

ಬೆಂಗಳೂರು: ತನ್ನ ಪತ್ನಿ ಮಾದಕ ವ್ಯಸನಿಯಾಗಿದ್ದು, ಡ್ರಗ್ ಪೆಡ್ಲರ್‌ನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂದು ಆರೋಪಿಸಿರುವ ಕನ್ನಡ ಚಿತ್ರರಂಗದ ನಟ, ನಿರ್ಮಾಪಕ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ಹೀಗೊಂದು ದಿನ ಹಾಗೂ ಅಪ್ಪುಗೆ ಎಂಬ ಹೆಸರಿನ ಚಿತ್ರಗಳಿಗೆ ಬಂಡವಾಳ ಹೂಡಿದ್ದ ನಟ ಹಾಗೂ ನಿರ್ಮಾಪಕ ಟಿ.ಚಂದ್ರಶೇಖರ್ ಎಂಬುವವರು ತಮ್ಮ ಪತ್ನಿ ನಮಿತಾ ಹಾಗೂ ಲಕ್ಷ್ಮೀಶ್ ಪ್ರಭು ಎಂಬಾತನ ವಿರುದ್ಧ ಚೆನ್ನಮ್ಮನ ಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಎರಡು ವರ್ಷಗಳ ಹಿಂದೆ ಚಂದ್ರಶೇಖರ್ ಹಾಗೂ ನಮಿತಾ ವಿವಾಹವಾಗಿದ್ದು, ಬನಶಂಕರಿ ಮೂರನೇ ಹಂತದ ಚೆನ್ನಮ್ಮನಕೆರೆ ಅಚ್ಚುಕಟ್ಟು ಠಾಣಾ ವ್ಯಾಪ್ತಿಯಲ್ಲಿ ವಾಸವಿದ್ದರು. ತನ್ನ ಪತ್ನಿ ಮಾದಕ ವ್ಯಸನಿಯಾಗಿದ್ದು, ಎಷ್ಟೇ ಬುದ್ಧಿವಾದ ಹೇಳಿದರೂ ಸಹ ಕದ್ದುಮುಚ್ಚಿ ಮಾದಕ ವಸ್ತು ಸೇವಿಸುವ ಅಭ್ಯಾಸ ಹೊಂದಿದ್ದಾಳೆ.
ಈ ಜನವರಿಯಿಂದ ಆಕೆಗೆ ಲಕ್ಷ್ಮೀಶ್ ಪ್ರಭು ಎಂಬ ಡ್ರಗ್ ಪೆಡ್ಲರ್ ಜತೆ ಅನೈತಿಕ ಸಂಬಂಧವಿದೆ. ಜೂ.16ರಂದು ಮನೆಯಲ್ಲಿ ಪತ್ನಿ ಹಾಗೂ ಲಕ್ಷ್ಮೀಶ್ ದೈಹಿಕ ಸಂಪರ್ಕದಲ್ಲಿದ್ದ ವೇಳೆ ನೋಡಿ ಪ್ರಶ್ನಿಸಿದಾಗ ಇಬ್ಬರೂ ಸೇರಿ ತನ್ನ ಮೇಲೆ ಹಲ್ಲೆ ನಡೆಸಿ ಪ್ರಾಣ ಬೆದರಿಕೆ ಹಾಕಿದ್ದಾರೆ. ಕೂಡಲೇ ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿ, ಹೊಯ್ಸಳ ವಾಹನವನ್ನು ಕರೆಯಿಸಿಕೊಂಡು ಠಾಣೆಗೆ ಬಂದು ದೂರು ನೀಡಿರುವುದಾಗಿ ಚಂದ್ರಶೇಖರ್ ಆರೋಪಿಸಿದ್ದಾರೆ.
ಪತ್ನಿಯಿಂದಲೂ ಪ್ರತಿದೂರು:
ಪತಿ ಟಿ.ಚಂದ್ರಶೇಖರನಿಗೆ ಮೊದಲೇ ಮದುವೆಯಾಗಿದ್ದು, ಮೊದಲ ಹೆಂಡತಿ ಮಕ್ಕಳಿದ್ದಾರೆ. ನನ್ನನ್ನು ಮದುವೆ ಮಾಡಿಕೊಳ್ಳುವ ಸಂದರ್ಭದಲ್ಲಿ ತನ್ನ ಹೆಂಡತಿಗೆ ವಿಚ್ಛೇಧನ ನೀಡಿರುವುದಾಗಿ ಪತ್ರ ತೋರಿಸಿ ನನ್ನನು ಮದುವೆ ಮಾಡಿಕೊಂಡರು. ಜೂ.16ರ ಮಧ್ಯಾಹ್ನ 1 ಗಂಟೆಯಲ್ಲಿ ನಮ್ಮ ಮನೆಯ ಮುಂದೆ ಗಲಾಟೆ ನಡೆಯುತ್ತಿತ್ತು. ಸದ್ದು ಕೇಳಿ ಹೊರಬಂದು ನೋಡಿದ್ದಾಗ ನನ್ನ ಸ್ನೇಹಿತ ಲಕ್ಷ್ಮೀಶ್ ಪ್ರಭುಗೆ ವಿನಾಕಾರಣ ಚಂದ್ರಶೇಖರ್ ಮತ್ತು ಆತನ ಸ್ನೇಹಿತರಾದ ಅರುಣ್, ಹೇಮಂತ್ ಥಳಿಸಿದ್ದಾರೆ.
ಆತನ ಬಟ್ಟೆ ಬಿಚ್ಚಿಸಿ ವೀಡಿಯೊ ಚಿತ್ರೀಕರಣ ಮಾಡಿಕೊಂಡಿದ್ದಾರೆ. ತನ್ನ ಮೇಲೆಯೂ ಚಾಕುವಿನಿಂದ ಹಲ್ಲೆ ಮಾಡಿದ್ದು, ಮನೆಯಲ್ಲಿ ಡ್ರಗ್ಸ್ ಇಟ್ಟು ಅರೆಸ್ಟ್ ಮಾಡಿಸಿ ಜೈಲಿಗೆ ಕಳುಹಿಸುತ್ತೇನೆ ಎಂದು ಜೀವ ಬೆದರಿಕೆ ಹಾಕಿದ್ದಾರೆ ಎಂಬುದು ನಮಿತಾ ಆರೋಪ ಮಾಡಿದ್ದಾರೆ. ನಟ, ನಿರ್ಮಾಪಕನ ಕೌಟುಂಬಿಕ ಕಿತ್ತಾಟ ಚೆನ್ನಮ್ಮನ ಕೆರೆ ಅಚ್ಚುಕಟ್ಟು ಪೊಲೀಸ್ ಠಾಣಾ ಮೆಟ್ಟಿಲೇರಿದ್ದು, ಪರಸ್ಪರ ದೂರು ಹಾಗೂ ಪ್ರತಿದೂರು ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.(ಏಜೆನ್ಸೀಸ್)