ಅಮೆರಿಕ ಸರ್ಕಾರಿ ಪ್ರೌಢಶಾಲೆಯಲ್ಲಿ ಅಧಿಕೃತವಾಗಿ ಕನ್ನಡ!

America
Published on

| ಬೆಂಕಿ ಬಸಣ್ಣ ನ್ಯೂಯಾರ್ಕ್

ಕರ್ನಾಟಕದ ಅನೇಕ ಸರ್ಕಾರಿ ಕನ್ನಡ ಶಾಲೆಗಳಲ್ಲಿ ವಿದ್ಯಾರ್ಥಿಗಳ ಪ್ರವೇಶ ಸಂಖ್ಯೆ ಕಡಿಮೆಯಾಗುತ್ತಿರುವ ನೆಪವೊಡ್ಡಿ, ಅವುಗಳನ್ನು ಮುಚ್ಚುವ ಪ್ರಯತ್ನ ನಡೆಯುತ್ತಿರುವ ಬೆನ್ನಲ್ಲೇ ದೂರದ ಅಮೆರಿಕದ ಸರ್ಕಾರಿ ಹೈಸ್ಕೂಲುಗಳಲ್ಲಿ ಕನ್ನಡ ಭಾಷೆಯನ್ನು ಅಧಿಕೃತ ವಿದೇಶಿ ಭಾಷೆಯಾಗಿ ಕಲಿಸುವ ಅವಕಾಶ ನೀಡಲಾಗಿದೆ. ಅಮೆರಿಕದಲ್ಲಿ ಕನ್ನಡ ಪ್ರೇಮಿಗಳ ಸತತ 15 ವರ್ಷಗಳ ಪ್ರಯತ್ನದಿಂದಾಗಿ ನಾರ್ಥ್​ಕೆರೊಲಿನ ರಾಜ್ಯದ ವೇಕ್​ಕೌಂಟಿ ಸರ್ಕಾರಿ ಹೈಸ್ಕೂಲಿನಲ್ಲಿ ಕನ್ನಡವನ್ನು ಒಂದು ವಿದೇಶಿ ಭಾಷೆಯಾಗಿ ಕಲಿಯಲು ಅವಕಾಶ ದೊರೆತಿದೆ.

ಅಮೆರಿಕದ ದೊಡ್ಡ ಊರುಗಳಲ್ಲಿರುವ ಹೈಸ್ಕೂಲುಗಳಲ್ಲಿಯೂ ಕನ್ನಡ ಭಾಷೆಯನ್ನು ವಿದೇಶಿ ಭಾಷೆಯಾಗಿ ಕಲಿಸಲು ಮುಂಬರುವ ದಿನಗಳಲ್ಲಿ ಕನ್ನಡ ಅಕಾಡೆಮಿ ಪ್ರಯತ್ನ ಮಾಡಲಿದೆ. ಈ ಯಶಸ್ಸಿನ ಹಿಂದೆ ಅಮೆರಿಕ ಕನ್ನಡ ಅಕಾಡೆಮಿಯ ಶಿವ ಗೌಡರ್, ಡಾಕ್ಟರ್ ಅಶೋಕ್ ಕಟ್ಟಿಮನಿ, ಮಧು ರಂಗಪ್ಪಗೌಡ, ಅರುಣ್ ಸಂಪತ್, ಗುರುಪ್ರಸಾದ್ ರಾವ್, ನಾವಿಕ ಅಧ್ಯಕ್ಷರಾದ ವಲ್ಲೀಶ ಶಾಸ್ತ್ರಿ, ಅಕ್ಕ ಸಂಸ್ಥೆಯ ಸುರೇಶ್ ಕೃಷ್ಣಯ್ಯ ಮುಂತಾದವರ ಅವಿರತ ಪ್ರಯತ್ನವಿದೆ. ಸಲಹೆಗಾರರಾಗಿ ಸೌಥ್ ಫ್ಲಾರಿಡಾ ಯುನಿವರ್ಸಿಟಿಯ ಡಾಕ್ಟರ್ ಗಿಲ್ ಬೆನ್ ಹೇರುಟ್, ಪೊ›ಫೆಸರ್ ಕೃಷ್ಣೇಗೌಡ, ಡಾಕ್ಟರ್ ಉದಯ ಶಂಕರ ಪುರಾಣಿಕ, ಡಾಕ್ಟರ್ ತಳವಾರ್ ಮತ್ತು ಟಿ.ಎಸ್. ನಾಗಾಭರಣ ಅವರ ಕೊಡುಗೆ ಅಪಾರ. ಕನ್ನಡ ಅಕಾಡೆಮಿ ಸ್ವಯಂ ಸೇವಕರಾದ ನವೀನ್ ಮಲ್ಲಿಕಾರ್ಜುನಯ್ಯ, ಸಂಧ್ಯಾ ಸೂರ್ಯಪ್ರಕಾಶ್, ಶಶಿ ಬಸವರಾಜ್, ಗೌತಮ್ ಜಯಣ್ಣ, ಗೋಪಾಲಕೃಷ್ಣ ಸುಬ್ರಮಣಿ, ಮಹಾಂತೇಶ್ವರ ಸಿ.ಎಂ, ಮತ್ತು ಸುನೈನ ಶರ್ಮ ಮುಂತಾದವರು ಅಂತ ರ್ಜಾಲದಲ್ಲಿ ಕನ್ನಡ ಶಾಲೆಗಳನ್ನು ನಡೆಸಲು ಬೇಕಾದ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಿ ಅಮೆರಿಕದಲ್ಲಿ ಕನ್ನಡ ಭಾಷೆ ಪ್ರಚುರಪಡಿಸಲು ಶ್ರಮಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net