ಕನ್ನಡ ಕೇವಲ ಭಾಷೆಯಲ್ಲ ಭಾವನೆ-ಸಂಸ್ಕೃತಿ

Untitled design (5)
Published on

ನಾಡು-ನುಡಿಯ ಏಳಿಗೆಗಾಗಿ ಭಾಷಾಭಿಮಾನ, ಹೋರಾಟಗಳು ಎಷ್ಟು ಮುಖ್ಯವೋ ಸರ್ಕಾರದ ಇಚ್ಛಾಶಕ್ತಿ ಕೂಡ ಅಷ್ಟೇ ಮುಖ್ಯ. ಈ ದಿಸೆಯಲ್ಲಿ ಕನ್ನಡ-ಕನ್ನಡಿಗ-ಕರ್ನಾಟಕ ಎದುರಿಸುತ್ತಿರುವ ಸವಾಲುಗಳ ಬಗ್ಗೆ ಮತ್ತು ಆ ದಿಸೆಯಲ್ಲಿ ರಾಜ್ಯ ಸರ್ಕಾರ ಕೈಗೊಂಡಿರುವ, ಕೈಗೊಳ್ಳುತ್ತಿರುವ ಕ್ರಮಗಳ ಬಗ್ಗೆ ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ‘ವಿಜಯವಾಣಿ’ಗೆ ನೀಡಿರುವ ಸಂದರ್ಶನದಲ್ಲಿ ಮುಕ್ತವಾಗಿ ಮಾತನಾಡಿದ್ದಾರೆ. ಸಂದರ್ಶನದ ಆಯ್ದ ಭಾಗ ಇಲ್ಲಿದೆ.

ವೃತ್ತಿಯ ಆರಂಭಿಕ ದಿನಗಳಿಂದ ಇಲ್ಲಿಯವರೆಗೆ ಕನ್ನಡದ ಜತೆಗಿನ ನಿಮ್ಮ ಬಾಂಧವ್ಯ ಎಂಥದ್ದು?

-ನನ್ನ ವೃತ್ತಿಯ ಆರಂಭದಿಂದಲೇ ಜನರೊಂದಿಗೆ ನೇರವಾಗಿ ಸಂಪರ್ಕ ಸಾಧಿಸಲು ಕನ್ನಡವೇ ನಿಜವಾದ ಸೇತುವೆಯಾಗಿತ್ತು. ನಾನು ಕನ್ನಡ-ಸಂಸ್ಕೃತಿ ಇಲಾಖೆಯಲ್ಲಿ ಕಾರ್ಯದರ್ಶಿಯಾಗಿದ್ದಾಗ ಕನ್ನಡದ ಉಳಿವಿಗೆ ಹಲವಾರು ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದೇನೆ. ಕನ್ನಡ ಕೇವಲ ಭಾಷೆಯಲ್ಲ. ಅದು ಜನರ ಭಾವನೆ, ಸಂಸ್ಕೃತಿ ಮತ್ತು ಆತ್ಮ. ಕನ್ನಡದಲ್ಲಿ ಮಾತನಾಡುವುದು, ಬರೆಯುವುದು ನನಗೆ ಬಹಳ ಸಂತೋಷದ ವಿಷಯ. ನಾನು ಕನ್ನಡದಲ್ಲಿ ಹಲವಾರು ಪುಸ್ತಕ ಬರೆದಿದ್ದೇನೆ. ನಂತರ ಅವುಗಳನ್ನು ಆಂಗ್ಲಭಾಷೆಗೆ ಭಾಷಾಂತರಿಸಿದ್ದೇನೆ. ಯಾವಾಗಲೂ ಕನ್ನಡವೇ ನನ್ನ ಪ್ರಥಮ ಆದ್ಯತೆ.

ಕನ್ನಡದ ಉಳಿವಿಗೆ ದೀರ್ಘಕಾಲೀನ ಚಿಂತನೆ ಮತ್ತು ಯೋಜನೆಗಳ ಕೊರತೆ ಇದೆ. ಈ ಬಗ್ಗೆ ನಿಮ್ಮ ಅಭಿಪ್ರಾಯ ಏನು?

-ಕನ್ನಡವನ್ನು ಉಳಿಸುವುದು ಎಂದರೆ ಕೇವಲ ಭಾಷೆಯನ್ನು ಉಳಿಸುವುದಲ್ಲ, ಅದು ಕರ್ನಾಟಕದ ಆತ್ಮವನ್ನು ಉಳಿಸುವ ಕೆಲಸ. ರಾಜ್ಯ ಸರ್ಕಾರಕ್ಕೆ ಕನ್ನಡವೇ ಮೊದಲ ಆದ್ಯತೆಯಾಗಿದೆ. ಉದಾಹರಣೆಗೆ, ಸರ್ಕಾರಿ ಇಲಾಖೆಗಳ ಕಡತಗಳಲ್ಲಿ, ತಂತ್ರಾಂಶ ಮತ್ತು ಪೋರ್ಟಲ್​ಗಳಲ್ಲಿ ಕನ್ನಡ ಬಳಕೆಯನ್ನು ಕಡ್ಡಾಯಗೊಳಿಸುವುದು, ಶಾಲಾ ಪಠ್ಯಗಳಲ್ಲಿ ಕನ್ನಡದ ಬಳಕೆ ಹೆಚ್ಚಳ ಮತ್ತು ನಾಮಫಲಕದಲ್ಲಿ ಶೇ. 60 ಜಾಗ ಕನ್ನಡಕ್ಕೆ ನೀಡುವುದು ಇತ್ಯಾದಿ. ಕನ್ನಡದ ಪರವಾಗಿ ಸಾವಿರಾರು ಆದೇಶಗಳಿವೆ. ಆದರೆ ಭಾಷೆಯ ಬಲ ಕೇವಲ ಆದೇಶಗಳಿಂದಲ್ಲ, ಅದು ಜನಜೀವನದ ಭಾಗವಾದಾಗ ಮಾತ್ರ ಶಾಶ್ವತವಾಗುತ್ತದೆ.

ಕನ್ನಡಿಗ ಅಭ್ಯರ್ಥಿಗಳಿಗೆ ಕರ್ನಾಟಕ ಲೋಕಸೇವಾ ಆಯೋಗದಿಂದ ನ್ಯಾಯ ದೊರಕಿಸುವ ಮಾರ್ಗ ಯಾವುದು?

- ಕರ್ನಾಟಕ ಲೋಕಸೇವಾ ಆಯೋಗದ ಉದ್ದೇಶವೇ ಸಮಾನ ಅವಕಾಶ ನೀಡುವುದು. ಕನ್ನಡಿಗ ಅಭ್ಯರ್ಥಿಗಳಿಗೆ ಅನ್ಯಾಯವಾಗುತ್ತಿರುವುದು ಸರ್ಕಾರದ ಗಮನಕ್ಕೆ ಬಂದರೆ, ಅದನ್ನು ಸರಿಪಡಿಸುವ ಜವಾಬ್ದಾರಿ ನಮ್ಮದು. ಈ ನಿಟ್ಟಿನಲ್ಲಿ ಸರ್ಕಾರ ಈಗಾಗಲೇ ಆಯೋಗದ ಪರೀಕ್ಷಾ ವಿಧಾನ, ಭಾಷಾ ಪ್ರಶ್ನೆಪತ್ರಿಕೆ ತಯಾರಿ ಹಾಗೂ ಕನ್ನಡ ಅಂಕಗಳ ಪರಿಗಣನೆ ಕುರಿತ ನೀತಿಗಳ ಮೌಲ್ಯಮಾಪನ ಮಾಡಿ ಅಗತ್ಯ ಬದಲಾವಣೆಗಳನ್ನು ತಂದಿದೆ.

ಸಾರ್ವಜನಿಕ ಉದ್ದಿಮೆಗಳು ಮತ್ತು ಬ್ಯಾಂಕುಗಳಲ್ಲಿ ಕನ್ನಡಿಗ ಉದ್ಯೋಗಿಗಳನ್ನು ನೇಮಿಸುವ ನಿಟ್ಟಿನಲ್ಲಿ ಸರ್ಕಾರ ಏನು ಮಾಡುತ್ತದೆ?

-ಸಾರ್ವಜನಿಕ ಉದ್ದಿಮೆಗಳು ಮತ್ತು ಬ್ಯಾಂಕುಗಳು ಜನರ ನಿತ್ಯಜೀವನಕ್ಕೆ ನೇರವಾಗಿ ಸಂಬಂಧಿಸಿದ ಸಂಸ್ಥೆಗಳು. ಇವುಗಳಲ್ಲಿ ಸ್ಥಳೀಯ ಭಾಷೆ ಬಲ್ಲ ಉದ್ಯೋಗಿಗಳ ಕೊರತೆ ಇದ್ದರೆ, ಜನರಿಗೆ ಉತ್ತಮ ಸೇವೆ ತಲುಪುವುದೇ ಕಷ್ಟ. ಆದ್ದರಿಂದ, ಸ್ಥಳೀಯ ಭಾಷಾ ಜ್ಞಾನ ಕೇವಲ ಆಯ್ಕೆಯಲ್ಲ, ಅದು ಸಾರ್ವಜನಿಕ ಸೇವೆಯ ಮೂಲ ಮಾನದಂಡ ಆಗಬೇಕು. ಜನರ ಆಡುಭಾಷೆಯಲ್ಲಿ ಸೇವೆ ನೀಡುವುದರಿಂದ ಉದ್ಯಮಗಳಿಗೆ ಹೆಚ್ಚಿನ ಲಾಭ ಬರಲು ಸಾಧ್ಯವಾಗುತ್ತದೆ.

ಖಾಸಗಿ ಶಾಲೆಗಳ ಪೈಪೋಟಿ ಎದುರಿಸಿ ಸರ್ಕಾರಿ ಶಾಲೆಗಳನ್ನು ಉಳಿಸುವುದು ಹೇಗೆ?

-ಖಾಸಗಿ ಶಾಲೆಗಳ ಪೈಪೋಟಿಯನ್ನು ಎದುರಿಸಲು ಸರ್ಕಾರದ ಧ್ಯೇಯ ಎರಡು ದಿಕ್ಕಿನಲ್ಲಿ ಇದೆ. ಗುಣಮಟ್ಟ ಮತ್ತು ವಿಶ್ವಾಸ. ಸರ್ಕಾರ ಈಗಾಗಲೇ ಮೂಲಸೌಕರ್ಯ ಸುಧಾರಣೆ, ಡಿಜಿಟಲ್ ತರಗತಿಗಳು ಮತ್ತು ಕನ್ನಡ ಮಾಧ್ಯಮದಲ್ಲಿ ಗುಣಮಟ್ಟದ ಪಠ್ಯವಸ್ತುಗಳ ಅಭಿವೃದ್ಧಿಗೆ ಹೆಚ್ಚು ಆದ್ಯತೆ ನೀಡಿದೆ. ಶಿಕ್ಷಕರಿಗೆ ನವೀನ ತರಬೇತಿ ಕಾರ್ಯಕ್ರಮಗಳು ಮತ್ತು ವಿದ್ಯಾರ್ಥಿಗಳ ಸಾಧನೆಯನ್ನು ಗುರುತಿಸುವ ಯೋಜನೆಗಳು ಜಾರಿಯಲ್ಲಿವೆ. ಅತ್ಯುತ್ತಮ ಶಿಕ್ಷಕರಿದ್ದಾರೆ. ಅವರ ಸಹಕಾರದ ಮೂಲಕ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ. ಕಾರ್ಪೆರೇಟ್ ಸಾಮಾಜಿಕ ಜವಾಬ್ದಾರಿ ಮೂಲಕವೂ ಸರ್ಕಾರಿ ಶಿಕ್ಷಣ ವ್ಯವಸ್ಥೆ ಸದೃಢಗೊಳಿಸಲಾಗುತ್ತಿದೆ.

ಗಡಿ ಪ್ರದೇಶಗಳಲ್ಲಿ ಕನ್ನಡದ ಉಳಿವಿಗೆ ಎದುರಾಗಿರುವ ಸವಾಲುಗಳ ಪರಿಹಾರಕ್ಕೆ ರಾಜ್ಯ ಸರ್ಕಾರ ಕೈಗೊಂಡಿರುವ ಕ್ರಮಗಳೇನು?

-ಗಡಿ ಪ್ರದೇಶಗಳಲ್ಲಿರುವ ಕನ್ನಡ ಮಾಧ್ಯಮ ಶಾಲೆಗಳು ವಿದ್ಯಾರ್ಥಿಗಳ ಕೊರತೆಯಿಂದ ಹಿನ್ನಡೆ ಅನುಭವಿ ಸುತ್ತಿವೆ. ಕೆಲವೆಡೆ ಕನ್ನಡ ಪಠ್ಯಕ್ರಮಕ್ಕೆ ಬೇಕಾದ ಶಿಕ್ಷಕರು, ಪಠ್ಯಸಾಮಗ್ರಿ ಲಭ್ಯವಿಲ್ಲ. ಈ ದಿಸೆಯಲ್ಲಿ ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದೆ. ಕರ್ನಾಟಕದ 19 ಜಿಲ್ಲೆಗಳಲ್ಲಿನ 63 ಗಡಿ ತಾಲ್ಲೂಕುಗಳಲ್ಲಿ ಒಟ್ಟು 16,656 ಶಾಲೆಗಳಿವೆ. ಅವುಗಳಿಗೆ ಕೊಠಡಿ ನಿರ್ವಣ, ಸ್ಮಾರ್ಟ್ ಕ್ಲಾಸ್, ಗ್ರಂಥಾಲಯ, ಶೌಚಾಲಯ, ಸಾಂಸ್ಕೃತಿಕ ಭವನ, ರಂಗಮಂದಿರ, ಪುಸ್ತಕ ವಿತರಣೆ ಕಾರ್ಯ ನಡೆಯುತ್ತಿದೆ. ಪ್ರಥಮ ಬಾರಿಗೆ ಹೊರನಾಡ ಕನ್ನಡಿಗರ ಸಮಸ್ಯೆ ಬಗ್ಗೆ ಗಡಿ ಪ್ರಾಧಿಕಾರ ಎಲ್ಲ ಇಲಾಖೆಗಳ ಕಾರ್ಯದರ್ಶಿಗಳ ಸಭೆ ನಡೆಸಿ ಅವರ ಸಮಸ್ಯೆಗಳ ಪರಿಹಾರಕ್ಕಾಗಿ ಪ್ರತಿ ಇಲಾಖೆಗೊಬ್ಬ ನೋಡಲ್ ಅಧಿಕಾರಿ ನೇಮಿಸಿದೆ. ಗಡಿ ಭಾಗದಲ್ಲಿ ಕೊರತೆ ಇರುವ ಶಿಕ್ಷಕರ ನೇಮಕ ಮಾಡಲು ಶಿಕ್ಷಣ ಇಲಾಖೆಗೆ ಸೂಚಿಸಲಾಗಿದೆ.

ಕನ್ನಡವನ್ನು ಆಡಳಿತದಲ್ಲಿ ಅನುಷ್ಠಾನ ಮಾಡಬೇಕಾದ ಸರ್ಕಾರಿ ನೌಕರರಲ್ಲಿ ನಿಷ್ಕಾಳಜಿ, ನಿರಭಿಮಾನ ಕಂಡುಬರುತ್ತಿದೆ. ಇದಕ್ಕೆ ಪರಿಹಾರ ಏನು?

-ಇದು ಕೆಳಮಟ್ಟದಲ್ಲಿ ಕಾರ್ಯನಿರ್ವಹಿಸುವ ನೌಕರರ ಮನೋಭಾವ ಬದಲಾವಣೆ ಆದಾಗ ಮಾತ್ರ ಸಾಧ್ಯ. ನೌಕರರು ಕನ್ನಡ ಬಳಕೆಯನ್ನು ಹೆಚ್ಚುವರಿ ಕೆಲಸ ಎಂದು ನೋಡಬಾರದು; ಅದು ಜನರ ಜೊತೆಗಿನ ನಂಟು ಎಂದು ತಿಳಿಯಬೇಕು. ಈ ಮನೋಭಾವ ನಿರ್ವಣಕ್ಕೆ ನಿಯಮಕ್ಕಿಂತ ಹೆಚ್ಚು ಪ್ರೇರಣೆ ಬೇಕು. ಕನ್ನಡದ ಆದೇಶಗಳನ್ನು ಕಾಗದದ ಮಟ್ಟದಲ್ಲಿ ಉಳಿಸದೆ, ಕಚೇರಿಯ ಶ್ವಾಸದ ಭಾಗವನ್ನಾಗಿಸಿದಾಗ ಮಾತ್ರ ಅದು ಯಶಸ್ವಿ ಅನುಷ್ಠಾನ ಎನಿಸುತ್ತದೆ.

ಕರ್ನಾಟಕದಲ್ಲಿ ಕೆಲಸ ಮಾಡುವ ಹೊರರಾಜ್ಯದವರಿಗೆ ಕನಿಷ್ಠ ನಿತ್ಯಬಳಕೆಯ ಕನ್ನಡ ಮಾತು ಕಲಿಸುವುದು ಹೇಗೆ?

-ಕನ್ನಡೇತರರಿಗೆ ಕನ್ನಡ ಕಲಿಸುವ ವ್ಯಾಪ್ತಿ ಇನ್ನೂ ದೊಡ್ಡದಾಗಬೇಕು. ಕೇಂದ್ರ ಸರ್ಕಾರದ ಉದ್ದಿಮೆಗಳು, ಆರ್​ಬಿಐ, ಅಪಾರ್ಟ್​ವೆುಂಟ್ ನಿವಾಸಿಗಳು ಸೇರಿದಂತೆ ಹಲವಾರು ಕಡೆ ಕನ್ನಡೇತರರಿಗೆ ಕನ್ನಡ ಕಲಿಸುವ ಯತ್ನವನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮಾಡುತ್ತಿದೆ. ಪ್ರಸ್ತುತ ಬೆಂಗಳೂರಿನಲ್ಲಿಯೇ 25 ಕಡೆ ಈ ಕಾರ್ಯ ಆಗುತ್ತಿದೆ. ಕನ್ನಡ ಸಂವಹನ ಪುಸ್ತಕಗಳು, ಮೊಬೈಲ್ ಆಪ್​ಗಳು, ವಿಡಿಯೋ ಪಾಠಗಳನ್ನು ಬಳಸಲಾಗುತ್ತಿದೆ.

ತಂತ್ರಜ್ಞಾನ ಕ್ಷೇತ್ರದಲ್ಲಿ ಕನ್ನಡ ಅಳವಡಿಕೆಗೆ ಸರ್ಕಾರ ಯಾವ ರೀತಿಯ ಕ್ರಮ ಮತ್ತು ನೀತಿಯನ್ನು ಅನುಷ್ಠಾನಗೊಳಿಸುತ್ತಿದೆ?

-ತಂತ್ರಜ್ಞಾನದಲ್ಲಿ ಪೂರ್ಣ ಪ್ರಮಾಣದ ಕನ್ನಡ ಅಳವಡಿಕೆಗೆ ಕೆಲವು ಸವಾಲುಗಳಿವೆ. ತಂತ್ರಜ್ಞಾನ ಅಭಿವೃದ್ಧಿ ಬಹುಪಾಲು ಇಂಗ್ಲಿಷ್ ಆಧಾರಿತವಾಗಿದೆ. ಸರ್ಕಾರ ಕನ್ನಡ ಕಂಪ್ಯೂಟಿಂಗ್, ಡಿಜಿಟಲ್ ಅನುವಾದದ ಪ್ರಚಾರಕ್ಕಾಗಿ ಕನ್ನಡ ಕಂಪ್ಯೂಟಿಂಗ್ ಪ್ರಾಧಿಕಾರವನ್ನು ಬಲಪಡಿಸಿದೆ. ಸರಕಾರದ ಎಲ್ಲ ವೆಬ್​ಸೈಟ್​ಗಳು, ಸೇವಾಸಿಂಧು, ಭೂಮಿ, ಕಾವೇರಿ 2.0ನಂತಹ ಪೋರ್ಟಲ್​ಗಳು ಕನ್ನಡದಲ್ಲೂ ಲಭ್ಯವಾಗುವಂತೆ ಕ್ರಮ ತೆಗೆದುಕೊಳ್ಳಲಾಗಿದೆ. ತಂತ್ರಜ್ಞಾನದಲ್ಲಿ ಕನ್ನಡ ಅಳವಡಿಕೆ ಎಂದರೆ ಕೇವಲ ಭಾಷಾ ಪ್ರಚಾರವಲ್ಲ, ಅದು ರಾಜ್ಯ ಸರ್ಕಾರದ ಆದ್ಯ ಕರ್ತವ್ಯವೂ ಹೌದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net