೆಡಿಎಸ್ ಸಾಮಾಜಿಕ ಜಾಲತಾಣದ ತನ್ನ ಖಾತೆಯಲ್ಲಿ ಹಂಚಿಕೊಂಡು, ಆ ಪತ್ರದಲ್ಲಿನ ಕೊನೆಯ ಸಾಲುಗಳನ್ನು ಎತ್ತಿ ತೋರಿಸಿದೆ.
ರೇವಂತ್‌ರೆಡ್ಡಿಗೆ ಬರೆದಿರುವ ‘ಕನ್ನಡಿಗರ’ ಪತ್ರದ ಪ್ರಕಾರ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣವನ್ನು ರಾಜ್ಯಕ್ಕೆ ಹಿಂತಿರುಗಿಸಿ, ಕರ್ನಾಟಕದ ವಾಲ್ಮೀಕಿ ಸಮುದಾಯದ ಅಭಿವೃದ್ಧಿಗೆ ನೆರವಾಗಬೇಕು ಎಂದು ಮನವಿ ಮಾಡಲಾಗಿದೆ.
ತೆಲಂಗಾಣದ ಮುಖ್ಯಮಂತ್ರಿ ರೇವಂತ್‌ರೆಡ್ಡಿ ಅವರಿಗೆ ಕನ್ನಡಿಗರ ಮನವಿ. ಕರ್ನಾಟಕದ ವಾಲ್ಮೀಕಿ ಸಮುದಾಯಕ್ಕೆ ಸೇರಬೇಕಾಗಿದ್ದ ಸುಮಾರು 187 ಕೋಟಿ ರೂ. ಹಣವನ್ನು ನಿಮ್ಮ ನಾಯಕ ರಾಹುಲ್ ಗಾಂಧಿ ಅವರ ಆಣತಿಯಂತೆ ಕರ್ನಾಟಕ ರಾಜ್ಯ ಕಾಂಗ್ರೆಸ್ ಸರ್ಕಾರ, ಸಚಿವ ನಾಗೇಂದ್ರ ಅವರ ಮೂಲಕ ತೆಲಂಗಾಣದ ಕಾಂಗ್ರೆಸ್ ಚುನಾವಣಾ ಖರ್ಚಿಗೆ ಸಾಗಿಸಿದ್ದಾರೆ.
ನಿಮ್ಮಲ್ಲಿ ಕನ್ನಡಿಗರು ಕೇಳಿಕೊಳ್ಳುವುದೇನೆಂದರೆ, ನಮ್ಮ ರಾಜ್ಯಕ್ಕೆ ಸೇರಬೇಕಾಗಿದ್ದ ಹಣವನ್ನು ದಯಮಾಡಿ ಹಿಂತಿರುಗಿಸಿ ಕೊಡಿ. ಈ ಹಣ ವಾಲ್ಮೀಕಿ ಸಮುದಾಯದ ಏಳಿಗೆಗಾಗಿ ಬಳಕೆ ಆಗಬೇಕಿತ್ತು. ನಿಮ್ಮ ಸರ್ಕಾರ ಉಂಡು ಹೋದ ಕೊಂಡೂ ಹೋದ ಎಂಬಂತೆ ತಮ್ಮ ಸ್ವಾರ್ಥಕ್ಕಾಗಿ ಇಲ್ಲಿ ಲೂಟಿ ಹೊಡೆದದ್ದಲ್ಲದೆ, ಮಿಕ್ಕ ಹಣವನ್ನೂ ಬೇರೆ ಬೇರೆ ರಾಜ್ಯಗಳ ಚುನಾವಣೆಗೆ ಕಾಂಗ್ರೆಸ್ ಪಕ್ಷದ ಖರ್ಚಿ ಸಾಗಿಸಿದ್ದಾರೆ.
ಗುಂಡಿಗೆ ಹೋದ ಹೆಣ, ಕಾಂಗ್ರೆಸ್ ನುಂಗಿದ ಹಣ ಎಂದಿಗೂ ವಾಪಸ್ ಬರುವುದಿಲ್ಲ ಎಂಬುದು ನಮಗೆ ತಿಳಿದಿದೆ. ಆದರೆ ಕೊನೆ ಪ್ರಯತ್ನವಾಗಿ ನಿಮ್ಮಲ್ಲಿ ಈ ಮನವಿ ಮಾಡುತ್ತಿದ್ದೇವೆ. ಹಣ ಹಿಂತಿರುಗಿಸಿ, ವಿಶ್ವಾಸ ಉಳಿಸಿಕೊಳ್ಳಿ ಎಂದು ಕನ್ನಡಿಗರು ಕೋರಿದ್ದಾರೆ.