ನಾಮಫಲಕದಲ್ಲಿ ಶೇ.60 ಕನ್ನಡ ಇರಲೇಬೇಕು; ಶೀಘ್ರ ಸುಗ್ರೀವಾಜ್ಞೆ, ಫೆ.28 ಡೆಡ್‌ಲೈನ್!

vidhanasoudha
Published on

ಬೆಂಗಳೂರು: ಸರ್ಕಾರದ ಅಥವಾ ಸ್ಥಳೀಯ ಸಂಸ್ಥೆಯ ಮಂಜೂರಾತಿಯೊಂದಿಗೆ ಕಾರ್ಯ ನಿರ್ವಹಿಸುತ್ತಿರುವ ವ್ಯಾಪಾರ ಸಂಸ್ಥೆ, ಮನೋರಂಜನೆ ಕೇಂದ್ರ, ಹೋಟೆಲ್ ಫಲಕಗಳ ಮೇಲಿನ ಶೇ.ಅರವತ್ತರಷ್ಟು ಕನ್ನಡ ಇರಬೇಕೆಂದು ಸುಗ್ರೀವಾಜ್ಞೆ ಹೊರಡಿಸಲು ಸರ್ಕಾರ ನಿರ್ಧರಿಸಿದೆ.

ನಾಮಫಲಕ ವಿಚಾರವಾಗಿ ನಿನ್ನೆ ಬೆಂಗಳೂರಲ್ಲಿ ನಡೆದ ಘಟನೆ ಹಿನ್ನೆಲೆಯಲ್ಲಿ ಗೃಹ ಸಚಿವರು, ಪೊಲೀಸ್, ಕನ್ನಡ ಸಂಸ್ಕೃತಿ, ಪಾಲಿಕೆ ಇಲಾಖೆ ಅಧಿಕಾರಿಗಳ ಸಭೆ ನಡೆಸಿದ ಸಿಎಂ, ಸುಗ್ರೀವಾಜ್ಞೆ ಹೊರಡಿಸಲು ಅಗತ್ಯ ಕ್ರಮೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

2023ರ ಮಾರ್ಚ್ 10ರಂದು ಹಿಂದಿನ ಸರ್ಕಾರ ಕನ್ನಡ ಭಾಷಾ ಸಮಗ್ರ  ಅಭಿವೃದ್ಧಿ ಅಧಿನಿಯಮ 2023 ಕಾನೂನು ಮಾಡಿದ್ದಾರೆ. ಎರಡೂ ಸದನದಲ್ಲಿ ಪಾಸ್ ಆಗಿದ್ದು, ರಾಜ್ಯಪಾಲರು ಅಂಕಿತ ಹಾಕಿದ್ದಾರೆ. ಇದರ ಪ್ರಕಾರ ಸೆಕ್ಷನ್ 17(6)ರಂತೆ ಸರ್ಕಾರದ ಅಥವಾ ಸ್ಥಳೀಯ ಸಂಸ್ಥೆ ಮಂಜೂರಾತಿಯೊಂದಿಗೆ ಕಾರ್ಯ ನಿರ್ವಹಿಸುತ್ತಿರುವ ವ್ಯಾಪಾರ ಸಂಸ್ಥೆ, ಮನೋರಂಜನೆ ಕೇಂದ್ರ, ಹೋಟೆಲ್ ಫಲಕಗಳ ಮೇಲಿನ ಅರ್ಧಭಾಗ ಕನ್ನಡದಲ್ಲಿ ಇರಬೇಕು, ಉಳಿದಿದ್ದು ಬೇರೆ ಭಾಷೆಯಲ್ಲಿ ಇರಬಹುದು ಎಂದಿದೆ.

ಈ ಹಿಂದೆ ಮಾರ್ಚ್ 24 2018ರ ಆದೇಶದಲ್ಲಿ ನಾಮಫಲಕದಲ್ಲಿ ಶೇ.ಅರವತ್ತು ಭಾಗ ಕನ್ನಡದಲ್ಲಿ ಇರೇಕೆಂದಿದೆ. ಕಾಯ್ದೆಯಲ್ಲಿ ಐವತ್ತು ಐವತ್ತು ಎಂದು ಮಾಡಿದ್ದಾರೆ. ಈ‌ ಹಿಂದಿದ್ದಂತೆ ಕನ್ನಡದಲ್ಲಿ ಶೇ. ಅರವತ್ತೇ ಇರಬೇಕು. ತಿದ್ದುಪಡಿ ತಂದು ಸುಗ್ರೀವಾಜ್ಞೆ ಹೊರಡಿಸಲು ತಿಳಿಸಲಾಗಿದೆ ಎಂದು ಸಿಎಂ‌ ಸಿದ್ದರಾಮಯ್ಯ ಮಾಧ್ಯಮಗಳಿಗೆ ತಿಳಿಸಿದರು.

ಹಾಗೆಯೇ ಕನ್ನಡ ಸಂಘಟನೆಗಳ‌ ಶಾಂತಿಯುತ ಪ್ರತಿಭಟನೆಗೆ ಸರ್ಕಾರದ ವಿರೋಧ ಇಲ್ಲ, ಅಡ್ಡಿ ಪಡಿಸಲ್ಲ. ನಾವು ಸಂವಿಧಾನ ನಂಬುತ್ತೇವೆ. ಆದರೆ ಕಾನೂನಿಗೆ ವಿರುದ್ಧ ನಡೆದುಕೊಂಡರೆ ಸಹಿಸಲ್ಲ ಎಂದು ಎಚ್ಚರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net