

ಬೆಂಗಳೂರು: ಜಗತ್ತಿಗೆ ಗುಡ್ ಬೈ ಎಂದು ಹೇಳಿ ಆತಂಕ ಮೂಡಿಸಿದ ಬೆನ್ನಲ್ಲೇ ನಾನು ಚೆನ್ನಾಗಿದ್ದೇನೆ, ಸುರಕ್ಷಿತವಾಗಿದ್ದೇನೆ ಎಂದಿದ್ದ ಸ್ಯಾಂಡಲ್ವುಡ್ ನಟಿ ಜಯಶ್ರೀ ರಾಮಯ್ಯ ಇದೀಗ ಮತ್ತೊಮ್ಮೆ ಸಾಯುವ ಮಾತನಾಡಿದ್ದಾರೆ. ನಿಜಕ್ಕೂ ಅವರಿಗೆ ಏನಾಗಿದೆ ಎಂದು ಅಭಿಮಾನಿಗಳು ಮಾತನಾಡಿಕೊಳ್ಳುತ್ತಿದ್ದಾರೆ. ‘
ಮೊನ್ನೆ ದಿಢೀರ್ ಫೇಸ್ಬುಕ್ನಲ್ಲಿ ಪೋಸ್ಟ್ ಹಾಕಿದ್ದ ಜಯಶ್ರೀ, ‘ನನ್ನಿಂದಾಗದು, ಈ ಕೆಟ್ಟ ಜಗತ್ತಿಗೆ ಮತ್ತು ಖಿನ್ನತೆಗೆ ಗುಡ್ಬೈ’ ಎಂದು ಬರೆದುಕೊಂಡಿದ್ದರು. ಇದಾದ ಬೆನ್ನಲ್ಲೇ ನೆಟ್ಟಿಗರು ಆತುರದ ನಿರ್ಧಾರ ತೆಗೆದುಕೊಳ್ಳಬೇಡಿ, ಧೈರ್ಯವಾಗಿರಿ ಎಂದಿದ್ದರು. ಅಲ್ಲದೆ, ಅವರನ್ನು ಸಂಪರ್ಕಿಸಲು ಸಾಕಷ್ಟು ಮಂದಿ ಪ್ರಯತ್ನಿಸಿದ್ದರು.
ಇದಾದ ಕೆಲವೇ ಕ್ಷಣಗಳಲ್ಲಿ ಮತ್ತೊಂದು ಪೋಸ್ಟ್ ಮಾಡಿದ ಜಯಶ್ರೀ, ನಾನು ಚೆನ್ನಾಗಿದ್ದೇನೆ. ಸುರಕ್ಷಿತವಾಗಿದ್ದೇನೆ. ಲವ್ ಯು ಆಲ್ ಎಂದು ಪೋಸ್ಟ್ ಮಾಡಿ ಆತಂಕಕ್ಕೆ ತೆರೆ ಎಳೆದಿದ್ದರು. ಅಭಿಮಾನಿಗಳು ಸಹ ಹೀಗೆ ಚೆನ್ನಾಗಿರಿ, ಯಾವುದೇ ಕಾರಣಕ್ಕೂ ದುಡುಕಬೇಡಿ ಎಂದಿದ್ದರು.
ಇದೀಗ ಮತ್ತೊಮ್ಮೆ ಫೇಸ್ಬುಕ್ ಲೈವ್ನಲ್ಲಿ ಮಾತನಾಡಿರುವ ಜಯಶ್ರೀ, ನನಗೆ ಬದುಕಲು ಇಷ್ಟವಿಲ್ಲ. ನಾನು ಸಾಯಬೇಕು ಎಂದಿದ್ದಾರೆ. ಕೇವಲ ಒಂದು ಗಂಟೆ ಹಿಂದಷ್ಟೇ ಲೈವ್ನಲ್ಲಿ ಮಾತನಾಡಿ, ಇದೀಗ ವಿಡಿಯೋ ಡಿಲೀಟ್ ಮಾಡಿದ್ದಾರೆ. ವಿಡಿಯೋದಲ್ಲಿ ಜಯಶ್ರೀ ಖಿನ್ನತೆಯಿಂದ ಬಳಲಿದಂತೆ ಕಾಣುತ್ತಿದ್ದು, ಲೈವ್ನಲ್ಲೂ ಅಭಿಮಾನಿಗಳು ಜಯಶ್ರೀ ಅವರಿಗೆ ಧೈರ್ಯದ ಮಾತುಗಳನ್ನಾಡಿದ್ದಾರೆ. ಎಲ್ಲವೂ ಸರಿಹೋಗಲಿದೆ. ನೀವು ಸಾಯುವ ಮಾತನ್ನು ಆಡಬೇಡಿ ಧೈರ್ಯವಾಗಿರಿ ಎಂದಿದ್ದಾರೆ. (ದಿಗ್ವಿಜಯ ನ್ಯೂಸ್)