

ಬೆಂಗಳೂರು ರಾಜ್ಯದಲ್ಲಿ 1995ರ ನಂತರ ಆರಂಭವಾಗಿರುವ ಖಾಸಗಿ ಕನ್ನಡ ಶಾಲೆಗಳನ್ನು ಸರ್ಕಾರವು ನಿರ್ಲಕ್ಸಿಸಿರುವ ಕಾರಣ ಕನ್ನಡ ರಾಜ್ಯೋತ್ಸವವನ್ನು ಕರಾಳ ದಿನವಾಗಿ ಆಚರಿಸಲು ಖಾಸಗಿ ಶಾಲಾ ಸಂಘಟನೆ (ಕೃಪಾ) ನಿರ್ಧರಿಸಿದೆ.
ಈ ಕುರಿತು ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘಟನೆ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ, ಖಾಸಗಿ ಕನ್ನಡ ಶಾಲೆಗಳನ್ನು ಅನುದಾನಕ್ಕೆ ಒಳಪಡಿಸುವಂತೆ 30 ವರ್ಷದಿಂದ ಹೋರಾಟ ಮಾಡುತ್ತಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದರು.
ಪ್ರತಿ ನವಂಬರ್‌ನಲ್ಲಿ ಕನ್ನಡದ ನಾಡು ನುಡಿ ಕುರಿತು ಉದ್ದುದ್ದ ಭಾಷಣ ಮಾಡುವ ನಾಯಕರು, ಕನ್ನಡ ಸಾಹಿತಿಗಳು, ಪ್ರಗತಿಪರ ಚಿಂತಕರಿಗೆ ನಮ್ಮ ಶಾಲೆಗಳು ಮತ್ತು ಶಿಕ್ಷಕರು ಕಾಣಿಸುತ್ತಿಲ್ಲ. ಸಾವಿರಾರು ಶಿಕ್ಷಕರು 30 ವರ್ಷದಿಂದ ಉಚಿತವಾಗಿ ಕನ್ನಡ ಕಲಿಸಿ ಬಿಡಿಗಾಸು ಪಡೆಯದೆ ನಿವೃತ್ತಿ ಹೊಂದುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇನ್ನೂ ಎಷ್ಟು ವರ್ಷ ಶಿಕ್ಷಕರ ತ್ಯಾಗ ಬಲಿದಾನ ಆಗಬೇಕು. ಇಂತಹ ಅಮಾನವೀಯ ಸಂದರ್ಭದಲ್ಲಿ ನಮ್ಮ ಶಿಕ್ಷಕರು ಮತ್ತು ಶಾಲೆಗಳನ್ನು ರಕ್ಷಿಸಿಕೊಳ್ಳಲು ನಮಗೆ ಬೇರೆ ದಾರಿ ಕಾಣುತ್ತಿಲ್ಲ.
ಕನ್ನಡ ರಾಜ್ಯೋತ್ಸವವನ್ನು ಶಿಕ್ಷಕರು ಆಡಳಿತ ಮಂಡಳಿ ಸದಸ್ಯರು ಕಪ್ಪು ಪಟ್ಟಿ ಧರಿಸಿ ಕರಾಳ ದಿನವಾಗಿ ಆಚರಿಸಲು ಮತ್ತು ನ್ಯಾಯಾಲಯದ ಮೊರೆ ಹೋಗಲು ನಿರ್ಣಯ ತೆಗೆದುಕೊಳ್ಳಲಾಗಿದೆ ಎಂದರು.
ಉಳಿದ ಸಮಸ್ಯೆಗಳಾದ ಮಾನ್ಯತೆ ನವೀಕರಣ, ಆರ್‌ಟಿಇ ಮರು ಚಾಲನೆ, ಆರ್‌ಟಿಇ ಶುಲ್ಕ ಮರು ಪಾವತಿ, ಗ್ರಾಚುಟಿ ಸೇರಿ ಹಲವು ಸಮಸ್ಯೆಗಳ ವಿರುದ್ಧ ನ್ಯಾಯಾಲಯದ ಮೊರೆ ಹೋಗಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.