

ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನೀಡಲಾಗುವ ‘ನಾಗಡಿಕೆರೆ-ಕಿಟ್ಟಪ್ಪ ರುಕ್ಮಿಣಿ ತೀರ್ಥಹಳ್ಳಿ ದತ್ತಿ ಪ್ರಶಸ್ತಿ’ಗೆ ಈ ಬಾರಿ ‘ವಿಜಯವಾಣಿ’ ಸಂಪಾದಕ ಕೆ.ಎನ್. ಚನ್ನೇಗೌಡ ಅವರನ್ನು ಆಯ್ಕೆ ಮಾಡಲಾಗಿದೆ. ಕಸಾಪ ಅಧ್ಯಕ್ಷ ಡಾ. ಮಹೇಶ ಜೋಶಿ ಅಧ್ಯಕ್ಷತೆಯಲ್ಲಿ ನಡೆದ ಆಯ್ಕೆ ಸಮಿತಿ ಸಭೆಯಲ್ಲಿ ಸರ್ವಾನುಮತದಿಂದ ಈ ನಿರ್ಣಯ ಕೈಗೊಳ್ಳಲಾಗಿದೆ. ಪ್ರಶಸ್ತಿಯು ಹತ್ತು ಸಾವಿರ ರೂ. ನಗದು, ಸ್ಮರಣಿಕೆಯನ್ನು ಒಳಗೊಂಡಿದ್ದು ಕಾರ್ಯನಿರತ ಪತ್ರಕರ್ತರಿಗೆ ಪ್ರತಿ ವರ್ಷ ಈ ಪ್ರಶಸ್ತಿ ನೀಡಲಾಗುತ್ತದೆ ಎಂದು ಪರಿಷತ್ ಅಧ್ಯಕ್ಷ ನಾಡೋಜ ಡಾ.ಮಹೇಶ್ ಜೋಶಿ ತಿಳಿಸಿದ್ದಾರೆ.
ಕನ್ನಡ ಭಾಷಾ ಲೋಕದ ಪ್ರಾತಿನಿಧಿಕ ಸಂಸ್ಥೆ ಕನ್ನಡ ಸಾಹಿತ್ಯ ಪರಿಷತ್ ನೀಡಿರುವ ಈ ಗೌರವ ನನ್ನನ್ನು ಈ ಹಂತಕ್ಕೆ ಬೆಳೆಸಿದ ವಿಆರ್ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ. ವಿಜಯ ಸಂಕೇಶ್ವರ, ಎಂಡಿ ಆನಂದ ಸಂಕೇಶ್ವರ ಹಾಗೂ ವಿಜಯವಾಣಿಯನ್ನು ಕನ್ನಡದ ನಂ1 ಪತ್ರಿಕೆಯಾಗಿ ಪೋಷಿಸುತ್ತಿರುವ ಕೋಟಿ ಕೋಟಿ ಕನ್ನಡಿಗರಿಗೆ ಸಲ್ಲಬೇಕು. | ಕೆ.ಎನ್. ಚನ್ನೇಗೌಡ