

ಬೆಂಗಳೂರು: ಮಂಡ್ಯದಲ್ಲಿ ಜೂನ್ 7ರಿಂದ 9ರವರೆಗೂ ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಾರ್ವಜನಿಕರಿಂದ ‘ಧ್ಯೇಯವಾಕ್ಯ ಮತ್ತು ಲಾಂಛನ’ ಆಹ್ವಾನಿಸಲಾಗಿದೆ.
ಕನ್ನಡ ಸಾಹಿತ್ಯ ಪರಿಷತ್ತಿನ ಪರಂಪರೆ ಮತ್ತು ಹಿರಿಮೆ, ಮಂಡ್ಯ ಜಿಲ್ಲೆಯ ವಿಶೇಷತೆ ಮತ್ತು ಅನನ್ಯತೆ, ಅಲ್ಲಿನ ಸಾಧಕರು, ಉತ್ಪನ್ನಗಳ ವೈಶಿಷ್ಟ್ಯದ ಜೊತೆಗೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಮಹತ್ವ ವಿವರಿಸುವ ರೀತಿಯಲ್ಲಿ ‘ಧ್ಯೇಯವಾಕ್ಯ ಮತ್ತು ಲಾಂಛನ’ ಇರಬೇಕು ಎಂದು ಪರಿಷತ್ತು ಅಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ ತಿಳಿಸಿದ್ದಾರೆ.
ಸಮ್ಮೇಳನದ ಪ್ರತಿಯೊಂದು ಪ್ರಕ್ರಿಯೆಯೂ ಪಾರದರ್ಶಕವಾಗಿ ನಡೆಯಲಿದ್ದು, ಕನ್ನಡಿಗರ ಅಭಿಪ್ರಾಯಕ್ಕೂ ಮನ್ನಣೆ ನೀಡಲಾಗುವುದು. ಈ ನಿಟ್ಟಿನಲ್ಲಿ ಆಯ್ಕೆಯಾದ ಧ್ಯೇಯವಾಕ್ಯ ಮತ್ತು ಲಾಂಛನ ರೂಪಿಸಿದವರನ್ನು ಸಮ್ಮೇಳನದ ವೇದಿಕೆಯಲ್ಲಿ ಸನ್ಮಾನಿಸಲಾಗುವುದು. ಆಸಕ್ತರು ಏ. 30ರೊಳಗೆ ಅಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್ತು, ಚಾಮರಾಜಪೇಟೆ, ಬೆಂಗಳೂರು - 18. ಈ ವಿಳಾಸಕ್ಕೆ ‘ಧ್ಯೇಯವಾಕ್ಯ ಮತ್ತು ಲಾಂಛನ’ ಕಳುಹಿಸುವಂತೆ ಕೋರಿದ್ದಾರೆ.