ನಾನು ತಪ್ಪು ಮಾತಾಡಿಲ್ಲ, ನೋಟಿಸ್ ಇನ್ನೂ ತಲುಪಿಲ್ಲ; ಕಿಚ್ಚನ ಬಗ್ಗೆ ನಿರ್ಮಾಪಕರು ಹೇಳಿದ್ದೇನು?

sudeep
Published on

ಬೆಂಗಳೂರು: ನಿರ್ಮಾಪಕ ಎಂ.ಎನ್.ಕುಮಾರ್ ವಿರುದ್ಧ ನಟ ಸುದೀಪ್ ಕ್ರಿಮಿನಲ್ ಕೇಸ್ ದಾಖಲಿಸಿದ ಬೆನ್ನಲ್ಲೇ ಎಂಎನ್ ಕುಮಾರ್ ಹಾಗೂ ಎನ್ಎಂ ಸುರೇಶ್ ಸುದ್ದಿಗೋಷ್ಠಿ ನಡೆಸಿದ್ದು, ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್, ಎಂಎನ್ ಕುಮಾರ್, ಎನ್ಎಂ ಸುರೇಶ್, ರಾಮಕೃಷ್ಣ, ಗಣೇಶ್ ಉಪಸ್ಥಿತರಿದ್ದು ಮಾತನಾಡಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಂಎನ್ ಕುಮಾರ್, ಚಿತ್ರೋದ್ಯಮದಲ್ಲಿ ನಿರ್ಮಾಪಕರು ಬಹಳ ಮುಖ್ಯ. ಸಿನಿಮಾರಂಗ ನಡೆಯುತ್ತಿರುವುದೇ ನಂಬಿಕೆ ಮೇಲೆ. ನಾನು ತಪ್ಪು ಮಾತಾಡಿಲ್ಲ, ಅಡ್ವಾನ್ಸ್ ಕೊಟ್ಟಿದ್ದೇನೆ. ಸಿನಿಮಾ ಮಾಡಬೇಕು ಸ್ಪಂದಿಸಿ ಅಂತ ಕೇಳಿದ್ದೆ ಎಂದು ಹೇಳಿದರು.

ನೋಟೀಸ್ ಅಫೀಶಿಯಲ್ ಆಗಿ ತಲುಪಿಲ್ಲ. ವಾಟ್ಸಪ್​​​​ನಿಂದ ಬಂದಿದೆ ಎಂದು ಹೇಳಿದ ಕುಮಾರ್​​, ಸುದೀಪ್ ಅವರು 45 ಸಿನಿಮಾ ಮಾಡಿದ್ದಾರೆ. ಎಲ್ಲದರ ಅಗ್ರಿಮೆಂಟ್ ಕೊಡಲಿ. ಅಫೀಷಿಯಲ್​​ ಆಗಿ ನೋಟೀಸ್ ಸೋಮವಾರ ಬರಬಹುದು. ವಾಟ್ಸಪ್ ಅಲ್ಲಿ ಬರುವುದೆಲ್ಲ ನಿಜವಲ್ಲ, ನಿರ್ಮಾಪಕರ ತೀರ್ಮಾನಕ್ಕೆ ನಾನು ಬದ್ಧನಾಗಿದ್ದೇನೆ. ಸುದೀಪ್ ಕಡೆಯಿಂದ ಯಾರು ನನ್ನನ್ನು ಸಂಪರ್ಕ ಮಾಡಿಲ್ಲ ಎಂದು ತಿಳಿಸಿದರು.

ತಪ್ಪು ಮಾಡಿದರೆ ಕಾಲು ಹಿಡಿದು ಕ್ಷಮೆ ಕೇಳುವೆ. ಮುತ್ತತ್ತಿ ಸತ್ಯರಾಜ್ ಟೈಟಲ್ ಸುದೀಪ್ ಅವರೇ ಸಜೆಸ್ಟ್ ಮಾಡಿದ್ದು, ಈ ಸಂಬಂಧ ಬಗೆಹರಿಸಿಕೊಳ್ಳೋಣ ಅಂತ ಮನೆ ಹತ್ತಿರ ಹೋಗಿದ್ದೆ. ಜಾಕ್ ಮಂಜು ನಾನು ಅಣ್ಣ ತಮ್ಮಂದಿರಂತೆ ಇದ್ದೆವು. ಮೊದಲು ನಮ್ಮ ಕಮಿಟ್​​​ಮೆಂಟ್ ಸರಿ ಮಾಡಿ ಯಾವ ಸಿನಿಮಾವಾದರೂ ಮಾಡಲಿ. ಆಟೋಗ್ರಾಫ್, ಮುಕುಂದ ಮುರಾರಿ ರಿಲೀಸ್ ಡೇಟ್ ಮುಹೂರ್ತ ಫಿಕ್ಸ್ ಮಾಡಿದ್ದು ಸುದೀಪ್. ಅವರು ಹೇಳಿದ ದಿನವೇ ಸಿನಿಮಾ ರಿಲೀಸ್ ಮಾಡ್ಬೇಕಿತ್ತು. ಪಿಚ್ಚರ್ ಮಾಡು ಅಂದ್ರೆ ಮಾಡ್ತೀನಿ, ದುಡ್ದು ಇಸ್ಕೊಂಡು ಹೋಗಿ ಅಂದ್ರೆ ಹೋಗ್ತೀನಿ. ನಾನು ನಿರ್ಮಾಪಕನಾಗಿರುವುದು ಸಿನಿಮಾ ಮಾಡೋಕೆ ಎಂದರು.

ಸುದೀಪ್ ಕಾಲ್ ಶಿಟ್ ಕೊಟ್ರೆ ಈಗಲೂ ಸಿನಿಮಾ ಮಾಡ್ತೀನಿ ಎಂದು ನಿರ್ಮಾಪಕ ಎನ್ಎಂ ಸುರೇಶ್ ಹೇಳಿದರು. ಕಷ್ಟ ಅಂತ ಬಂದಾಗ ಕುಮಾರ್ ಅವರ ಜೊತೆ ನಿಲ್ಲುತ್ತೇನೆ. ಸುದೀಪ್ ಅವರು ಮೇರು ನಟ. ಕೂತು ಬಗೆಹರಿಸಿಕೊಳ್ಳಬಹುದಿತ್ತು. ಒಮ್ಮೆ ಕುಮಾರ್ ಅವರ ಮಗ ಬಂದು ನಮ್ಮ ತಂದೆ ಮೂರು ಬಾರಿ ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೆ ಯತ್ನಿಸಿದರು ಎಂದರು. ಹೀಗೆ ಹೇಳಿದ್ದು ಕುಮಾರ್ ಮಗ. ಆದ್ದರಿಂದ ನಾನು ಆ ಮಾತು ಪ್ರಸ್ತಾಪ ಮಾಡಿದೆ ಎಂದು ಸುರೇಶ್ ಹೇಳಿದರು.

ಇದರ ಹಿಂದೆ ಯಾರ ಕೈವಾಡ, ಪಿತೂರಿ ಇಲ್ಲ. ಕುಮಾರ್ ಹಾಗೂ ಸುದೀಪ್ ಅವರದ್ದು ಅವಿನಾಭಾವ ಸಂಬಂಧ. ಇಬ್ಬರು ಕೂತು ಮಾತನಾಡಿದರೆ ಬೆಣ್ಣೆಯಿಂದ ಕೂದಲು ತೆಗೆದಹಾಗೆ ಸಮಸ್ಯೆ ಬಗೆಹರಿಯುತ್ತದೆ. ಆದರೆ ಅದಕ್ಕೆ ಅವರು ಸ್ಪಂದಿಸಲಿಲ್ಲ ಅನ್ನೋ ಕಾರಣಕ್ಕೆ ಹೀಗೆ ಜಟಾಪಟಿ ಮುಂದುವರೆದಿದೆ ಎಂದು ನಿರ್ಮಾಪಕರ ಸಂಘದ ಅಧ್ಯಕ್ಷರು ಉಮೇಶ್ ಮಾತನಾಡಿದರು.

ಈ ಇಂಡಸ್ಟ್ರಿನಲ್ಲಿ ಎಲ್ಲರೂ ಜಗಳ ಮಾಡಿ ಒಂದಾಗಿದ್ದಾರೆ ಎಂದು ಸೌಂದರ್ಯ, ರಾಕ್ ಲೈನ್, ರವಿಚಂದ್ರನ್ - ಹಂಸಲೇಖ ಉದಾಹರಣೆ ನೀಡಿದ ಉಮೇಶ್, ಇವರು ಯಾಕೆ ಆ ಪ್ರಯತ್ನ ಮಾಡಬಾರದೆಂದರು. ರವಿಚಂದ್ರನ್ ಹಾಗೂ ಶಿವರಾಜ್ ಕುಮಾರ್ ಅವರನ್ನೂ ಆಹ್ವಾನಿಸುತ್ತೇವೆ. ಮುಂಚೂಣಿಯಲ್ಲಿ ನಿಂತ್ಕೊಳ್ಳಿ ಅಂತ ಕೇಳುತ್ತೇವೆ. ಸೋಮವಾರ ಸಂಧಾನ ಸಮಿತಿಯಲ್ಲಿ ಪರಿಹಾರ ಹುಡುಕುವ ಸಾಧ್ಯತೆಯಿದೆ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net