Extinct Frog Species Australia: ಪ್ರಕೃತಿಯ ಲೋಕವೇ ವಿಸ್ಮಯಗಳ ಕಣಜ. ಅದಕ್ಕೆ ತಕ್ಕ ಉದಾಹರಣೆಯೆಂದರೆ ಆಸ್ಟ್ರೇಲಿಯಾದಲ್ಲಿ ಕಂಡುಬರುತ್ತಿದ್ದ 'ಗ್ಯಾಸ್ಟ್ರಿಕ್-ಬ್ರೂಡಿಂಗ್ ಕಪ್ಪೆ'. ಸಾಮಾನ್ಯವಾಗಿ ಎಲ್ಲ ಕಪ್ಪೆಗಳಂತೆ ನೀರಲ್ಲಿ ಮೊಟ್ಟೆಯಿಟ್ಟು ಮರಿ ಮಾಡದ ಈ ಕಪ್ಪೆ, ತನ್ನ ವಿಭಿನ್ನ ಸಂತಾನೋತ್ಪತ್ತಿ ವಿಧಾನದಿಂದ ಇಡೀ ವಿಜ್ಞಾನ ಲೋಕವನ್ನೇ ಬೆರಗುಗೊಳಿಸಿತ್ತು.
ಈ ಕಪ್ಪೆಯ ಜೀವನ ಚಕ್ರ ನಿಜಕ್ಕೂ ವಿಚಿತ್ರವಾಗಿತ್ತು. ಹೆಣ್ಣು ಕಪ್ಪೆ ಇಟ್ಟ 20 ರಿಂದ 25 ದೊಡ್ಡ ಮೊಟ್ಟೆಗಳನ್ನು ಗಂಡು ಕಪ್ಪೆ ನಿಷೇಚನಗೊಳಿಸಿದ (Fertilize) ತಕ್ಷಣ, ಹೆಣ್ಣು ಕಪ್ಪೆ ಆ ಎಲ್ಲಾ ಮೊಟ್ಟೆಗಳನ್ನು ತನ್ನ ಬಾಯಿಯ ಮೂಲಕವೇ ನುಂಗಿಬಿಡುತ್ತಿತ್ತು.
ತಾಯಿ ಕಪ್ಪೆ ನುಂಗಿದ ಮೊಟ್ಟೆಗಳು ನೇರವಾಗಿ ಅದರ ಜಠರವನ್ನು ಸೇರುತ್ತಿದ್ದವು. ಮುಂದಿನ 6 ರಿಂದ 7 ವಾರಗಳವರೆಗೆ ಆ ಕಪ್ಪೆಯ ಇಡೀ ಹೊಟ್ಟೆಯೇ ಗರ್ಭಾಶಯವಾಗಿ ಬದಲಾಗಿ, ಮೊಟ್ಟೆಗಳು ಮರಿಗಳಾಗಿ ಬೆಳೆಯುತ್ತಿದ್ದವು. ಮರಿಗಳು ಸಂಪೂರ್ಣವಾಗಿ ರೂಪುಗೊಂಡ ಬಳಿಕ ತಾಯಿಯ ಬಾಯಿಯ ಮೂಲಕವೇ ಹೊರಬರುತ್ತಿದ್ದವು.
ಯಾವುದೇ ಆಹಾರ ಹೊಟ್ಟೆ ಸೇರಿದರೂ ಆಮ್ಲ ಬಿಡುಗಡೆಯಾಗುವುದು ಸಹಜ. ಆದರೆ ಈ ಕಪ್ಪೆ ಮೊಟ್ಟೆಗಳನ್ನು ನುಂಗಿದಾಗ ಬಿಡುಗಡೆಯಾಗುವ 'ಪಿಜಿಇ2' (PGE2) ರಾಸಾಯನಿಕವು ಜೀರ್ಣಕಾರಿ ಆಸಿಡ್ ಉತ್ಪತ್ತಿಯಾಗದಂತೆ ತಡೆಯುತ್ತಿತ್ತು. ಇದರಿಂದ ಮೊಟ್ಟೆಗಳು ಸುರಕ್ಷಿತವಾಗಿದ್ದು, ಈ ಅಂಶವು ಮಾನವರಲ್ಲಿ ಗ್ಯಾಸ್ಟ್ರಿಕ್ ಅಲ್ಸರ್‌ಗೆ ಮದ್ದು ಹುಡುಕಲು ವಿಜ್ಞಾನಿಗಳಿಗೆ ಆಶಾಕಿರಣವಾಗಿತ್ತು.
ಮರಿಗಳು ಹೊಟ್ಟೆಯಲ್ಲಿದ್ದ 6 ರಿಂದ 7 ವಾರಗಳವರೆಗೆ ತಾಯಿ ಕಪ್ಪೆ ಏನನ್ನೂ ತಿನ್ನದೆ ಸಂಪೂರ್ಣ ಉಪವಾಸವಿರುತ್ತಿತ್ತು. ಹೊಟ್ಟೆಯಲ್ಲಿ ಮರಿಗಳು ಬೆಳೆಯುತ್ತಾ ಹೋದಂತೆ ಜಠರ ದೊಡ್ಡದಾಗಿ ಶ್ವಾಸಕೋಶವೇ ಕುಸಿಯುತ್ತಿತ್ತು. ಆಗ ಕಪ್ಪೆಯು ಬಾಯಿಯ ಬದಲಿಗೆ ತನ್ನ ಚರ್ಮದ ಮೂಲಕವೇ ಉಸಿರಾಡಬೇಕಾದ ಅನಿವಾರ್ಯತೆ ಇತ್ತು.
ಇದನ್ನೂ ಓದಿ: ಆಟಿಕೆಗಳಂತೆ ಸಮುದ್ರಕ್ಕೆ ಕೊಚ್ಚಿಹೋದ ಕಾರುಗಳು: ಮೆಕ್ಸಿಕೋದಲ್ಲಿ 'ವ್ಯಾನ್ಸ್' ಅಬ್ಬರ | Mexico Floods
ಶಿಲೀಂಧ್ರ ಬಾಧೆ ಮತ್ತು ಮಾನವರ ಹಸ್ತಕ್ಷೇಪದಿಂದಾಗಿ ಆಸ್ಟ್ರೇಲಿಯಾದ ಕ್ವೀನ್ಸ್‌ಲ್ಯಾಂಡ್ ಕಾಡುಗಳಲ್ಲಿದ್ದ ಈ ಕಪ್ಪೆಗಳು 1980ರ ದಶಕದಲ್ಲೇ ಕಣ್ಮರೆಯಾದವು. ಆದರೆ ವಿಜ್ಞಾನಿಗಳು ಈಗ ಕ್ಲೋನಿಂಗ್ ತಂತ್ರಜ್ಞಾನದ ಬಳಕೆಯಿಂದ (Project Lazarus) ಈ ವಿಶಿಷ್ಟ ಜೀವಿಯನ್ನು ಮರುಸೃಷ್ಟಿಸಲು ನಿರಂತರ ಪ್ರಯತ್ನಗಳನ್ನು ಮುಂದುವರಿಸಿದ್ದಾರೆ.