

ಬೆಂಗಳೂರು: ಗ್ಯಾರಂಟಿಗಳಿಂದ ಜನೋದ್ಧಾರವಾಗುತ್ತೇ ಎಂದು ಹಸಿ ಸುಳ್ಳು ಹೇಳಿದ್ದ ರಾಜ್ಯ ಸರ್ಕಾರಕ್ಕೆ, ಬೆಲೆ ಏರಿಕೆಯಿಂದಾಗಿ ಜನ ತತ್ತರಿಸುತ್ತಿರುವುದು ಕಾಣುತ್ತಿಲ್ಲ ಎಂದು ಮಾಜಿ ಸಿಎಂ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ರಾಜ್ಯ ಸರ್ಕಾರವು ನನಗೂ ಫ್ರೀ, ನಿನಗೂ ಫ್ರೀ ಎಂದು ಗ್ಯಾರಂಟಿಗಳ ಬಗ್ಗೆ ಜಾಗಟೆ ಹೊಡೆದಿತ್ತು. ಆದರೆ ಈ ಸರಕಾರಕ್ಕೆ ಮಾರುಕಟ್ಟೆಯಲ್ಲಿ ಗಗನಮುಖಿಯಾದ ಆಹಾರ ಪದಾರ್ಥಗಳ ಬೆಲೆ ಮೇಲೆ ನಿಯಂತ್ರಣವೇ ಇಲ್ಲ. ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ, ಕೃಷಿ ಉತ್ಪನ್ನ ಮಾರುಕಟ್ಟೆ ಇಲಾಖೆಗಳು ಜನರ ಕಣ್ಣೀರಿನಲ್ಲಿ ಗೆಣಸು ಬೇಯಿಸಿಕೊಳ್ಳುತ್ತಿದ್ದು, ಬೆಲೆ ಇಳಿಕೆ ಬಗ್ಗೆ ಚಿಂತನೆ ಮಾಡಿಲ್ಲ ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ಇದನ್ನೂ ಓದಿ: ಬಾಕಿ ಹಣ ವಸೂಲಿಗಾಗಿ ವ್ಯಕ್ತಿಯನ್ನು ಅರಬೆತ್ತಲೆಯಾಗಿ ಕೂರಿಸಿದ ಪೆಟ್ರೋಲ್ ಬಂಕ್ ಮಾಲೀಕ
ಅಧಿಕಾರಕ್ಕೆ ಬಂದ ಒಂದು ತಿಂಗಳು ಕಳೆದರೂ ಇನ್ನೊಬ್ಬರ ಮೇಲೆ ಗೂಬೆ ಕೂರಿಸುವ ಈ ಸರಕಾರವು ವರ್ಗಾವಣೆ ದಂಧೆಯ ದಾಸ್ಯಕ್ಕೆ ಬಿದ್ದಿದೆ. ಮಾರುಕಟ್ಟೆಯಲ್ಲಿ ಹೆಚ್ಚುತ್ತಿರುವ ಬೆಲೆಗಳ ಬಗ್ಗೆ, ಆಹಾರ ಪದಾರ್ಥಗಳ ದುಬಾರಿ ಬಗ್ಗೆ ಸರ್ಕಾರವು ಗಮನವನ್ನು ನೀಡಿಲ್ಲ ಎಂದಿದ್ದಾರೆ.
ಪ್ರಸ್ತುತ ಮಾರುಕಟ್ಟೆ ಬೆಲೆ ಏರಿಕೆ ಪಟ್ಟಿ ಓದಿದರೆ ಎದೆ ನಡುಗುತ್ತದೆ. ಅಕ್ಕಿ ಬೆಲೆ ಕೆಜಿಗೆ ಸರಾಸರಿ 20ರೂ. ಏರಿದ್ದರೆ, ಟೊಮ್ಯಾಟೋ ಬೆಲೆ ಕೆಜಿಗೆ 100 ರೂಪಾಯಿಗೆ ತಲುಪಿದೆ. ಈ ಏರಿಕೆಯ ಲಾಭ ಆ ಕಡೆ ರೈತನಿಗೂ ಇಲ್ಲ, ಈ ಕಡೆ ಗ್ರಾಹಕನಿಗೂ ಇಲ್ಲ. ಮಾರುಕಟ್ಟೆ ಬೆಲೆಗಳು ಬೆಂಕಿಯಲ್ಲಿ ಬೇಯುತ್ತಿದ್ದರೆ ಕಾಂಗ್ರೆಸ್ ಸರಕಾರವು ಆ ಬೇಗೆಯಲ್ಲಿ ಚಳಿ ಕಾಯಿಸಿಕೊಳ್ಳುತ್ತಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಮಕ್ಕಳಲ್ಲಿ ದಿಢೀರನೆ ಕಾಣಿಸಿಕೊಂಡ ವಿಚಿತ್ರ ಕಾಯಿಲೆ; ತುಮಕೂರು ಪೋಷಕರಲ್ಲಿ ಆತಂಕ
ರಾಜ್ಯ ಕಾಂಗ್ರೆಸ್ ತಾನು ಕೊಟ್ಟ ಭರವಸೆಗಳ ಬಗ್ಗೆ ಉತ್ತರವನ್ನು ನೀಡಬೇಕು. ಈ ಹಿಂದೆ ಬೆಲೆಗಳ ಇಳಿಕೆಯ ಬಗ್ಗೆ ಮಾತನಾಡಿದ್ದ ಕಾಂಗ್ರೆಸ್ ತಾನು ಹೇಳಿದ್ದೆಲ್ಲವನ್ನು ಮರೆತು ಹೋದಂತಿದೆ. 135 ಸೀಟು ಸಿಕ್ಕಿದ ಮೇಲೆ ಕಾಂಗ್ರೆಸ್ನ ಪ್ರಣಾಳಿಕೆ ಪುಸ್ತಕ ಮೂವತ್ತೇ ದಿನದಲ್ಲಿ ಗೆದ್ದಲು ಹಿಡಿಯಿತಾ? ಎಂದು ಕುಮಾರಸ್ವಾಮಿ ಸರ್ಕಾರವನ್ನು ಪ್ರಶ್ನಿಸಿದ್ದಾರೆ.
ನುಡಿದಂತೆ ನಡೆದಿದ್ದೇವೆ ಎಂದು ಕಾಂಗ್ರೆಸ್ ಹೇಳುತ್ತಿದ್ದು, ನುಡಿದಂತೆ ನಡೆದಿದ್ದರೆ ಬೆಲೆಗಳು ಲಂಗೂ ಲಗಾಮು ಇಲ್ಲದೆ ಆಕಾಶಕ್ಕೆ ಜಿಗಿಯುತ್ತಿರಲಿಲ್ಲ. ಮಾರುಕಟ್ಟೆಯ ದಲ್ಲಾಳಿಗಳಿಗೆ ಬಲ ನೀಡಿರುವ ಕಾಂಗ್ರೆಸ್, ಶಕ್ತಿ ಯೋಜನೆ ಮೂಲಕ ಮಹಿಳೆಯರ ಗಮನ ಬೇರೆಡೆಗೆ ಸೆಳೆದು ಅಡುಗೆ ಮನೆಯ ಬಜೆಟ್ಗೆ ಕೊಳ್ಳಿ ಇಟ್ಟಿದೆ ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಇದನ್ನೂ ಓದಿ: ಕಾಲೇಜಿನ ಎಲೆಕ್ಟ್ರಾನಿಕ್ ಉಪಕರಣ ಕದ್ದಿದ್ದ ಇಬ್ಬರು ಕಳ್ಳರ ಬಂಧನ
ಕಾಂಗ್ರೆಸ್ ಪಕ್ಷದ ಹೊಸ ಗ್ಯಾರಂಟಿಗಳು:
ಕಾಂಗ್ರೆಸ್ ಪಕ್ಷವು ರಾಜ್ಯದ ಜನರಿಗೆ ಐದು ಹೊಸ ಗ್ಯಾರಂಟಿಗಳನ್ನು ನೀಡಿದೆ. ಅಕ್ಕಿಭಾಗ್ಯ ಹಗಲು ಕನಸು, ಬೆಲೆ ಏರಿಕೆ ಕನಸು ನನಸು ಎಂಬುದು ಮೊದಲನೇ ಗ್ಯಾರಂಟಿಯಾಗಿದೆ. ಗೃಹಜ್ಯೋತಿ ಈಗ ಸುಡುವ ಜ್ಯೋತಿ, ಶಕ್ತಿ ಯೋಜನೆಯಿಂದ ರಾಜ್ಯ ಸಾರಿಗೆ ವ್ಯವಸ್ಥೆಯಲ್ಲಿ ಅರಾಜಕತೆ, ಗೃಹಲಕ್ಷ್ಮಿಗೆ ಗ್ರಹಣ, ನಿದಿರೆಗೆ ಜಾರಿದ ಯುವನಿಧಿ ಎಂಬ ಐದು ಗ್ಯಾರಂಟಿಗಳನ್ನು ಜನರಿಗೆ ನೀಡಿದೆ ಎಂದು ಹೇಳಿದ್ದಾರೆ.
ಸರ್ಕಾರ ಸುಳ್ಳು ಹೇಳಿದ್ದು ಸಾಕು, ಇನ್ನಾದರೂ ಏರಿದ ಬೆಲೆ ಕಡಿತಕ್ಕೆ ಕ್ರಮ ಕೈಗೊಳ್ಳಲಿ. ಇಲ್ಲವಾದರೆ ರಾಜ್ಯದ ನಾರಿಶಕ್ತಿ ಆಕ್ರೋಶಕ್ಕೆ ನೀವು ನಾಮಾವಶೇಷ ಇಲ್ಲದಂತೆ ಹೋಗುತ್ತೀರಿ ಎಚ್ಚರ ಎಂದು ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.(ಏಜೆನ್ಸೀಸ್)