ಕಂಕನಾಡಿ ಹಳೇ ರಸ್ತೆಯಲ್ಲಿ ಮತ್ತೆ ದ್ವಿಮುಖ ಸಂಚಾರ

mng--21 mArch kankanadi circle
Published on

ಮಂಗಳೂರು: ನಗರದ ಕಂಕನಾಡಿ-ಪಂಪುವೆಲ್ ಹಳೇ ರಸ್ತೆಯಲ್ಲಿ (ಕಂಕನಾಡಿ ಓಲ್ಡ್ ರೋಡ್) ಮಂಗಳವಾರದಿಂದ ಈ ಹಿಂದಿನಂತೆಯೇ ದ್ವಿಮುಖ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ.


ವಾಹನಗಳ ಸುಗಮ ಸಂಚಾರದ ಉದ್ದೇಶದಿಂದ ಪ್ರಾಯೋಗಿಕವಾಗಿ ಈ ರಸ್ತೆಯಲ್ಲಿ ಮಾ.14ರಿಂದ ಏಕಮುಖ ಸಂಚಾರಕ್ಕೆ(ಪಂಪ್‌ವೆಲ್ ಕಡೆಯಿಂದ ಕಂಕನಾಡಿ ವೃತ್ತದ ಕಡೆ ಸಂಚರಿಸಲು ಮಾತ್ರ) ಅವಕಾಶ ನೀಡಲಾಗಿತ್ತು. ಆದರೆ ಇದರಿಂದ ವಾಹನ ದಟ್ಟಣೆ ಹೆಚ್ಚಾದ ಹಿನ್ನೆಲೆಯಲ್ಲಿ ಒಂದಷ್ಟು ಬದಲಾವಣೆ ಮಾಡಿ ಮಂಗಳವಾರದಿಂದ ಮತ್ತೆ ಈ ಹಿಂದಿನಂತೆಯೇ ದ್ವಿಮುಖ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ.


ಕಂಕನಾಡಿಯ ಕರಾವಳಿ ವೃತ್ತದಲ್ಲಿ ಮಂಗಳವಾರದಂದು ಸಿಗ್ನಲ್ ಲೈಟ್ ಕಾರ್ಯಾರಂಭ ಮಾಡಿದೆ. ಫಳ್ನೀರ್ ಕಡೆಯಿಂದ ಪಂಪ್‌ವೆಲ್ ಕಡೆಗೆ ಹೋಗುವ ವಾಹನಗಳು ಮಾತ್ರ ಈ ಹಿಂದಿನಂತೆ ಕಂಕನಾಡಿ ಹಳೇ ರಸ್ತೆಯಲ್ಲಿ ಸಂಚರಿಸಲು ಅವಕಾಶವಿಲ್ಲ. ಅವು ಇನ್ನು ಮುಂದೆ ಸಿಗ್ನಲ್ ದಾಟಿಕೊಂಡು ಮುಂದಕ್ಕೆ ಹೋಗಬೇಕಾಗಿದೆ. ವೆಲೆನ್ಸಿಯಾ ಕಡೆಯಿಂದ ಬಂದ ವಾಹನಗಳು ಯು ಟರ್ನ್ ತೆಗೆದು ಪಂಪ್‌ವೆಲ್‌ಗೆ ಸಾಗಬಹುದಾಗಿದೆ.


ಪೊಲೀಸ್ ಆಯುಕ್ತ ಕುಲದೀಪ್ ಕುಮಾರ್ ಆರ್. ಜೈನ್, ಸಂಚಾರ ವಿಭಾಗದ ಡಿಸಿಪಿ ದಿನೇಶ್ ಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net