‘ಹಿಂದಿ ಮಾತನಾಡಲು ಬರದಿದ್ದ ನೀವೊಬ್ಬರು ಭಾರತೀಯರಾ?’

Kanimozhi
Published on

ಚೆನ್ನೈ: ಕರೊನಾ ವೈರಸ್‌ ಹಿನ್ನೆಲೆಯಲ್ಲಿ ‘ಹಿಂದಿ ಹೇರಿಕೆ’ ಕುರಿತಾಗಿ ನಡೆಯುತ್ತಿದ್ದ ಬಿಸಿಬಿಸಿ ಚರ್ಚೆ ಸದ್ಯ ನಿಂತಿರುವ ಬೆನ್ನಲ್ಲೇ ಇದೀಗ ಡಿಎಂಕೆ ಸಂಸದೆ ಕನಿಮೊಳಿ ಇದರ ಕುರಿತಾಗಿ ಟ್ವೀಟ್‌ ಒಂದನ್ನು ಮಾಡಿದ್ದು, ಮತ್ತೆ ಈ ಚರ್ಚೆ ಶುರುವಾಗಿದೆ.

ಹಿಂದಿ ಹೇರಿಕೆ ಕುರಿತಂತೆ ತಮಗಾಗಿರುವ ಅನುಭವವನ್ನು ಕನಿಮೊಳಿ ಅವರು ಟ್ವಿಟರ್‌ ಖಾತೆಯಲ್ಲಿ ಹಂಚಿಕೊಂಡಿದ್ದು, ಅದಕ್ಕೆ ಭಾರಿ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕನ್ನಡಿಗರೂ ಸೇರಿದಂತೆ ಅನೇಕ ಮಂದಿ ಹಿಂದಿನ ಹೇರಿಕೆ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ವಿಮಾನ ನಿಲ್ದಾಣದಲ್ಲಿ ಕನಿಮೊಳಿ ಅವರೊಂದಿಗೆ ಅಲ್ಲಿ ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಫ್‌ಎಸ್‌) ಸಿಬ್ಬಂದಿ ಹಿಂದಿಯಲ್ಲಿ ಮಾತನಾಡಿದರಂತೆ. ಆಗ ಹಿಂದಿ ಬಾರದ ತಾವು ತಮಿಳು ಅಥವಾ ಇಂಗ್ಲಿಷ್‌ನಲ್ಲಿ ಮಾತನಾಡಲು ಕೇಳಿಕೊಂಡೆ. ಆಗ ಆ ಸಿಬ್ಬಂದಿ ನಿಮಗೆ ಹಿಂದಿ ಬರದಿದ್ದರೆ ನೀವೊಬ್ಬರು ಭಾರತೀಯರಾ ಎಂದು ಕೇಳಿದರು ಎಂಬುದಾಗಿ ಕನಿಮೊಳಿ ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ.

ನನಗೆ ಹಿಂದಿ ಭಾಷೆ ಗೊತ್ತಿಲ್ಲದ್ದರಿಂದ ಇಂಗ್ಲಿಷ್‌ ಅಥವಾ ತಮಿಳಿನಲ್ಲಿ ಮಾತನಾಡಲು ಹೇಳಿದೆ. ಹಿಂದಿ ಗೊತ್ತಿದ್ದರೆ ಮಾತ್ರ ಭಾರತೀಯಳಾಗಲು ಸಾಧ್ಯ ಎಂದು ಹೇಳಲಾಯಿತು ಎಂದು ಹೇಳಿರುವ ಕನಿಮೊಳಿ ಅವರು, ಅದಕ್ಕೆ #hindiimposition (ಹಿಂದಿ ಹೇರಿಕೆ) ಹ್ಯಾಷ್ ಟ್ಯಾಗ್ ಸೇರಿಸಿದ್ದಾರೆ.

ಈ ಟ್ವೀಟ್‌ಗೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಹಿಂದಿ ಹೇರಿಕೆ ವಿರುದ್ಧದ ನಿಮ್ಮ ಹೋರಾಟದಲ್ಲಿ ಕನ್ನಡಿಗರು ಜತೆಗಿದ್ದಾರೆ. ಹಿಂದಿಯೇತರ ಭಾರತೀಯರ ಪರವಾಗಿ ತಮಿಳುನಾಡು ಈ ಹೋರಾಟ ಮಾಡಬೇಕು ಎಂದು ರಾಜು ಹೊಸಮನಿ ಎಂಬುವವರು ಪ್ರತಿಕ್ರಿಯಿಸಿದ್ದಾರೆ.

ಕನ್ನಡ ಹೋರಾಟಗಾರ ಅರುಣ್ ಜಾವಗಲ್ ಈ ಟ್ವೀಟ್​ಗೆ ಪ್ರತಿಕ್ರಿಯಿಸಿ, ದಶಕಗಳಿಂದಲೂ ಇರುವ ಹಿಂದಿ ಮಾನಸಿಕತೆಗೆ ಆರ್.ವಿ. ಧುಲೇಕರ್ ಹೇಳಿಕೆಯನ್ನು ಉಲ್ಲೇಖಿಸಿ ಉದಾಹರಣೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net