ನಾಡಿನಾದ್ಯಂತ ಕೆಂಪು-ಹಳದಿ ಧ್ವಜ ಹಾರಿಸಿ ಸಂಭ್ರಮಿಸುವ ರಾಜ್ಯೋತ್ಸವ
ಕನ್ನಡ ಮಾತಾಡುವ ಪ್ರದೇಶಗಳನ್ನೆಲ್ಲಾ ಒಗ್ಗೂಡಿಸಿ ‘ಮೈಸೂರು ರಾಜ್ಯ’ ನಿರ್ಮಾಣ
ದೇವರಾಜ್ ಅರಸು ಸಿಎಂ ಆಗಿದ್ದಾಗ ಮೈಸೂರು ರಾಜ್ಯಕ್ಕೆ ‘ಕರ್ನಾಟಕ’ ಎಂದು ಮರುನಾಮಕರಣ
ಆಲೂರು ವೆಂಕಟರಾಯರಿಂದ 1905ರಲ್ಲೇ ಆರಂಭವಾಗಿದ್ದ ಕರ್ನಾಟಕ ಏಕೀಕರಣ ಚಳವಳಿ
ನವೆಂಬರ್ 1 ಕನ್ನಡ ರಾಜ್ಯೋತ್ಸವ: ‘ಎಲ್ಲಾದರು ಇರು ಎಂತಾದರು ಇರು ಎಂದೆಂದಿಗೂ ನೀ ಕನ್ನಡವಾಗಿರು, ಕನ್ನಡವೇ ಸತ್ಯ ಕನ್ನಡವೇ ನಿತ್ಯ’ – ಕುವೆಂಪು ಅವರ ಈ ಸಾಲುಗಳು ಪ್ರತಿಯೊಬ್ಬ ಕನ್ನಡಿಗನ ನರನರದಲ್ಲೂ ಕನ್ನಡಾಭಿಮಾನವನ್ನು ಉಕ್ಕಿಸುತ್ತವೆ. ಪ್ರತಿ ವರ್ಷ ನವೆಂಬರ್ 10ರಂದು ನಾಡಿನಾದ್ಯಂತ ಕನ್ನಡ ರಾಜ್ಯೋತ್ಸವವನ್ನು ಅತ್ಯಂತ ಸಂಭ್ರಮ-ಸಡಗರದಿಂದ ಆಚರಿಸಲಾಗುತ್ತದೆ.
ಯುವ ಪೀಳಿಗೆಗೆ ಕನ್ನಡ ನಾಡಿನ ಇತಿಹಾಸ, ಕಲೆ, ಸಂಸ್ಕೃತಿ ಮತ್ತು ಭಾಷೆಯ ಬಗ್ಗೆ ಅರಿವು ಮೂಡಿಸುವ ಈ ವಿಶೇಷ ದಿನದ ಹಿಂದೆ ದೊಡ್ಡ ಇತಿಹಾಸವೇ ಇದೆ. ಅಷ್ಟಕ್ಕೂ ನವೆಂಬರ್ 1ರಂದೇ ರಾಜ್ಯೋತ್ಸವವನ್ನು ಏಕೆ ಆಚರಿಸಲಾಗುತ್ತದೆ? ಅದರ ಮಹತ್ವವೇನು? ಇಲ್ಲಿದೆ ವಿವರ.
1947 ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ಬಳಿಕ ಭಾಷೆಗಳ ಆಧಾರದ ಮೇಲೆ ರಾಜ್ಯಗಳನ್ನು ವಿಂಗಡಿಸುವ ಕಾರ್ಯ ಶುರುವಾಯಿತು. ಅದರಂತೆ ದಕ್ಷಿಣ ಭಾರತದಲ್ಲಿದ್ದ ಮದ್ರಾಸ್, ಮುಂಬಯಿ ಮತ್ತು ಹೈದರಾಬಾದ್ ಪ್ರಾಂತ್ಯಗಳಲ್ಲಿದ್ದ ಕನ್ನಡ ಮಾತನಾಡುವ ಎಲ್ಲಾ ಪ್ರದೇಶಗಳನ್ನು ಒಗ್ಗೂಡಿಸಿ 1956ರ ನವೆಂಬರ್ 1ರಂದು ‘ಮೈಸೂರು ರಾಜ್ಯ’ವನ್ನು ಅಸ್ತಿತ್ವಕ್ಕೆ ತರಲಾಯಿತು. ಕನ್ನಡಿಗರ ರಾಜ್ಯ ಉದಯವಾದ ಈ ಐತಿಹಾಸಿಕ ದಿನದ ನೆನಪಿಗಾಗಿಯೇ ಪ್ರತಿ ವರ್ಷ ನವೆಂಬರ್ 1ರಂದು ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಗುತ್ತದೆ.
ಕನ್ನಡ ಕುಲಪುರೋಹಿತ ಆಲೂರು ವೆಂಕಟರಾವ್ ಅವರು ಸ್ವಾತಂತ್ರ್ಯ ಪೂರ್ವದಲ್ಲೇ ಅಂದರೆ 1905ರಲ್ಲಿ ‘ಕರ್ನಾಟಕ ಏಕೀಕರಣ ಚಳವಳಿ’ಯನ್ನು ಆರಂಭಿಸಿದ್ದರು. ನಂತರ ಕೆ. ಶಿವರಾಮ ಕಾರಂತ, ಕುವೆಂಪು, ಮಾಸ್ತಿ ವೆಂಕಟೇಶ ಅಯ್ಯಂಗಾರ್, ಎ.ಎನ್.ಕೃಷ್ಣರಾವ್, ಬಿ.ಎಂ.ಶ್ರೀಕಂಠಯ್ಯ ಮುಂತಾದ ಸಾಹಿತಿಗಳ ಹೋರಾಟದ ಫಲವಾಗಿ ಕನ್ನಡ ಪ್ರದೇಶಗಳು ಒಂದಾದವು.
ನಂತರ ಮೈಸೂರು ರಾಜ್ಯಕ್ಕೆ ಬೇರೆ ಸೂಕ್ತ ಹೆಸರು ಇಡಬೇಕೆಂಬ ಉತ್ತರ ಕರ್ನಾಟಕದ ಜನರ ಒತ್ತಾಯಕ್ಕೆ ಮಣಿದು, ದೇವರಾಜ್ ಅರಸು ಅವರು ಮುಖ್ಯಮಂತ್ರಿಯಾಗಿದ್ದಾಗ 1973ರ ನವೆಂಬರ್ 1ರಂದು ‘ಮೈಸೂರು ರಾಜ್ಯ’ಕ್ಕೆ ‘ಕರ್ನಾಟಕ’ ಎಂದು ಮರುನಾಮಕರಣ ಮಾಡಲಾಯಿತು. ಆಲೂರು ವೆಂಕಟರಾಯರು ಬರೆದ ‘ಕರ್ನಾಟಕ ಗತವೈಭವ’ ಪುಸ್ತಕದ ಆಧಾರದಲ್ಲಿ ಈ ಹೆಸರನ್ನು ಆಯ್ಕೆ ಮಾಡಲಾಯಿತು.
'ಕರ್ನಾಟಕ' ಎಂಬ ಪದಕ್ಕೆ ಸಂಸ್ಕೃತದಲ್ಲಿ ‘ಕರುನಾಡು’ ಅಂದರೆ ‘ಕಪ್ಪು ಮಣ್ಣಿನ ನಾಡು’ ಎಂಬ ಅರ್ಥವಿದೆ. ಅಷ್ಟೇ ಅಲ್ಲ, ಮಹಾಭಾರತದ ಕಾಲದಲ್ಲೂ ಕರ್ನಾಟಕದ ಉಲ್ಲೇಖವಿದ್ದು, ಆ ಕಾಲದಲ್ಲಿ ಈ ಭಾಗವನ್ನು 'ಕನ್ನಡ ನಾಡು' ಅಥವಾ 'ಕುಂತಳ ನಾಡು' ಎಂದು ಕರೆಯಲಾಗುತ್ತಿತ್ತು.
ನವೆಂಬರ್ 1ರಂದು ನಾಡಿನಾದ್ಯಂತ ಕನ್ನಡದ ಕಂಪನ್ನು ಪಸರಿಸಲಾಗುತ್ತದೆ. ಕನ್ನಡಿಗರ ಗತ್ತಿನ ಸಂಕೇತವಾದ ಹಳದಿ ಮತ್ತು ಕೆಂಪು ಬಣ್ಣದ ಕನ್ನಡ ಧ್ವಜವನ್ನು ಸರ್ಕಾರಿ ಕಚೇರಿಗಳು, ಶಾಲೆ-ಕಾಲೇಜುಗಳು ಮತ್ತು ಸಂಘ-ಸಂಸ್ಥೆಗಳಲ್ಲಿ ಹಾರಿಸಿ, ನಾಡು-ನುಡಿಯ ಸೇವೆ ಮಾಡಿದ ಸಾಧಕರಿಗೆ ಸನ್ಮಾನಿಸಿ ರಾಜ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ.