ವೃತ್ತಿ, ನೈತಿಕ ಪ್ರಜ್ಞೆ ಇದ್ದರೆ ಕನ್ನಡ ಬರಹಕ್ಕೆ ಶ್ರೇಷ್ಠ ಸ್ಥಾನ

state level doctors kannada writers sammenala
ಶಿವಮೊಗ್ಗದಲ್ಲಿ ಕನ್ನಡ ವೈದ್ಯ ಬರಹಗಾರರ 4ನೇ ರಾಜ್ಯ ಸಮ್ಮೇಳನದಲ್ಲಿ ವಿಮರ್ಶಕ ಡಾ. ರಾಜೇಂದ್ರ ಚೆನ್ನಿ ಮಾತನಾಡಿದರು.
Published on

ಶಿವಮೊಗ್ಗ: ವೈದ್ಯಕೀಯ ಕ್ಷೇತ್ರದಲ್ಲಿ ವೃತ್ತಿ ಮತ್ತು ನೈತಿಕ ಪ್ರಜ್ಞೆ ಇರುವಂತಹ ಬರಹಗಳು ಹೆಚ್ಚೆಚ್ಚು ಬರಬೇಕು. ಇದು ಸಾಧ್ಯವಾದರೆ ಕನ್ನಡ ವೈದ್ಯ ಬರಹಗಾರರು ಶ್ರೇಷ್ಠ ಸ್ಥಾನಕ್ಕೆ ತಲುಪುತ್ತಾರೆ ಎಂದು ವಿಮರ್ಶಕ ಡಾ. ರಾಜೇಂದ್ರ ಚೆನ್ನಿ ಹೇಳಿದರು.

ನಗರದಲ್ಲಿ ಶನಿವಾರ ಐಎಂಎ(ಭಾರತೀಯ ವೈದ್ಯಕೀಯ ಸಂಘ) ಕರ್ನಾಟಕ ಮತ್ತು ಶಿವಮೊಗ್ಗ ಶಾಖೆ, ಕನ್ನಡ ವೈದ್ಯ ಬರಹಗಾರರ ಸಮಿತಿ ಆಶ್ರಯದಲ್ಲಿ ಕನ್ನಡ ವೈದ್ಯ ಬರಹಗಾರರ 4ನೇ ರಾಜ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ಆಂಗ್ಲ ಭಾಷೆಗೆ ಮಾತ್ರ ಸೀಮಿತ ಎಂಬಂತಾಗಿರುವ ವೈದ್ಯ ಸಾಹಿತ್ಯವನ್ನು ಕನ್ನಡದ ಮೂಲಕ ಜಗದಗಲ ಪಸರಿಸುವ ಕಾರ್ಯವನ್ನು ವೈದ್ಯ ಸಾಹಿತಿಗಳು ಮಾಡಬೇಕು ಎಂದರು.
ವೈದ್ಯ ಸಾಹಿತ್ಯ ಅಕ್ಷರ ಬಲ್ಲಂತಹ ಎಲ್ಲರಿಗೂ ತಲುಪಬೇಕು. ಕನ್ನಡ ವೈದ್ಯಕೀಯ ಸಾಹಿತ್ಯ, ಬರಹಗಾರರು ನಿರಂತರವಾಗಿ ಕನ್ನಡ ಭಾಷೆಯ ಮೂಲಕ ಜ್ಞಾನ ಭಂಡಾರವನ್ನು ವೃದ್ದಿಸಬೇಕು. ಬರಹ ಎನ್ನುವುದು ಕೇವಲ ಹವ್ಯಾಸವಲ್ಲ. ಅದೊಂದು ಅಭಿವ್ಯಕ್ತಿಯಾಗಿ ಸಾಹಿತ್ಯದ ಮೂಲಕ ಹೊರಹೊಮ್ಮುವ ಒಂದು ದೊಡ್ಡ ಶಕ್ತಿಯಾಗಿದೆ ಎಂದರು.
ವೈದ್ಯರು ಬರಹವನ್ನು ಹವ್ಯಾಸವನ್ನಾಗಿ ನೋಡಬಾರದು. ಮನುಷ್ಯ ಕುಲದಲ್ಲಿ ನಾಗರಿಕತೆ ಸೃಷ್ಠಿಯಾದಾಗಿನಿಂದಲೂ ವಿಶಿಷ್ಟ ರೀತಿಯಲ್ಲಿ ಬೆಳವಣಿಗೆ ಕಾಣುತ್ತಾ ಬಂದಿದೆ. ಮನುಷ್ಯ ಉಗಮವಾದ ನಂತರ ವೈದ್ಯ ಸಾಹಿತ್ಯ ಪ್ರಮುಖವಾದುದಾಗಿದೆ. ಜನ ಸಾಮಾನ್ಯರಲ್ಲಿ ಆರೋಗ್ಯದ ಬಗ್ಗೆ ಇರುವ ಅನಾರೋಗ್ಯಕರ ಭ್ರಮೆಗಳನ್ನು ವೈದ್ಯರುಗಳೇ ದೂರ ಮಾಡಬೇಕಿದೆ. ವೈದ್ಯ ಬರಹಗಾರರು ತಮ್ಮ ಈ ಸಾಹಿತ್ಯದ ಮೂಲಕ ಆರೋಗ್ಯ ಸಂಬಅಧಿತ ಸಾಹಿತ್ಯವನ್ನು ಸರಳವಾಗಿ ಜನರಿಗೆ ತಿಳಿಸಬೇಕು ಎಂದು ಹೇಳಿದರು.
ಹಿರಿಯ ಮನೋವೈದ್ಯ ಡಾ. ಕೆ.ಆರ್.ಶ್ರೀಧರ್ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿದ್ದರು. ಭಾರತೀಯ ವೈದ್ಯಕೀಯ ಸಂಘದ ರಾಜ್ಯಾಧ್ಯಕ್ಷ ಡಾ. ಎಸ್.ಬಿ.ಲಕ್ಕೋಳ, ಹಿರಿಯ ಮನೋವೈದ್ಯ, ವೈದ್ಯ ಸಾಹಿತಿ ಡಾ. ಸಿ.ಆರ್. ಚಂದ್ರಶೇಖರ್, ಸುಬ್ಬಯ್ಯ ವೈದ್ಯಕೀಯ ಕಾಲೇಜಿನ ವೈದ್ಯಕೀಯ ನಿರ್ದೇಶಕ ಡಾ. ಎಸ್.ನಾಗೇಂದ್ರ ಮಾತನಾಡಿದರು. ಸ್ತ್ರೀರೋಗ ಹಾಗೂ ಪ್ರಸೂತಿ ತಜ್ಞೆ ಡಾ. ವೀಣಾ ಭಟ್, ಕನ್ನಡ ವೈದ್ಯ ಬರಹಗಾರರ ಸಮಿತಿ ಅಧ್ಯಕ್ಷ ಡಾ. ಶಿವಾನಂದ ಕುಬಸದ್, ಕಾರ್ಯಾಧ್ಯಕ್ಷ ಡಾ. ಬಿ.ಪಿ.ಕರುಣಾಕರ್, ಕಾರ್ಯದರ್ಶಿ ಡಾ. ಕೆ.ಎನ್.ಗುರುದತ್, ಐಎಂಎ ಶಿವಮೊಗ್ಗ ಅಧ್ಯಕ್ಷ ಡಾ. ಎಂ.ಎಸ್.ಅರುಣ್, ಕಾರ್ಯದರ್ಶಿ ಡಾ. ರಕ್ಷಾ ರಾವ್, ಸಂಘಟನಾ ಕಾರ್ಯದರ್ಶಿಗಳಾದ ಡಾ. ವಿನಯಾ ಶ್ರೀನಿವಾಸ್ ಹಾಗೂ ಡಾ. ಕೆ.ಎಸ್.ಶುಭ್ರತಾ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net