ಸ್ಥಳೀಯರಿಗೆ ಉದ್ಯೋಗ ಮೀಸಲು ಹೆಜ್ಜೆಗೆ ತೊಡಕು?: ಹರಿಯಾಣದಲ್ಲಿ ಹೈಕೋರ್ಟ್ ತಡೆ, ರಾಜ್ಯದಲ್ಲೂ ಆದೀತೇ ಹಿನ್ನಡೆ?

Job
Published on

| ರಮೇಶ ದೊಡ್ಡಪುರ ಬೆಂಗಳೂರು

ಕನ್ನಡ ಸಮಗ್ರ ಭಾಷಾ ಅಭಿವೃದ್ಧಿ ವಿಧೇಯಕ ಮಂಡನೆಗೆ ರಾಜ್ಯ ಸರ್ಕಾರ ಮುಂದಾಗಿರುವ ನಡುವೆಯೇ, ಹರಿಯಾಣದಲ್ಲಿ ಇಂಥದ್ದೇ ಪ್ರಯತ್ನಕ್ಕೆ ಹಿನ್ನಡೆ ಆಗಿರುವುದು ರಾಜ್ಯದಲ್ಲೂ ಸಾಧಕಬಾಧಕ ಯೋಚಿಸುವಂತೆ ಮಾಡಿದೆ.

ಖಾಸಗಿ ಕಂಪನಿಗಳು, ಸೊಸೈಟಿಗಳು, ಟ್ರಸ್ಟ್, ಪಾಲುದಾರಿಕೆ ಸಂಸ್ಥೆಗಳು, ಎಲ್​ಎಲ್​ಪಿಗಳು ಹಾಗೂ 10ಕ್ಕಿಂತ ಹೆಚ್ಚು ಜನರನ್ನು ಉದ್ಯೋಗಕ್ಕೆ ನೇಮಿಸಿಕೊಂಡಿರುವ ಸಂಸ್ಥೆಗಳಲ್ಲಿ ಶೇ.75 ಸ್ಥಳೀಯರಿಗೆ ಉದ್ಯೋಗ ಮೀಸಲಾತಿ ನೀಡುವುದು ಅಸಾಂವಿಧಾನಿಕವಲ್ಲವೇ ಎಂದು ಪ್ರಶ್ನಿಸಿರುವ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್, ಆ ರಾಜ್ಯದಲ್ಲಿ ಜ.15ರಿಂದ ಜಾರಿಗೆ ಬಂದಿದ್ದ ಕಾಯ್ದೆಗೆ ತಡೆಯಾಜ್ಞೆ ನೀಡಿದೆ. ರಾಜ್ಯದಲ್ಲೂ ಅನೇಕ ವರ್ಷಗಳಿಂದ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ವಿಚಾರ ಚರ್ಚೆಯಲ್ಲಿದೆ. ಬಹಳಷ್ಟು ಉದ್ಯಮ ಸಂಸ್ಥೆಗಳೂ ಸರ್ಕಾರದ ಇಂತಹ ನಿರ್ಧಾರಗಳನ್ನು ಖಂಡಿಸಿರುವುದರಿಂದ ಉದ್ಯಮಗಳ ಮನವೊಲಿಸುವ ಅನಿವಾರ್ಯತೆ ಎದುರಾಗಿದೆ.

ಅಸಾಂವಿಧಾನಿಕವೇ?: ಸ್ಥಳೀಯರಿಗೆ ಉದ್ಯೋಗ ಕಲ್ಪಿಸಬೇಕೆಂದು ಆಂಧ್ರಪ್ರದೇಶದ ವೈ.ಎಸ್. ಜಗನ್​ವೋಹನ ರೆಡ್ಡಿ ನೇತೃತ್ವದ ಸರ್ಕಾರ ಕಾಯ್ದೆಯೊಂದನ್ನು ಅಂಗೀಕರಿಸಿತ್ತು. ಆ ಸಂದರ್ಭದಲ್ಲೂ ಸ್ಥಳೀಯ ವಕೀಲರೊಬ್ಬರು ಇದು ಅಸಾಂವಿಧಾನಿಕ ಎಂದು ಹೈಕೋರ್ಟ್ ಮೆಟ್ಟಿಲೇರಿದ್ದರು. ಇದೀಗ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಸಹ ಈ ಕಾಯ್ದೆ ಸಂವಿಧಾನದ 16ನೇ ಪರಿಚ್ಛೇದಕ್ಕೆ ವಿರುದ್ಧವಲ್ಲವೇ ಎಂಬ ಪ್ರಶ್ನೆಯನ್ನು ಹರಿಯಾಣ ಸರ್ಕಾರಕ್ಕೆ ಕೇಳಿದೆ.

ಉದ್ಯೋಗಗಳಲ್ಲಿ ಎಲ್ಲರಿಗೂ ಸಮಾನ ಅವಕಾಶಗಳ ಕುರಿತು 16ನೇ ಪರಿಚ್ಛೇದದ 2ನೇ ಅಂಶದಲ್ಲಿ, ‘ಯಾವುದೇ ನಾಗರಿಕನನ್ನು ಅವನ ಧರ್ಮ, ಜಾತಿ, ಲಿಂಗ, ಜನ್ಮ ಸ್ಥಳ, ವಾಸ ಸ್ಥಳ ಅಥವಾ ಇವುಗಳಲ್ಲಿ ಯಾವುದೇ ಒಂದು ಅಂಶದ ಕಾರಣಕ್ಕೆ ಯಾವುದೇ ಉದ್ಯೋಗ ಅಥವಾ ರಾಜ್ಯದ ಅಧೀನದ ಉದ್ಯೋಗಗಳಲ್ಲಿ ಕಡೆಗಣಿಸುವುದು ಅಥವಾ ಭೇದಭಾವ ತೋರಬಾರದು’ ಎಂದು ತಿಳಿಸಲಾಗಿದೆ. ಸ್ಥಳೀಯರಿಗೆ ಉದ್ಯೋಗ ನೀಡಬೇಕು ಎನ್ನುವುದು ಈ ಅಂಶದಲ್ಲಿರುವ ‘ಜನ್ಮ ಸ್ಥಳ, ವಾಸ ಸ್ಥಳ’ದ ವ್ಯಾಪ್ತಿಗೆ ಬರುವುದರಿಂದ ಸಂವಿಧಾನಕ್ಕೆ ವಿರುದ್ಧ ಎನ್ನುವುದು ಕೆಲವರ ವಾದ.

ಸಮಗ್ರ ಭಾಷಾ ಕಾಯ್ದೆ ಕೇವಲ ಸ್ಥಳೀಯರಿಗೆ ಉದ್ಯೋಗಕ್ಕೆ ಮೀಸಲಾಗಿಲ್ಲ. ಕನ್ನಡ ಬಳಕೆ, ಉತ್ತೇಜನ ಸೇರಿ ಎಲ್ಲ ಅಂಶಗಳನ್ನೂ ಒಳಗೊಂಡಿದೆ. ಇವುಗಳನ್ನೆಲ್ಲ ಪರಿಗಣಿಸಿ, ಅಭಿಪ್ರಾಯ ಪಡೆದು ಮುಂದೆ ಹೆಜ್ಜೆ ಇಡಲಾಗುತ್ತಿದೆ. ಯಾವುದೇ ಕಾನೂನು ತೊಡಕು ಎದುರಾಗದೆಂಬ ವಿಶ್ವಾಸ ಇದೆ. | ಟಿ.ಎಸ್. ನಾಗಾಭರಣ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಏನಿದು ಮೀಸಲಾತಿ?

ಖಾಸಗಿ ಸಂಸ್ಥೆಗಳಲ್ಲಿ ಸ್ಥಳೀಯರಿಗೆ ಮೀಸಲಾತಿ ನೀಡುವುದಾಗಿ ಹರಿಯಾಣದಲ್ಲಿ ಕಳೆದ ವಿಧಾನಸಭೆ ಚುನಾವಣೆಗೂ ಮೊದಲೇ ಜನತಾ ಪಕ್ಷದ ದುಷ್ಯಂತ್ ಚೌಟಾಲ ಭರವಸೆ ನೀಡಿದ್ದರು. 2019ರಲ್ಲಿ ಬಿಜೆಪಿಯೊಂದಿಗೆ ಸಮ್ಮಿಶ್ರ ಸರ್ಕಾರ ರಚಿಸಿ ಡಿಸಿಎಂ ಆದ ನಂತರ 2020ರಲ್ಲಿ ಸ್ಥಳೀಯ ಅಭ್ಯರ್ಥಿಗಳ ಉದ್ಯೋಗ ಮಸೂದೆಯನ್ನು ಮಂಡಿಸಿ 2021ರ ಮಾರ್ಚ್​ನಲ್ಲಿ ರಾಜ್ಯಪಾಲರ ಅಂಕಿತ ಪಡೆಯಲಾಯಿತು. 30 ಸಾವಿರ ರೂ. ಒಟ್ಟು ವೇತನ ಹೊಂದಿರುವ ನೌಕರಿಯಲ್ಲಿ ಸೂಚಿತ ಖಾಸಗಿ ಕಂಪನಿಗಳಲ್ಲಿ ಶೇ.75ರವರೆಗೆ ಸ್ಥಳೀಯರಿಗೆ ಮೀಸಲಾತಿ ನೀಡಬೇಕು ಎಂದು ಕಾಯ್ದೆ ತಿಳಿಸುತ್ತದೆ. 2022ರ ಜ.15ರಿಂದ ಜಾರಿಯನ್ನೂ ಮಾಡಲಾಯಿತು. ಕೃಷಿ, ಇಟ್ಟಿಗೆ ಕಾರ್ಖಾನೆ ಸೇರಿ ಕೆಲವು ಕ್ಷೇತ್ರಗಳಿಗೆ ಮೀಸಲಾತಿಯಿಂದ ವಿನಾಯಿತಿ ನೀಡಲಾಯಿತು. ಈ ನಡುವೆ ಹರಿಯಾಣದ ಮಾಣೇಸರ್ ಕೈಗಾರಿಕಾ ಸಂಘ ಸೇರಿ ಇನ್ನಿತರೆ ಸಂಸ್ಥೆಗಳು ನ್ಯಾಯಾಲಯದ ಮೆಟ್ಟಿಲೇರಿದ್ದವು. ಇದೀಗ ಕಾಯ್ದೆಗೆ ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್ ತಡೆ ನೀಡಿದೆ.

ರಾಜ್ಯದಲ್ಲಿ ಸಮಗ್ರಭಾಷಾ ಕಾಯ್ದೆ

ಕರ್ನಾಟಕದಲ್ಲಿ ಕನ್ನಡವನ್ನು ಆಡಳಿತ ಭಾಷೆ ಮಾಡಬೇಕೆಂಬ ಒತ್ತಾಯ ಅನೇಕ ವರ್ಷಗಳಿಂದ ಇದೆ. ಅನೇಕ ಕಾಯ್ದೆಗಳು ಜಾರಿಯಾದರೂ ಸಂಪೂರ್ಣ ಅನುಷ್ಠಾನವಾಗಿಲ್ಲ. ನಾಮಫಲಕದಿಂದ, ಸ್ಥಳೀಯರಿಗೆ ಉದ್ಯೋಗದವರೆಗೆ ಕನ್ನಡ ಮತ್ತು ಕನ್ನಡಿಗರ ಅಭಿವೃದ್ಧಿಗಾಗಿ ಎಲ್ಲ ಅಂಶಗಳನ್ನೂ ಒಳಗೊಂಡ ಸಮಗ್ರ ಭಾಷಾ ಕಾಯ್ದೆ ಜಾರಿಗೊಳಿಸಲು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಪ್ರಯತ್ನಿಸುತ್ತಿದೆ. ಈಗಾಗಲೇ ಕರಡು ವಿಧೇಯಕವನ್ನೂ ಸಿದ್ಧಪಡಿಸಿ ಸರ್ಕಾರಕ್ಕೆ ನೀಡಿದೆ. ಅದರ 14ನೇ ಅಂಶದಲ್ಲಿ, ರಾಜ್ಯ ಸರ್ಕಾರದಿಂದ ಭೂಮಿ ಮತ್ತು ಇನ್ನಾವುದೇ ರಿಯಾಯಿತಿ ಪಡೆಯಲು ಸಿ ಮತ್ತು ಡಿ ವೃಂದದ ಹುದ್ದೆಗಳಲ್ಲಿ ಸರ್ಕಾರ ಸೂಚಿಸುವ ಪ್ರಮಾಣದಲ್ಲಿ ಸ್ಥಳೀಯರಿಗೆ ಉದ್ಯೋಗ ನೀಡುವುದನ್ನು ಕಡ್ಡಾಯ ಮಾಡಲಾಗಿದೆ. ಇದರ ಜತೆಗೆ, ಈ ಅಧಿನಿಯಮದ ಜಾರಿಯ ಮೇಲ್ವಿಚಾರಣೆಗಾಗಿ, 100ಕ್ಕಿಂತ ಹೆಚ್ಚು ನೌಕರರಿರುವ ಕಂಪನಿಯಲ್ಲಿ ಸರ್ಕಾರದ ಪ್ರತಿನಿಧಿಯೊಬ್ಬರನ್ನು ನೇಮಿಸಬೇಕು ಎಂದು ತಿಳಿಸಲಾಗಿದೆ. ಮುಂಬರುವ ವಿಧಾನಸಭಾ ಅಧಿವೇಶನದಲ್ಲಿ ಕಾಯ್ದೆಯನ್ನು ಮಂಡಿಸಿ ಜಾರಿ ಮಾಡಲು ಸರ್ಕಾರ ಚಿಂತನೆ ನಡೆಸಿದೆ.

ಕೈಗಾರಿಕೆಗಳ ವಿರೋಧ

ಖಾಸಗಿ ಕ್ಷೇತ್ರದಲ್ಲಿ ಸ್ಥಳೀಯರಿಗೆ ಮೀಸಲಾತಿ ನೀಡುವ ವಿವಿಧ ಸರ್ಕಾರಗಳ ಕ್ರಮದ ಕುರಿತು ಈಗಾಗಲೇ ಅನೇಕ ಕೈಗಾರಿಕಾ ಸಂಸ್ಥೆಗಳು ವಿರೋಧ ವ್ಯಕ್ತಪಡಿಸಿವೆ ಹಾಗೂ ಹೈಕೋರ್ಟ್ ತಡೆಯಾಜ್ಞೆಯನ್ನು ಸ್ವಾಗತಿಸಿವೆ. ಕರ್ನಾಟಕದಲ್ಲೂ ಕಾಯ್ದೆ ಜಾರಿಗೆ ಮುನ್ನ ಕೈಗಾರಿಕಾ ಸಂಸ್ಥೆಗಳನ್ನು ವಿಶ್ವಾಸಕ್ಕೆ ಪಡೆಯದೆ ಕಾಯ್ದೆ ಜಾರಿ ಮಾಡಿದಲ್ಲಿ ಹರಿಯಾಣದ ಸ್ಥಿತಿಯೇ ಎದುರಾಗಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಸ್ಥಳೀಯರಲ್ಲಿ ಅಂತಹ ಕೌಶಲವಿದ್ದರೆ ಖಂಡಿತವಾಗಿಯೂ ನೇಮಕ ಮಾಡಿಕೊಳ್ಳುತ್ತಾರೆ. ಮೀಸಲಾತಿ ಬದಲಿಗೆ, ಸರ್ಕಾರಗಳು ಸ್ಥಳೀಯರಲ್ಲಿ ಕೌಶಲ ಹೆಚ್ಚಳಕ್ಕೆ ಒತ್ತು ನೀಡಬೇಕು. ಕೃಷಿ ಕ್ಷೇತ್ರದಲ್ಲಿ ಕಾರ್ವಿುಕರ ಬರಕ್ಕೆ ಕಾರಣವಾಗಿರುವ ನರೇಗಾ ಯೋಜನೆಯನ್ನು ಕೃಷಿ ಕಾರ್ಯ ಮತ್ತು ಕೈಗಾರಿಕೆಗಳಿಗೆ ವಿಸ್ತರಿಸಿದರೆ ಕೌಶಲ್ಯಯುಕ್ತ ಉದ್ಯೋಗ ಸೃಷ್ಟಿಯಾಗುತ್ತದೆ. | ಜೆ. ಕ್ರಾಸ್ಟಾ, ಫೆಡರೇಷನ್ ಆಫ್ ಇಂಡಿಯನ್ ಇಂಡಸ್ಟ್ರಿ ಆಂಡ್ ಕಾಮರ್ಸ್(ಎಫ್​ಐಸಿಸಿಐ) ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net