

ಮಂಡ್ಯದಲ್ಲಿ ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ದಿನಗಣನೆ ಆರಂಭವಾಗಿದೆ. ಸಮ್ಮೇಳನದ ನಿಯೋಜಿತ ಅಧ್ಯಕ್ಷ ಗೊ.ರು. ಚನ್ನಬಸಪ್ಪ ಜಾನಪದ ಸೊಗಡಿನ ಹಿರಿಯ ಸಾಹಿತಿ ಮತ್ತು ವಿದ್ವಾಂಸರು. ಸ್ವಾತಂತ್ರ್ಯ ಚಳವಳಿಯಲ್ಲಿ ಪಾಲ್ಗೊಂಡಿದ್ದ ಗೊರುಚ ದೇಶ ಮತ್ತು ನಾಡಿನ ಹಲವು ಸ್ಥಿತ್ಯಂತರಗಳಿಗೆ ಸಾಕ್ಷಿಯಾಗಿದ್ದಾರೆ. ಭಾರತದಲ್ಲಿಯೇ ಮೊದಲ ಬಾರಿಗೆ ಕರ್ನಾಟಕದಲ್ಲಿ ಜಾನಪದ ವಿಶ್ವವಿದ್ಯಾಲಯ ಸ್ಥಾಪಿಸುವಲ್ಲಿ ಇವರ ಪಾತ್ರ ದೊಡ್ಡದು. ಕನ್ನಡ ಭಾಷೆ ಮತ್ತು ಸಾಹಿತ್ಯಕ್ಕೆ ಸಂಬಂಧಿಸಿದಂತೆ ವಿಜಯವಾಣಿಗೆ ನೀಡಿದ ಸಂದರ್ಶನದಲ್ಲಿ ಮುಕ್ತ ಮನಸ್ಸಿನಿಂದ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಕನ್ನಡವು ಹಲವು ಆಯಾಮಗಳಲ್ಲಿ ಆಪತ್ತು ಎದುರಿಸುತ್ತಿದೆ ಎಂಬ ಭಾವನೆ ವ್ಯಕ್ತವಾಗುತ್ತಿರುವ ಕಾಲಘಟ್ಟದಲ್ಲಿ ನೀವು ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದೀರಿ. ನಿಮ್ಮ ಮಾತಿಗೆ ನಾಡು ಕಾತರದಿಂದ ಕಾಯುತ್ತಿದೆ. ಏನು ನಿರೀಕ್ಷೆ ಇಟ್ಟುಕೊಳ್ಳಬಹುದು? ಸಹಸ್ರಾರು ವರ್ಷಗಳಿಂದ ಸದೃಢವಾಗಿ ಉಳಿದು ಬೆಳೆದಿರುವ ಕನ್ನಡ ಈಗ ಎದುರಿಸುತ್ತಿರುವ ಆಪತ್ತೆಂದರೆ ಅದು ಕಲಬೆರಕೆಗಳಿಗೆ ಒಳಗಾಗುತ್ತಿರುವುದು. ಇದಕ್ಕೆ ಕಾರಣ, ಇಂಗ್ಲಿಷ್ ಭಾಷೆಯ ದಾಳಿ ಮತ್ತು ಹಿಂದಿಯ ಹಾವಳಿ. ಈ ಎರಡನ್ನೂ ತಪ್ಪಿಸಿದರೆ ಮಾತ್ರ ಕನ್ನಡದ ಪರಿಶುದ್ಧತೆ ಉಳಿಯಲು ಸಾಧ್ಯ. ನಮ್ಮ ಭಾಷೆಗೆ ಒದಗಿರುವ ಈ ಆಪತ್ತು ಕನ್ನಡಿಗರ ಅಸ್ಮಿತೆಗೇ ಒದಗಿದ ಆಪತ್ತು. ಆದ್ದರಿಂದ ಕನ್ನಡಿಗರು ತಮ್ಮ ಮಾತೃಭಾಷೆಯ ಸ್ವರೂಪಕ್ಕೆ ಭಂಗವುಂಟಾಗದಂತೆ ನೋಡಿಕೊಳ್ಳಬೇಕು.
ಪ್ರತಿ ಬಾರಿ ಸಾಹಿತ್ಯ ಸಮ್ಮೇಳನದಲ್ಲಿ ಸಮ್ಮೇಳನಾಧ್ಯಕ್ಷರಾದವರಿಗೆ ಒಂದು ವರ್ಷ ಕಾಲ ಕನ್ನಡ ಸಾಹಿತ್ಯ ಪರಿಷತ್ತಿನೊಂದಿಗೆ ತೊಡಗಿಸಿಕೊಳ್ಳಲು ಅವಕಾಶವಿದೆ. ಆದರೆ ಸಮ್ಮೇಳನಾಧ್ಯಕ್ಷರ ಆಯ್ಕೆ ಆದಾಗಿನಿಂದ ಸಮ್ಮೇಳನ ನಡೆಯುವವರೆಗೂ ಮುಂಚೂಣಿಯಲ್ಲಿರುತ್ತಾರೆ. ನಂತರದಲ್ಲಿ ಅವರು ಸಾರ್ವಜನಿಕವಾಗಿ ಕಾಣಿಸುವುದೇ ಇಲ್ಲ. ಸಮ್ಮೇಳನಾಧ್ಯಕ್ಷರಾಗಿ ಈ ಒಂದು ವರ್ಷದ ಅವಧಿಯನ್ನು ನೀವು ಯಾವ ರೀತಿ ಬಳಸಿಕೊಳ್ಳಲಿದ್ದೀರಿ? ನಿಜ. ಸಮ್ಮೇಳನದ ಸರ್ವಾಧ್ಯಕ್ಷರು ಕೇವಲ ಸಮ್ಮೇಳನ ನಡೆಯುವ ಮೂರು ದಿನಗಳ ಉತ್ಸವ ಮೂರ್ತಿಯಾಗದೆ, ಮುಂದಿನ ಸಮ್ಮೇಳನದವರೆಗೂ ಅವರ ಅನುಭವವನ್ನು ಪರಿಷತ್ತು ಬಳಸಿಕೊಳ್ಳುವಂತಾಗಬೇಕು. ಅವರೊಡನೆ ಪರಿಷತ್ತಿನ ಅಧ್ಯಕ್ಷರು ಆಗಿಂದಾಗ ಸಮಾಲೋಚನೆ ನಡೆಸುವಂತಾಗಬೇಕು. ರಾಜರತ್ನಂ ಅವರು ಸಮ್ಮೇಳನಾಧ್ಯಕ್ಷರಾಗಿದ್ದಾಗ ಅಂತಹ ಒಂದು ಕ್ರಮವಿತ್ತು. ಪರಿಷತ್ತು ನಿಯತಕಾಲಿಕವಾಗಿ ಏರ್ಪಡಿಸುವ ಕಾರ್ಯಕ್ರಮಗಳಲ್ಲಿ ಅವರು ಪಾಲುಗೊಳ್ಳುವಂತಾಗಬೇಕು. (ಆದರೆ ಈ ಸಲದ ಅಧ್ಯಕ್ಷನಾಗಿರುವ ನನಗೆ ವೃದ್ಧಾಪ್ಯದಿಂದಾಗಿ ವಿನಾಯಿತಿ ಇರಬೇಕು!)
ಕನ್ನಡ ಸಾಹಿತ್ಯ ಪುಸ್ತಕ ಕ್ಷೇತ್ರದ ಈಗಿನ ಬೆಳವಣಿಗೆ ಬಗ್ಗೆ ನಿಮ್ಮ ಅನಿಸಿಕೆ ಏನು? ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದೆಯೇ? ಬದಲಾವಣೆ ಆಗಬೇಕಿದ್ದರೆ ಏನು ಬದಲಾವಣೆ ಆಗಬೇಕು? ಈಗ ವರ್ಷ ವರ್ಷಕ್ಕೆ ಗ್ರಂಥ ಪ್ರಕಟಣೆಯ ಕಾರ್ಯ ವಿಸ್ತಾರಗೊಳ್ಳುತ್ತಿದೆ. ಸಾಕಷ್ಟು ಸಂಖ್ಯೆಯ ಗ್ರಂಥಗಳು ಪ್ರಕಟವಾಗುತ್ತಿವೆ. ಆದರೆ ಪ್ರಕಟವಾದ ಗ್ರಂಥಗಳನ್ನು ಓದುಗರಿಗೆ ಮುಟ್ಟಿಸುವಲ್ಲಿ ಕ್ರಮಬದ್ಧತೆ ಇರುವಂತೆ ಕಾಣುವುದಿಲ್ಲ. ಈ ದಿಸೆಯಲ್ಲಿ ಮಹತ್ವದ ಪಾತ್ರ ವಹಿಸಬೇಕಾದ ವ್ಯವಸ್ಥೆ ಎಂದರೆ, ಗ್ರಂಥಾಲಯಗಳಿಗೆ ಸಗಟು ಗ್ರಂಥಕೊಳ್ಳುವುದು. ಆದರೆ ಈ ವ್ಯವಸ್ಥೆ ಕಳೆದ ನಾಲ್ಕು ವರ್ಷಗಳಿಂದ ಸ್ಥಗಿತಗೊಂಡು ಪ್ರಕಟಿತ ಗ್ರಂಥಗಳು ಜ್ಞಾನಪ್ರಸಾರಕ್ಕೆ ಬಳಕೆಯಾಗದಿರುವ ಬಗೆಗೆ, ಅದರಿಂದ ಪ್ರಕಾಶನ ಸಂಸ್ಥೆಗಳಿಗೆ ಉಂಟಾಗಿರುವ ತೊಂದರೆಗಳ ಬಗೆಗೆ ಕರ್ನಾಟಕ ಕನ್ನಡ ಬರಹಗಾರರು ಮತ್ತು ಪ್ರಕಾಶಕರ ಸಂಘವು ಮತ್ತೆ ಮತ್ತೆ ಸರ್ಕಾರದಲ್ಲಿ ಮನವಿ ಮಾಡಿಕೊಂಡಿದ್ದರೂ, ಸಾಕಷ್ಟು ಗ್ರಂಥಾಲಯ ತೆರಿಗೆಯ ಹಣ ಸಂಗ್ರಹವಾಗಿದ್ದರೂ ಸಗಟು ಕೊಳ್ಳುವಿಕೆ ನಡೆಯದಿರುವುದು ನಿಜಕ್ಕೂ ವಿಷಾದಕರ. ಗ್ರಂಥೋದ್ಯಮಕ್ಕೆ ಸಂಬಂಧಿಸಿದಂತೆ ಕರ್ನಾಟಕ ಕನ್ನಡ ಬರಹಗಾರರು ಮತ್ತು ಪ್ರಕಾಶಕರ ಸಂಘವು ಸರ್ಕಾರಕ್ಕೆ ಕಳುಹಿಸಿದ ಪ್ರಸ್ತಾವನೆಯನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಂಡು, ಆ ಕ್ಷೇತ್ರವನ್ನು ಹೆಚ್ಚು ಬಲಪಡಿಸಬೇಕೆಂದು ಸರ್ಕಾರವನ್ನು ಒತ್ತಾಯಿಸುತ್ತೇನೆ.
ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ತಾವು ಹಲವು ಪ್ರಮುಖ ತೀರ್ವನಗಳನ್ನು ತೆಗೆದುಕೊಂಡವರು. ನಿಮ್ಮ ದೃಷ್ಟಿಯಲ್ಲಿ ಪರಿಷತ್ ಯಾವ ದಿಕ್ಕಿನಲ್ಲಿ ಸಾಗಬೇಕಿದೆ? ನಾನು ಪರಿಷತ್ತಿನ ಅಧ್ಯಕ್ಷನಾಗಿ ಕೈಗೊಂಡ ನಿರ್ಧಾರಗಳಲ್ಲಿ ಮುಖ್ಯವಾದವುಗಳೆಂದರೆ, ಪರಿಷತ್ತು ಸ್ವಾವಲಂಬಿಯಾಗಬೇಕೆಂದು ಒಬ್ಬ ಕನ್ನಡಿಗ-ಒಂದು ರೂಪಾಯಿ ಯೋಜನೆ, ಸಾಹಿತ್ಯ ಸಮ್ಮೇಳನದಲ್ಲಿ ಪೂರ್ಣ ಚಿಂತನೆಗೆ ಅವಕಾಶವಾಗದ ವಿವಿಧ ಸಾಹಿತ್ಯ ವಿಷಯಗಳ ರಾಜ್ಯಮಟ್ಟದ ಸಮಾವೇಶಗಳು, ಮೊದಲ ಬಾರಿಗೆ ರಾಜ್ಯದ ಅಂದಿನ 174 ತಾಲ್ಲೂಕುಗಳಲ್ಲೂ ಪರಿಷತ್ತಿನ ಕ್ಷೇತ್ರ ಘಟಕಗಳ ರಚನೆ, ದತ್ತಿನಿಧಿ ಯೋಜನೆಯಲ್ಲಿ ಗಣನೀಯ ನಿಧಿಸಂಗ್ರಹ; ಪರಿಷತ್ತಿನ ಸಿಬ್ಬಂದಿಯನ್ನು ಸರ್ಕಾರದ ಶಾಶ್ವತ ಅನುದಾನದ ವ್ಯಾಪ್ತಿಗೆ ಒಳಪಡಿಸಿದುದು; ಅಂತಾರಾಜ್ಯ ಭಾಷಾವಿನಿಮಯ ಕಾರ್ಯಕ್ರಮಗಳು, ಮೊದಲ ಬಾರಿಗೆ ಬೆಂಗಳೂರು ಹೊರತಾಗಿ ಪರಿಷತ್ತಿನ ವಾರ್ಷಿಕ ಸರ್ವಸದಸ್ಯರ ಸಭೆ, ಇತ್ಯಾದಿ. ಪರಿಷತ್ತು ಅದರ ಸ್ಥಾಪಕರ ಆಶಯದಂತೆ, ತನ್ನ ಧ್ಯೇಯೋದ್ದೇಶಗಳಿಗೆ ಭಂಗವುಂಟಾಗದಂತೆ ಸಮಕಾಲೀನ ಸಾಹಿತ್ಯ-ಸಂಸ್ಕೃತಿ ಕ್ಷೇತ್ರದ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಕಾರ್ಯನಿರ್ವಹಿಸಿಕೊಂಡು ಹೋಗುವಂತಾಗಬೇಕು ಎನ್ನುವುದು ನನ್ನ ನಿರೀಕ್ಷೆ.
ಹನ್ನೆರಡನೆಯ ಶತಮಾನದಲ್ಲಿ ನಡೆದ ಅಪೂರ್ವ ಸಮಾಜೋ-ಧಾರ್ವಿುಕ ಆಂದೋಲನದ ಸಂದೇಶವನ್ನು ಇಂದಿನ ತಲೆಮಾರಿಗೆ ಮುಟ್ಟಿಸುವ ಆಶಯ ಹೊಂದಿರುವ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷನಾಗಿ ಎರಡು ದಶಕಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸುವ ಅವಕಾಶ ನನ್ನದಾಗಿತ್ತು. ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯನಿರ್ವಹಣೆಯ ಅನುಭವವನ್ನು ಬಳಸಿಕೊಂಡು, ಆ ಸಂಸ್ಥೆಯಂತೆಯೇ ಶರಣ ಸಾಹಿತ್ಯ ಪರಿಷತ್ತನ್ನೂ ಅಖಿಲ ಭಾರತ ಮಟ್ಟಕ್ಕೆ ಬೆಳೆಸಿದೆನೆಂಬ ತೃಪ್ತಿ ನನಗಿದೆ. ಹನ್ನೆರಡನೆಯ ಶತಮಾನದಲ್ಲಿ ಬಸವಾದಿ ಶರಣರಿಂದ ರಚನೆಗೊಂಡ ವಚನ ಸಾಹಿತ್ಯದ ಬಗೆಗೆ ಹೆಚ್ಚಿನ ಅಧ್ಯಯನ ಸಂಶೋಧನೆ, ಪ್ರಕಟಣೆ, ಪ್ರಸಾರ ಕಾರ್ಯ ನಡೆಸಲು ವಚನ ವಿಶ್ವವಿದ್ಯಾಲಯವೊಂದು ಸ್ಥಾಪನೆಯಾಗಬೇಕೆಂಬುದು ಮತ್ತು ಈಗ ಬಸವ ಕಲ್ಯಾಣದಲ್ಲಿ ನಿರ್ವಣಗೊಳ್ಳುತ್ತಿರುವ ನೂತನ ಅನುಭವ ಮಂಟಪವು ಜಾಗತಿಕ ಅಧ್ಯಯನ ಮತ್ತು ವಿಚಾರ ವಿನಿಮಯ ಕೇಂದ್ರವಾಗಿ ಅಭಿವೃದ್ಧಿಗೊಳ್ಳಬೇಕೆಂಬುದು ನನ್ನ ಆಶಯ.
ಈ ಗಡಿ ವಿವಾದದಂತೆಯೇ ಜಲವಿವಾದ, ವಲಸೆ ವಿವಾದ ಇತ್ಯಾದಿ ಅಂತಾರಾಜ್ಯ ವಿವಾದಗಳಿರುವುದು ನಿಜ. ಈ ವಿವಾದಗಳನ್ನು ಜೀವಂತವಾಗಿಡುವಲ್ಲಿ ಕೆಲವು ಸರ್ಕಾರಗಳು, ಪ್ರಮುಖವಾಗಿ ಕೇಂದ್ರ ಸರ್ಕಾರ ತನ್ನ ಅಸ್ತಿತ್ವವನ್ನು ಕಂಡುಕೊಳ್ಳುತ್ತಿರಬಹುದು. ಇದು ಸಲ್ಲದು. ಇದಕ್ಕೊಂದು ನಿರ್ದಿಷ್ಟವಾದ ಮತ್ತು ಶಾಸನಬದ್ಧವಾದ ರಾಷ್ಟ್ರೀಯ ನೀತಿ ಅಗತ್ಯ. ಆದ್ದರಿಂದ ಕೇಂದ್ರ ಸರ್ಕಾರವು ಈ ಸಲುವಾಗಿಯೇ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಕರೆದು, ಈ ವಿವಾದಗಳಿಗೆ ಸಂಬಂಧಿಸಿದಂತೆ ಒಂದು ಖಚಿತ ನಿರ್ಧಾರ ಕೈಗೊಳ್ಳಬೇಕು. ಈ ವಿವಾದಗಳಿಂದಾಗಿ ರಾಜ್ಯ-ರಾಜ್ಯಗಳ ಜನರ ಅನಗತ್ಯ ಘರ್ಷಣೆಗಳಿಗೆ ಅವಕಾಶವಾಗದಂತೆ ನೋಡಿಕೊಳ್ಳಬೇಕು.
ನಮ್ಮ ಜನಪದರ ಪ್ರಧಾನನೆಲೆ ಹಳ್ಳಿಗಳು. ಪ್ರಜಾಪ್ರಭುತ್ವದ ನೆಲೆಗಟ್ಟು ಕೂಡ ಅದೇ ಹಳ್ಳಿಗಳೇ ಆಗಿವೆ. ಒಂದು ಕಾಲದಲ್ಲಿ ಈ ಹಳ್ಳಿಗಳಲ್ಲಿ ಜನಪದ ಪರಂಪರೆ ದಟ್ಟವಾಗಿತ್ತು. ಈಗ ರಾಜಕೀಯದ ಅತಿಯಾದ ಪ್ರವೇಶದಿಂದ ಗ್ರಾಮೀಣ ಜನಜೀವನ, ಸಂಸ್ಕೃತಿ, ಜನಪದರಲ್ಲಿದ್ದ ನೈತಿಕತೆ, ಆತ್ಮವಿಶ್ವಾಸ ನಾಶವಾಗಿದೆ ಅನಿಸುತ್ತದೆಯೇ? ಹಾಗಿದ್ದರೆ, ರಾಜಕೀಯದ ನಡುವೆಯೂ ಅದನ್ನು ಉಳಿಸಿಕೊಳ್ಳುವ ಬಗೆ ಹೇಗೆ? ನಾನು ಜಾನಪದ ಅಂಗಳದಲ್ಲೇ ಹುಟ್ಟಿ ಬೆಳೆದವನಾಗಿ ಸಹಜವಾಗಿಯೇ ಜನಪದ ಸಾಹಿತ್ಯ ಮತ್ತು ಕಲೆಗಳ ಆಸಕ್ತಿ ನನ್ನ ಮೈಗೂಡಿಕೊಂಡಿದ್ದವು. ಅಂತೆಯೇ ಆ ಕ್ಷೇತ್ರದಲ್ಲೇ ನನ್ನ ಪಾಲಿನ ಸೇವೆ ಸಲ್ಲಿಸಲು ಸಾಧ್ಯವಾಯಿತೆಂದು ತೃಪ್ತಿ ನನಗಿದೆ. ನಮ್ಮ ಹಳ್ಳಿಗಳು ಮತ್ತು ಗುಡ್ಡನಾಡಿನ ಜನರ ಬದುಕೇ ಜಾನಪದವಾಗಿದ್ದು, ಆಧುನಿಕತೆಯ ಬಿರುಗಾಳಿಯಲ್ಲಿ ಅದು ಮರೆಯಾಗುತ್ತಿರುವುದು ನಿಜ. ಆದರೂ ಜಾನಪದ ಕ್ಷೇತ್ರತಜ್ಞರ ಪ್ರಯತ್ನದಿಂದಾಗಿ ನಮ್ಮ ಜನಪದ ಕಲೆಗಳ ಸಂರಕ್ಷಣೆಯಲ್ಲಿ ಒಂದಷ್ಟು ಕೆಲಸವಾಗಿದೆ. ಆದರೂ ಗ್ರಾಮೀಣ ಪ್ರದೇಶದ ಶ್ರಮಜೀವಿಗಳ ಸಾಂಸ್ಕೃತಿಕ ಬದುಕಿನಲ್ಲಿ ವಿಶ್ವಾಸ ಬೆಳೆಸುವ ದಿಸೆಯಲ್ಲಿ ಇನ್ನೂ ಆಗಬೇಕಾದ ಕೆಲಸ ಬಹಳವಿದೆ.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರಿಗೂ ಸರಿಪಾಲು ನೀತಿಯಂತೆ ಸರ್ಕಾರವು ಜನಪದ ಕಲೆ ಮತ್ತು ಕಲಾವಿದರಿಗೂ ಹೆಚ್ಚು ಉತ್ತೇಜನ ಮತ್ತು ನೆರವು ನೀಡಬೇಕು. ಜಾನಪದಕ್ಕೇ ಮೀಸಲಾದ ಬಹುಶಃ ವಿಶ್ವದಲ್ಲೇ ಮೊದಲೆನಿಸಿದ ವಿಶ್ವವಿದ್ಯಾಲಯವೊಂದನ್ನು ಸ್ಥಾಪಿಸಿರುವ ನಮ್ಮ ಕರ್ನಾಟಕ ರಾಜ್ಯ ಸರ್ಕಾರಕ್ಕೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ. ಆದರೆ, ಆ ವಿಶಿಷ್ಟ ವಿಶ್ವವಿದ್ಯಾಲಯ ಸರ್ಕಾರದ ಆರ್ಥಿಕ ನೆರವಿಲ್ಲದೆ ಸೊರಗಿ ಹೋಗುತ್ತಿರುವುದು ನನಗೆ ವ್ಯಸನವುಂಟುಮಾಡಿದೆ. ಜಾನಪದದ ಸತ್ವ-ಸೌಂದರ್ಯಗಳನ್ನು ಅರ್ಥ ಮಾಡಿಕೊಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈ ಬಗೆಗೆ ಗಮನಕೊಟ್ಟು ಕರ್ನಾಟಕ ಜಾನಪದ ವಿಶ್ವವಿದ್ಯಾಲಯವನ್ನು ರಾಷ್ಟ್ರದ ಒಂದು ಪ್ರತಿಷ್ಠಿತ ಸಂಸ್ಥೆಯನ್ನಾಗಿ ಬೆಳೆಸಬೇಕೆಂದು ಮನವಿ ಮಾಡಿಕೊಳ್ಳುತ್ತೇನೆ.