

ವಿರಾಜಪೇಟೆ : ಬಹು ಜಾತಿ, ಬಹು ಧರ್ಮ, ಬಹುತ್ವದ ಜನರನ್ನು ಒಂದುಗೂಡಿಸಲು ಕನ್ನಡ ಭಾಷೆ ಮತ್ತು ಸಾಹಿತ್ಯ ಸಹಕರಿಸುತ್ತದೆ ಎಂದು ಬರಹಗಾರ ಹಾಗೂ ನಿವೃತ್ತ ಪ್ರಾಧ್ಯಾಪಕ ಪ್ರೊ.ನರೇಂದ್ರ ರೈ ದೇರ್ಲ ಹೇಳಿದರು.
ವಿರಾಜಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಇತ್ತೀಚಿಗೆ ನಡೆದ ಕರುನಾಡ ಸಂಭ್ರಮ-24 ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಪಂಪ, ರನ್ನ, ಬಸವಣ್ಣ, ಶರೀಫ, ಅಲ್ಲಮ, ಅಕ್ಕಮಹಾದೇವಿ, ಕುವೆಂಪು, ಬೇಂದ್ರೆಯವರ ಸಾಹಿತ್ಯವನ್ನು ಓದುವುದರಿಂದ ಆತ್ಮೀಯತೆಯ ಬಂಧ ಬೆಳೆಯುತ್ತದೆ. ಜಾಗತೀಕರಣ ಮತ್ತು ಕರೆನಾದಿಂದ ಮಕ್ಕಳ ಮನಸ್ಸು ಹಾಳಾಗಿದೆ. ಯಂತ್ರಗಳಂತೆ ಮರಗಟ್ಟಿ ಹೋದಂತಹ ಮನಸ್ಸುಗಳನ್ನು ಮತ್ತೆ ಸೂಕ್ಷ್ಮ ಹಾಗೂ ಸಂವೇದನಾಶೀಲರನ್ನಾಗಿಸಲು ಕನ್ನಡ ಭಾಷೆ ಮತ್ತು ಸಾಹಿತ್ಯ ದಿವ್ಯ ಔಷಧ ಎಂದರು.
ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಮಾದಂಡ ತಿಮ್ಮಯ್ಯ ಮಾತನಾಡಿ, ಜಾಗತೀಕರಣದ ನೆಲೆಯಲ್ಲಿ ವಿಶ್ವದ ಯಾವುದೇ ಮೂಲೆಗೆ ತೆರಳಿದರೂ ಕನ್ನಡ ಮಾತನಾಡುವ ಕಲಿಸುವ ಹೊಣೆ ನಮ್ಮದಾಗಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಡಾ. ಕೆ.ಸಿ.ದಯಾನಂದ ಮಾತನಾಡಿ, ವಿದ್ಯಾರ್ಥಿಗಳು ದಿನಪತ್ರಿಕೆಗಳನ್ನು ಹಾಗೂ ಪುಸ್ತಕಗಳನ್ನು ಓದುವ ಮೂಲಕ ಕನ್ನಡ ಭಾಷೆ ಹಾಗೂ ಸಾಹಿತ್ಯದ ಸತ್ವವನ್ನು ಸವಿಯಬೇಕು ಎಂದರು.
ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ.ಕೆ.ಬಸವರಾಜು, ಕನ್ನಡ ಸಹಾಯಕ ಪ್ರಾಧ್ಯಾಪಕ ರಘುರಾಜ್ ಇದ್ದರು. ಕಾರ್ಯಕ್ರಮದಲ್ಲಿ ಕನ್ನಡ ಗೀತೆಗಳ ಗಾಯನ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಕನ್ನಡ ಗೀತೆಗಳಿಗೆ ವಿದ್ಯಾರ್ಥಿಗಳು ನರ್ತಿಸಿ ಸಂಭ್ರಮಿಸಿದರು. ಈ ಸಂದರ್ಭದಲ್ಲಿ ಉಪನ್ಯಾಸಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.