

ರಾಮನಗರ : ಜಿಲ್ಲೆಯಲ್ಲಿ ಗುರುವಾರ ಎಲ್ಲೆಲ್ಲೂ ಕನ್ನಡ ಗೀತೆಗಳ ಕಂಪು. ಯಾವ ಶಾಲೆ, ಕಚೇರಿಗಳಿಗೆ ತೆರಳಿದರೂ ಬಾರಿಸು ಕನ್ನಡ ಡಿಂಡಿಮವ...
ಸರ್ಕಾರಿ ಕಚೇರಿಗಳಲ್ಲಂತೂ ಎಲ್ಲರೂ ಒಂದೇ ರೀತಿಯ ಉಡುಪುಗಳನ್ನು ತೊಟ್ಟು ಹಬ್ಬದ ವಾತಾವರಣನ್ನೇ ನಿರ್ಮಾಣ ಮಾಡಿದ್ದರು. ಹೌದು, ಇಂತಹ ಒಂದು ಸುಂದರ ಕ್ಷಣಕ್ಕೆ ಕಾರಣವಾಗಿದ್ದು, ಮಾತಾಡ್ ಮಾತಾಡ್ ಕನ್ನಡ, ಕನ್ನಡಕ್ಕಾಗಿ ನಾವು ಕರ್ನಾಟಕ ರಾಜ್ಯೋತ್ಸವ ಅಭಿಯಾನದಲ್ಲಿ ಏಕಕಾಲದಲ್ಲಿ ಕನ್ನಡದ ಶ್ರೇಷ್ಠತೆ ಸಾರುವ ಗೀತೆಗಳನ್ನು ಮನಮೋಹಕವಾಗಿ ಪ್ರಸ್ತುತಪಡಿಸುವ ಮೂಲಕ ನಾವೆಲ್ಲರೂ ಕನ್ನಡಿಗರು ಎನ್ನುವ ಸಂದೇಶ ಮೊಳಗಿಸಲಾಯಿತು.
ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್ ಕುಮಾರ್ ಮಾತನಾಡಿ, ಆಡಳಿತದಲ್ಲಿ ಕನ್ನಡ ಭಾಷೆಗೆ ಪ್ರ್ರಾಮುಖ್ಯತೆ ನೀಡಿ. ಕನ್ನಡದಲ್ಲೇ ಪತ್ರ ವ್ಯವಹಾರ ಮಾಡಿ. ಕಚೇರಿಗೆ ಬರುವ ಸಾರ್ವಜನಿಕರೊಂದಿಗೆ ಕನ್ನಡದಲ್ಲೇ ಮಾತಾಡಿ. ಅನ್ಯಭಾಷೆಯ ಜನರಿಗೆ ಪ್ರೀತಿಯಿಂದ ಕನ್ನಡ ಕಲಿಸಿ ಎಂದರು.
ಅಪರ ಜಿಲ್ಲಾಧಿಕಾರಿ ಟಿ.ಜವರೇಗೌಡ ಮಾತನಾಡಿ, ಕರ್ನಾಟಕದಲ್ಲಿ ವಾಸಿಸುವ ನಾವು ಕಡ್ಡಾಯವಾಗಿ ಕನ್ನಡದಲ್ಲೇ ಮಾತನಾಡುವ ಸಂಕಲ್ಪ ಮಾಡಬೇಕು. ಸಾಮಾಜಿಕ ಜಾಲತಾಣದಲ್ಲಿ ಕನ್ನಡ ಬಳಸುವುದು. ಕನ್ನಡದಲ್ಲೇ ಬರೆಯುವುದು, ಕನ್ನಡದಲ್ಲೇ ಸಹಿ ಮಾಡುವುದು, ಸಿರಿಗನ್ನಡ ಬಳಸುವ ಅಭ್ಯಾಸ ಮಾಡಿಕೊಳ್ಳಬೇಕು ಎಂದರು.
ಕುಟುಂಬ ಸದಸ್ಯರು, ಸಂಬಂಧಿಕರು, ಅನಿವಾಸಿ ಕನ್ನಡಿಗರು, ಸುದ್ದಿ ಮಾಧ್ಯಮದವರು, ಎಲ್ಲ ಸರ್ಕಾರಿ ನೌಕರರು ಕನ್ನಡದಲ್ಲೇ ಮಾತನಾಡುತ್ತೇನೆ, ನಾವು ಬಳಸುವ ಮೊಬೈಲ್ನಿಂದ ಕನ್ನಡದಲ್ಲೇ ಸಂದೇಶ ಕಳಿಸುವುದನ್ನು ಅಭ್ಯಾಸ ಮಾಡಿಕೊಳ್ಳುತ್ತೇವೆ ಎಂದು ಸಂಕಲ್ಪ ಮಾಡುವಂತೆ ಪ್ರೇರೇಪಿಸಿದರು.
ಆಹಾರ ಇಲಾಖೆ ಉಪನಿರ್ದೇಶಕಿ ಸೌಮ್ಯ, ಡಿಡಿಎಲ್ಆರ್ ಸಂತೋಷ್, ನ್ಯೂ ಎಕ್ಸ್‌ರ್ಟ್ ಶಾಲಾ ವಿದ್ಯಾರ್ಥಿಗಳು ಇದ್ದರು.
ಶಾಲೆಗಳಲ್ಲಿ ಸಂಭ್ರಮ ಜಿಲ್ಲೆಯ ಎಲ್ಲ ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಕನ್ನಡದ ಹಾಡಿನ ಹಬ್ಬದಲ್ಲಿ ಉತ್ಸಾಹದಿಂದ ಭಾಗವಹಿಸಿದ್ದರು.
ರಾಷ್ಟ್ರಕವಿ ಕುವೆಂಪು ರಚಿತ ‘ಜಯಭಾರತ ಜನನಿಯ ತನುಜಾತೆ’, ‘ಬಾರಿಸು ಕನ್ನಡ ಡಿಂಡಿಮವ’, ಡಾ.ಕೆ.ಎಸ್. ನಿಸಾರ್ ಅಹಮದ್ ಅವರ ‘ಜೋಗದ ಸಿರಿ ಬೆಳಕಿನಲ್ಲಿ’, ಹಂಸಲೇಖ ರಚನೆಯ ‘ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು’ ಹಾಡುಗಳನ್ನು ರಾಗಬದ್ಧವಾಗಿ ಸುಶ್ರಾವ್ಯವಾಗಿ ಪ್ರಸ್ತುತಪಡಿಸಿ ಸಂಭ್ರಮಿ ಸಿದರು. ಈ ಮೂಲಕ ನಾಡು ನುಡಿಯ ಅಭಿಮಾನವನ್ನು ಬಡಿದೆಬ್ಬಿಸಿದ ಗೀತೆಗಳಿಗೆ ವಿದ್ಯಾರ್ಥಿ ಸಮೂಹ ನೃತ್ಯ ಮಾಡಿತು.
ಬಿಳಿ ವಸ್ತ್ರದಲ್ಲಿ ಕಂಗೊಳಿಸಿದರು : ಇನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾಡಳಿತ ಸಹಯೋಗದಲ್ಲಿ ಗುರುವಾರ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸ್ವತಃ ಜಿಲ್ಲಾಧಿಕಾರಿ ಬಿಳಿ ಅಂಗಿ, ಪಂಚೆ ಮತ್ತು ಶಲ್ಯ ಧರಿಸಿ ಕನ್ನಡದ ಹಬ್ಬದಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಜತೆಗೆ ಅಪರ ಜಿಲ್ಲಾಧಿಕಾರಿ ಟಿ. ಜವರೇಗೌಡ ಸೇರಿ ವಿವಿಧ ಪುರುಷ ಸಿಬ್ಬಂದಿ ಬಿಳಿ ವಸ್ತ್ರದಲ್ಲಿ ಮಿಂಚಿದರೆ, ಮಹಿಳಾ ಸಿಬ್ಬಂದಿ ಕೆಂಪು ಹಳದಿ ಸೀರೆ, ಚೂಡಿದಾರ್‌ಗಳನ್ನು ಧರಿಸಿ ಕಾರ್ಯಕ್ರಮಕ್ಕೆ ಮೆರುಗು ತಂದರು.