

ಮಡಿಕೇರಿ: ರೋಟರಿ ಸಂಸ್ಥೆಯ ವತಿಯಿಂದ ಕನ್ನಡ ರಾಜ್ಯೋತ್ಸವ ಹಿನ್ನಲೆಯಲ್ಲಿ ನಗರದ ಪತ್ರಿಕಾ ವಿತರಕರನ್ನು ಗೌರವಿಸಲಾಯಿತು.
ಮಡಿಕೇರಿ ರೋಟರಿ ಸಭಾಂಗಣದಲ್ಲಿ ಶನಿವಾರ ಆಯೋಜಿತ ಕಾರ್ಯಕ್ರಮದಲ್ಲಿ ರೋಟರಿ ಸಂಸ್ಥೆಯ ಅಧ್ಯಕ್ಷ ಕೆ.ಸಿ.ಕಾರ್ಯಪ್ಪ ಮಾತನಾಡಿ, ಮಡಿಕೇರಿಯ ಪತ್ರಿಕಾವಿತರಕರ ಸೇವಾ ಕಾರ್ಯವನ್ನು ಶ್ಲಾಘಿಸಿ ರೋಟರಿ ವತಿಯಿಂದ ಸನ್ಮಾನಿಸಲಾಗುತ್ತಿದೆ. ಸೂರ್ಯ ಉದಯಿಸುವ ಮುನ್ನವೇ ಓದುಗರಿಗೆ ಪತ್ರಿಕೆಗಳನ್ನು ವಿತರಿಸುವ ಕೈಂಕರ್ಯದಲ್ಲಿ ಸಕ್ರಿಯರಾಗಿರುವವರು ಸಮಾಜದ ಅಭಿವಂದನೆಗೂ ಕಾರಣರಾಗುತ್ತಾರೆ ಎಂದೂ ಕಾರ್ಯಪ್ಪ ನುಡಿದರು.
ಈ ಸಂದರ್ಭ ಮಾತನಾಡಿದ ರೋಟರಿ ಜಿಲ್ಲೆಯ ಪಬ್ಲಿಕ್ ಇಮೇಜ್ ಸಮಿತಿ ಅಧ್ಯಕ್ಷ ಎಚ್.ಟಿ.ಅನಿಲ್, ಮಳೆ, ಚಳಿಯನ್ನೂ ಲೆಕ್ಕಿಸದೇ ಪತ್ರಿಕೆಗಳನ್ನು ಬೆಳಗ್ಗೆಯೇ ವಿತರಣೆ ಮಾಡುವ ಕಾರ್ಯದಲ್ಲಿ ತೊಡಗಿರುವ ಈ ಕರ್ತವ್ಯ ನಿಷ್ಟರ ಸೇವಾ ಮನೋಭಾವಕ್ಕೆ ಜನ ಸದಾ ಕೃತಜ್ಞರಾಗಿರಬೇಕು. ಆದರೆ ಮನೆಗಳಲ್ಲಿನ ನಾಯಿಗಳ ಕಚ್ಚುವಿಕೆಯಿಂದ ತಪ್ಪಿಸಿಕೊಂಡು ಪತ್ರಿಕೆಗಳನ್ನು ವಿತರಿಸುವ ಸವಾಲಿನ ಕೆಲಸದಲ್ಲಿ ತೊಡಗಿರುವ ವಿತರಕರ ಪತ್ರಿಕಾ ಬಿಲ್ ಮೊತ್ತವನ್ನೇ ಅನೇಕರು ಪಾವತಿಸದೇ ಸಮಸ್ಯೆ ಹೆಚ್ಚಿಸುತ್ತಿದ್ದಾರೆ. ವಿತರಕರ ಶ್ರಮ ಮತ್ತು ಸವಾಲಿನ ಬದುಕು ಜನರಿಗೆ ಇನ್ನಾದರೂ ಅರ್ಥವಾಗಬೇಕು ಎಂದರು.
ಮಡಿಕೇರಿಯ ಜನಪ್ರಿಯ ಪತ್ರಿಕಾ ವಿತರಣಾ ಸಂಸ್ಥೆಯ ಟಿ.ಜಿ.ಸತೀಶ್, ಶಿವಪ್ರಸಾದ್ ಭಟ್, ಬಿ.ಕೆ.ಉಮೇಶ್, ಎಸ್.ರವಿ, ಎಂ.ಜೆ.ರವಿ ಇವರನ್ನು ರೋಟರಿ ಜಿಲ್ಲೆ ೩೧೮೧ ನ ಮಾಜಿ ಗವರ್ನರ್‌ಗಳಾದ ಡಾ.ರವಿ ಅಪ್ಪಾಜಿ, ಮಾತಂಡ ಸುರೇಶ್ ಚಂಗಪ್ಪ, ಡಾ.ಎಂ.ಜಿ.ಪಾಟ್ಕರ್, ಜಯಲಕ್ಷ್ಮೀ ಪಾಟ್ಕರ್, ಅನಂತಸುಬ್ಬರಾವ್, ರೋಟರಿ ಜಿಲ್ಲೆಯ ಪಬ್ಲಿಕ್ ಇಮೇಜ್ ಸಮಿತಿ ಅಧ್ಯಕ್ಷ ಎಚ್.ಟಿ.ಅನಿಲ್ ವಲಯ ಸೇನಾನಿ ನಡಿಕೇರಿಯಂಡ ಅಚ್ಚಯ್ಯ, ಗೀತಾಗಿರೀಶ್, ಈಶ್ವರ ಭಟ್ ಸೇರಿದಂತೆ ಪ್ರಮುಖರು ಸನ್ಮಾನಿಸಿ ಗೌರವಿಸಿದರು.
ಕಾರ್ಯಕ್ರಮದಲ್ಲಿ ಮಡಿಕೇರಿ ರೋಟರಿ ಸಂಸ್ಥೆಯ, ಕಾರ್ಯದರ್ಶಿ ಸುದಯ್ ನಾಣಯ್ಯ, ಸಮುದಾಯ ಸೇವಾ ಸಮಿತಿ ಅಧ್ಯಕ್ಷ ಅನಿಲ್ ಕೃಷ್ಣಾನಿ, ನಿರ್ದೇಶಕಿ ಗೀತಾ ಗಿರೀಶ್, ಲಲಿತ ರಾಘವನ್ ಹಾಜರಿದ್ದರು.