

ಬೆಂಗಳೂರು: ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ.ವರಾಳೆ ಅವರನ್ನು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯನ್ನಾಗಿ ಹಾಗೂ ಹೈಕೋರ್ಟ್ನ ಹಾಲಿ 2ನೇ ಹಿರಿಯ ನ್ಯಾಯಮೂರ್ತಿ ಪಿ.ಎಸ್.ದಿನೇಶ್ ಕುಮಾರ ಅವರನ್ನು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯನ್ನಾಗಿ ನೇಮಕ ಮಾಡಲು ಕೊಲಿಜಿಯಂ ಶಿಫಾರಸ್ಸು ಮಾಡಿದೆ.
ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಕೊಲಿಜಿಯಂನಲ್ಲಿ ಈ ತೀರ್ಮಾನ ಕೈಗೊಂಡು, ಅದರಂತೆ ಕೇಂದ್ರ ಸರ್ಕಾರಕ್ಕೆ ಮುಂದಿನ ಆದೇಶಕ್ಕಾಗಿ ಶಿಫಾರಸು ಮಾಡಲಾಗಿದೆ. ಕೇಂದ್ರ ಕಾನೂನು ಸಚಿವಾಲಯ ಮುಂದಿನ ಪ್ರಕ್ರಿಯೆ ನಡೆಸಿ, ನೇಮಕ ಪ್ರಸ್ತಾವವನ್ನು ರಾಷ್ಟ್ರಪತಿಗೆ ಕಳುಹಿಸಲಿದೆ. ಅವರು ನೇಮಕದ ಅಧಿಕೃತ ಆದೇಶವನ್ನು ಹೊರಡಿಸಲಿದ್ದಾರೆ.
ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಸಂಜಯ್ ಕಿಶನ್ ಕೌಲ್ ಡಿ.25ರಂದು ನಿವೃತ್ತರಾಗಿದ್ದಾರೆ. ತೆರವಾದ ಸ್ಥಾನಕ್ಕೆ ಸೇವಾ ಹಿರಿತನ ಪರಿಗಣಿಸಿ ಪ್ರಸನ್ನ ಬಿ. ವರಾಳೆ ಅವರಿಗೆ ಬಡ್ತಿ ನೀಡಲು ನಿರ್ಧರಿಸಲಾಗಿದೆ. ಪರಿಶಿಷ್ಟ ಜಾತಿಗೆ ಸೇರಿದ ಹೈಕೋರ್ಟ್ನ ಅತ್ಯಂತ ಹಿರಿಯ ನ್ಯಾಯಮೂರ್ತಿಯಾಗಿರುವ ಪ್ರಸನ್ನ ಬಿ.ವರಾಳೆ ದೇಶದಾದ್ಯಂತ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಹುದ್ದೆ ನಿರ್ವಹಿಸುತ್ತಿರುವ ಪರಿಶಿಷ್ಟ ಜಾತಿಗೆ ಸೇರಿದ ಏಕೈಕ ಮುಖ್ಯ ನ್ಯಾಯಮೂರ್ತಿಯಾಗಿದ್ದಾರೆ.
ಕನ್ನಡಿಗನಿಗೆ ಉನ್ನತ ಹುದ್ದೆ: ಪ್ರಸನ್ನ ಬಿ. ವರಾಳೆ ಪದೋನ್ನತಿಯಿಂದ ತೆರವಾದ ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಹುದ್ದೆಗೆ ಕರ್ನಾಟಕದ ಹಿರಿಯ ನ್ಯಾಯಮೂರ್ತಿ ಪಿ.ಎಸ್. ದಿನೇಶ್ ಕುಮಾರ್ ಅವರನ್ನು ನೇಮಕ ಮಾಡಲಾಗಿದೆ. ದಿನೇಶ್ ಕುಮಾರ್ ಇದೇ ಫೆ.24ಕ್ಕೆ ನಿವೃತ್ತರಾಗಲಿದ್ದಾರೆ. ಸಾಮಾನ್ಯವಾಗಿ ಹೈಕೋರ್ಟ್ನ ಸಿಜೆಯನ್ನಾಗಿ ಬೇರೆ ಹೈಕೋರ್ಟ್ನ ನ್ಯಾಯಮೂರ್ತಿಗಳನ್ನು ನೇಮಕ ಮಾಡುವುದು ವಾಡಿಕೆ. ಆದರೆ, ದಿನೇಶ್ ಕುಮಾರ್ ಆಡಳಿತದ ಅನುಭವ, ದಕ್ಷತೆ, ಪ್ರಮಾಣಿಕತೆಯನ್ನು ಪರಿಗಣಿಸಿ ಅವರನ್ನು ಹೈಕೋರ್ಟ್ ಸಿಜೆಯನ್ನಾಗಿ ನೇಮಕ ಮಾಡಲಾಗುತ್ತಿದೆ ಎಂದು ಸುಪ್ರೀಂಕೋರ್ಟ್ ಹೇಳಿದೆ.
ನ್ಯಾ. ವರಾಳೆ ಹಿನ್ನೆಲೆ: ನ್ಯಾಯಮೂರ್ತಿ ಪ್ರಸನ್ನ ಬಿ. ವರಾಳೆ 1985ರಲ್ಲಿ ವೃತ್ತಿ ಜೀವನ ಆರಂಭಿಸಿದ್ದರು. ಆರಂಭಿಕ ವರ್ಷಗಳಲ್ಲಿ ವಕೀಲ ಎಸ್.ಎನ್.ಲೋಯಾ ಅಡಿಯಲ್ಲಿ ಪ್ರಾಕ್ಟೀಸ್ ಮಾಡಿದರು. 1992ರವರೆಗೆ ಔರಂಗಾಬಾದ್ನ ಅಂಬೇಡ್ಕರ್ ಕಾನೂನು ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದರು. 2008ರ ಜು. 18ರಂದು ಬಾಂಬೆ ಹೈಕೋರ್ಟ್ ನ್ಯಾಯಮೂರ್ತಿಯಾಗಿ ನೇಮಕಗೊಂಡಿದ್ದ ಅವರು 2022ರ ಅ.15 ರಂದು ಕರ್ನಾಟಕ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿಯಾಗಿ ಬಡ್ತಿ ಪಡೆದಿದ್ದರು.