ಕನ್ನಡ ಭಾಷೆ ಮಾತ್ರವಲ್ಲ, ಬಾಂಧವ್ಯದ ಪ್ರತೀಕ

SKP WORKSHOP
ಶಿಕಾರಿಪುರದ ಬಾಪೂಜಿ ವಿದ್ಯಾಸಂಸ್ಥೆಯಲ್ಲಿ ಆಯೋಜಿಸಿದ್ದ ಕನ್ನಡ ಭಾಷಾ ಶಿಕ್ಷಕರ ಕಾರ್ಯಾಗಾರವನ್ನು ಬಿಇಒ ಲೋಕೇಶಪ್ಪ ಉದ್ಘಾಟಿಸಿದರು. ಬಿ.ಪಾಪಯ್ಯ, ಪವಿತ್ರಾ, ರಾಘವೇಂದ್ರ ಕುಲಕರ್ಣಿ, ಡಾ. ವೀರೇಂದ್ರಕುಮಾರ್ ವಾಲಿ ಇತರರಿದ್ದರು.
Published on

ಶಿಕಾರಿಪುರ: ಕನ್ನಡ ಸಾಹಿತ್ಯ ಅಧ್ಯಯನ ಮಾಡುವುದರಿಂದ ಶುದ್ಧ ಬರಹದ ಜತೆಗೆ ಪರಿಶುದ್ಧವಾದ ಕನ್ನಡ ಕಲಿಸಲು ಶಿಕ್ಷಕರಿಗೆ ಅನುಕೂಲವಾಗುತ್ತದೆ ಎಂದು ಬಿಇಒ ಲೋಕೇಶಪ್ಪ ಹೇಳಿದರು.

ಬಾಪೂಜಿ ವಿದ್ಯಾಸಂಸ್ಥೆಯಲ್ಲಿ ಪ್ರೌಢಶಾಲಾ ಕನ್ನಡ ಭಾಷಾ ವಿಷಯ ಶಿಕ್ಷಕರಿಗೆ ಆಯೋಜಿಸಿದ್ದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ಕನ್ನಡ ಭಾಷೆ ನಮ್ಮ ಹೃದಯದ ಭಾಷೆ. ಮೊದಲು ಭಾಷೆ ಬಗ್ಗೆ ಅಭಿಮಾನ ರೂಢಿಸಿಕೊಳ್ಳಬೇಕು ಎಂದರು.
ಪರಿಶುದ್ಧವಾದ ಕನ್ನಡ ಕಲಿಯಬೇಕು. ಕನ್ನಡದ ಜತೆಗೆ ನಮ್ಮ ಬಾಂಧವ್ಯ ತಾಯಿ ಜತೆಗಿನ ಬಾಂಧವ್ಯ ಇದ್ದಂತೆ. ಕನ್ನಡ ಭಾಷೆ ನಮ್ಮ ಉಸಿರಾಗಬೇಕು, ಹೆಸರಾಗಬೇಕು. ಯಾವ ಕಾರಣಕ್ಕೂ ನಿರ್ಲಕ್ಷೃ ಮಾಡಬೇಡಿ ಎಂದು ಸಲಹೆ ನೀಡಿದರು.
ಎಸ್‌ಎಸ್‌ಎಲ್ಸಿಯಲ್ಲಿ ಉತ್ತಮ ಫಲಿತಾಂಶ ಬರುವಲ್ಲಿ ಕನ್ನಡ ಭಾಷಾ ಶಿಕ್ಷಕರ ಜವಾಬ್ದಾರಿ ಮಹತ್ವದ್ದು. ಪ್ರೌಢ ಶಿಕ್ಷಣ ವಿದ್ಯಾರ್ಥಿಗಳ ಭವಿಷ್ಯದಲ್ಲಿ ಪ್ರಮುಖ ಘಟ್ಟ. ಈ ದಿಸೆಯಲ್ಲಿ ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಅಣಿಗೊಳಿಸುವಲ್ಲಿ ಕನ್ನಡ ಭಾಷಾ ಶಿಕ್ಷಕರ ಜವಾಬ್ದಾರಿ ದೊಡ್ಡದು. ಏಕೆಂದರೆ ಕನ್ನಡ ಭಾಷೆಯನ್ನು ಓದಲು, ಬರೆಯುವುದನ್ನು ವಿದ್ಯಾರ್ಥಿಯು ಕಲಿತರೆ ಬೇರೆ ವಿಷಯಗಳಲ್ಲಿ ತೇರ್ಗಡೆ ಹೊಂದಲು ಅನುಕೂಲವಾಗುತ್ತದೆ ಎಂದು ಹೇಳಿದರು.
ಕುಮದ್ವತಿ ಶಿಕ್ಷಣ ಮಹಾವಿದ್ಯಾಲಯದ ಉಪನ್ಯಾಸಕ ಡಾ. ವೀರೇಂದ್ರಕುಮಾರ್ ವಾಲಿ ಮಾತನಾಡಿ, ಕನ್ನಡ ಭಾಷೆಗೆ ಎರಡು ಸಾವಿರ ವರ್ಷಗಳ ಇತಿಹಾಸವಿದೆ. ಅತ್ಯಂತ ಸುಂದರ, ಸುಮಧುರ ಹಾಗೂ ಸುಲಲಿತ ಭಾಷೆ ನಮ್ಮದು. ಕನ್ನಡ ಹಾಲು-ಜೇನಿನ ಮಿಶ್ರಣವಿದ್ದಂತೆ. ನಾವು ಕನ್ನಡಿಗರು ಎನ್ನುವುದೇ ನಮಗೆ ಹೆಮ್ಮೆಯ ಸಂಗತಿ. ಕನ್ನಡ ಭಾಷಾ ಶಿಕ್ಷಕರು ಅಧ್ಯಯನ ಮಾಡಿದಾಗ ಅಧ್ಯಾಪನಕ್ಕೆ ಅನುಕೂಲವಾಗುತ್ತದೆ. ಮಕ್ಕಳಲ್ಲಿ ಭಾಷೆ ಬಗ್ಗೆ ಅರಿವು ಮೂಡಿಸಬೇಕು ಎಂದರು.
ಬಾಪೂಜಿ ವಿದ್ಯಾಸಂಸ್ಥೆ ಸಂಸ್ಥಾಪಕ ಪಾಪಯ್ಯ ಮಾತನಾಡಿ, ಎಸ್‌ಎಸ್‌ಎಲ್ಸಿ ಫಲಿತಾಂಶದಲ್ಲಿ ಶಿವಮೊಗ್ಗ ಜಿಲ್ಲೆ ಉತ್ತಮ ಸಾಧನೆ ಮಾಡಿದೆ. ಈ ವರ್ಷವೂ ಶಿಕ್ಷಕರ ಮಾರ್ಗದರ್ಶನ, ವಿದ್ಯಾರ್ಥಿಗಳ ಪರಿಶ್ರಮದಿಂದ ಒಳ್ಳೆಯ ಫಲಿತಾಂಶ ದೊರೆಯಲಿ. ಶಿಕ್ಷಣ ಇಲಾಖೆ ನಡೆಸುವ ಕಾರ್ಯಾಗಾರಕ್ಕೆ ನಮ್ಮ ಸಂಸ್ಥೆ ಸದಾ ಸಹಕಾರ ನೀಡುತ್ತ ಬಂದಿದೆ ಎಂದು ತಿಳಿಸಿದರು.
ಸಂಸ್ಥೆ ಕಾರ್ಯದರ್ಶಿ ಪವಿತ್ರಾ, ಕನ್ನಡ ಭಾಷಾ ಶಿಕ್ಷಕರ ಸಂಫದ ಅಧ್ಯಕ್ಷ ರಾಘವೇಂದ್ರ ಕುಲಕರ್ಣಿ, ಸಂಪನ್ಮೂಲ ವ್ಯಕ್ತಿಗಳಾದ ಎನ್.ಕೆ.ಕರಿಬಸಪ್ಪ, ಆರ್.ರಾಘವೇಂದ್ರ, ಫಿರೋಜ್, ಕರಿಬಸಪ್ಪ, ನಾಗರಾಜಪ್ಪ, ಕಾರ್ಯದರ್ಶಿ ಸುರೇಶ ಬಿ. ರಾಜೀವ್, ಬಸವನಗೌಡ, ಇಸಿಒ ಗದಿಗೆಪ್ಪ, ನಟರಾಜ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net