

ಬೆಂಗಳೂರು ‘ಜಗತ್ತಿನ ಸಾಹಿತ್ಯದಲ್ಲಿ ಕನ್ನಡ ಸಾಹಿತ್ಯವನ್ನು ನೋಡುವ ಬಗೆ ಕೂಪಮಂಡೂಕದಂತಿದೆ.’ ಎಂದು ದಿವಾಕರ್ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದರೆಂದು ಸಾಹಿತಿ ವಿವೇಕ ಶಾನಭಾಗ್ ತಿಳಿಸಿದರು.
ಭಾನುವಾರ ಬಸವನಗುಡಿಯಲ್ಲಿರುವ ಬಿ.ಪಿ. ವಾಡಿಯಾ ಸಭಾಂಗಣದಲ್ಲಿ ಎಸ್. ದಿವಾಕರ್ ಸಾಹಿತ್ಯ ಸಂಭ್ರಮದ ‘ಪರಿಮಳ:ದ ಪಡಸಾಲೆ’ ಎಂಬ ವಿಶೇಷ ಸಂಚಿಕೆ ಬಿಡುಗಡೆ, ಎಸ್. ದಿವಾಕರ್ ಗೆಳೆಯರ ಬಳಗ ಮತ್ತು ಪಂ. ಪರಮೇಶ್ವರ ಹೆಗೆಡೆ ಸಂಗೀತ ಅಕಾಡೆಮಿ ಹಮ್ಮಿಕೊಂಡಿದ್ದ ‘ನಮ್ಮ ದಿವಾಕರ್- ಎಂಬತ್ತರ ಕ್ಲಬ್ಬಿಗೆ ಅಡಿ ಇಡುತ್ತಿರುವ ಎಸ್. ದಿವಾಕರ್ ಅವರಿಗೆ ಅಭಿನಂದನೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕನ್ನಡ ಸಾಹಿತ್ಯದ ಸುಮಾರು 40 ವರ್ಷದ ಕತೆಗಳನ್ನು ನೋಡಿದಾಗ ಬಹು ಚರ್ಚೆಯಾಗಬೇಕಿದೆ. ಇವುಗಳನ್ನು ಬೇರೆಯದನ್ನು ಹುಡುಕುವ ಪ್ರಯತ್ನ ಮಾಡಬೇಕು ಎನ್ನುತ್ತಿದ್ದರು. ಸಾಹಿತ್ಯದ ತೀವ್ರತೆ ಮತ್ತು ಉತ್ಸಾಹದ ವಿಚಾರವಾಗಿ ಅವರು ಜಗಳವಾಡದ ವ್ಯಕ್ತಿಗಳಿಲ್ಲ. ಆದರೆ, ಎಂದಿಗೂ ವೈಯಕ್ತಿಕವಾಗಿ ಜಗಳವಾಡಿಲ್ಲ ಎಂದರು.
ಲೆಖಕಿಯರ ಸಂಘದ ಅಧ್ಯಕ್ಷೆ ಎಂ.ಎಸ್. ಆಶಾದೇವಿ ಮಾತನಾಡಿ, ಸಾಹಿತ್ಯ ಅಕ್ಷರದ ಭಾಷೆ, ಸಂಗೀತ ನಾದದ ಭಾಷೆ. ಒಂದರಲ್ಲಿ ಮತ್ತೊಂದನ್ನು ನಿರ್ವಚನ ಮಾಡಲು ಸಾಧ್ಯವಿಲ್ಲ. ಸಂಗೀತ ಬಿಟ್ಟು ಸಾಹಿತ್ಯ, ಸಾಹಿತ್ಯವನ್ನು ಬಿಟ್ಟು ಸಂಗೀತ ಇರಬೇಕಾಗಿಲ್ಲ ಎಂಬ ಮಾತನ್ನು ಹೇಳುತ್ತಿದ್ದರು ಎಂದರು.
ಬಾಲ ಮುರಳಿ ಕೃಷ್ಣ ಸಂಗೀತದಲ್ಲಿ ಒಂದೇ ರಾಗವನ್ನು ಬೇರೆ ಬೇರೆ ಆಯಾಮದಲ್ಲಿ ಹಾಡುತ್ತಾರೆ. ಹಾಗೆಯೇ, ನನ್ನ ಚಿತ್ರದಲ್ಲಿ ಅವರ ಸಂಗೀತವಿದೆ. ಅವರ ಸಂಗೀತದಲ್ಲಿ ನನ್ನ ಚಿತ್ರವಿದೆ. ಅಂದರೆ, ಇದರಲ್ಲೊಂದು ಕಲಾ ಮೀಮಾಂಸೆ ಇದೆ. ಸಾಹಿತ್ಯವು ಮನುಷ್ಯನಲ್ಲಿರುವ ಮೃಗತ್ವವನ್ನು ನಿಧಾನವಾಗಿ ಅಂತಃಕರಣಗೊಳಿಸಿ ಜಾಗೃತಗೊಳಿಸುತ್ತಾ ಸಾಗಲಿದೆ ಎಂದರು.
ಕತೆಗಳನ್ನು ಓದುವಾಗ ಲೇಖಕ-ಲೇಖಕಿಯರು ಬೇರೆಯವರ ಮನಸ್ಥಿತಿಯನ್ನು ಅರ್ಥ ಮಾಡಿಕೊಳ್ಳಬೇಕು ಎಂಬುದನ್ನು ಪ್ರಬಂಧದಲ್ಲಿ ತಿಳಿಸಲಾಗಿದೆ ಎಂದರು.
ಇದೇ ವೇಳೆ ದಿವಾಕರ್‌ರಚಿತ ಭಾವಗೀತೆಗಳನ್ನು ಗಾಯನ ಮಾಡಲಾಯಿತು.