ಕಂದನ ನೋಡುವ ಮೊದಲೇ ಪೈಲಟ್‌ ದುರ್ಮರಣ: ಸಾವಿನ ಅರಿವಿಲ್ಲದ ತುಂಬುಗರ್ಭಿಣಿ

vimana
Published on

ಕೋಯಿಕ್ಕೋಡ್‌: ಮೊನ್ನೆ ಶುಕ್ರವಾರ ಕೇರಳದ ಕೋಯಿಕ್ಕೋಡ್‌ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದ ಭಾರಿ ದುರಂತದಲ್ಲಿ ಮೃತಪಟ್ಟ ಸಹ ಪೈಲಟ್‌ ಅಖಿಲೇಶ್‌ ಕುಮಾರ್‌ ಅವರ ಪತ್ನಿಗೆ ಇದುವರೆಗೂ ತಮ್ಮ ಪತಿಯ ಸಾವಿನ ಬಗ್ಗೆ ಮಾಹಿತಿಯೇ ಇಲ್ಲ.

ಹೌದು. ತುಂಬು ಗರ್ಭಿಣಿಯಾಗಿರುವ ಅವರ ಪತ್ನಿ, ಇನ್ನೇನು ಒಂದು ವಾರದಲ್ಲಿ ಮಗುವಿಗೆ ಜನ್ಮ ನೀಡಲಿದ್ದಾರೆ. ಈ ಹಿನ್ನೆಲೆಯಲ್ಲಿ ಆಘಾತವಾಗದೇ ಇರಲಿ ಎನ್ನುವ ಕಾರಣಕ್ಕೆ ಅವರಿಗೆ ಇನ್ನೂ ಪತಿಯ ಸಾವಿನ ವಿಷಯ ತಿಳಿಸಿಲ್ಲ.

ದುಬೈನಿಂದ 191 ಪ್ರಯಾಣಿಕರನ್ನು ಹೊತ್ತು ಕೇರಳ ತಲುಪಿದ ಏರ್​ ಇಂಡಿಯಾ ವಿಮಾನ ಕರೀಪುರದಲ್ಲಿರುವ ಕೋಯಿಕ್ಕೋಡ್‌ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕ್ರ್ಯಾಶ್ ಲ್ಯಾಂಡಿಂಗ್ ಆಗಿ 18 ಮಂದಿ ಬಲಿ ಪಡೆದಿರುವರ ಪೈಕಿ ಅಖಿಲೇಶ್‌ ಕೂಡ ಒಬ್ಬರು.

ಉತ್ತರ ಪ್ರದೇಶದ ಮಥುರಾ ಮೂಲದ ಅಖಿಲೇಶ್‌, 2017ರಲ್ಲಿ ಮೇಘಾ ಅವರ ಜತೆ ವಿವಾಹವಾಗಿದ್ದು, ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದರು. ಆದರೆ ಮಗುವಿನ ಮುಖ ನೋಡುವ ಮೊದಲೇ ವಿಮಾನ ದುರಂತ ಅವರನ್ನು ಬಲಿ ಪಡೆದುಬಿಟ್ಟಿದೆ.

ಕೆಲ ತಿಂಗಳ ಹಿಂದಷ್ಟೇ ಅಖಿಲೇಶ್‌ ಅವರನ್ನು ವಿಮಾನ ನಿಲ್ದಾಣದಲ್ಲಿ ಸಿಬ್ಬಂದಿ ಸುತ್ತುವರೆದು ಜೈಜೈಕಾರ ಹಾಕಿದ್ದರು. ಏಕೆಂದರೆ ಕರೊನಾ ವೈರಸ್‌ ಹಿನ್ನೆಲೆಯಲ್ಲಿ, ಲಾಕ್‌ಡೌನ್‌ ನಂತರ ಭಾರತದಿಂದ ಶುರುವಾಗಿದ್ದ ವಂದೇಭಾರತ್‌ ವಿಮಾನವನ್ನು ಮೊದಲು ಇಳಿಸಿದವರು ಇದೇ ಅಖಿಲೇಶ್‌.

ಮೇ 8ರಂದು ಕೇರಳದ ಇದೇ ಕೋಯಿಕ್ಕೋಡ್ ವಿಮಾನ ನಿಲ್ದಾಣಕ್ಕೆ ತಲುಪಿಸಿದ್ದ ಪೈಲಟ್‌ಗಳ ತಂಡದಲ್ಲಿ ಅಖಿಲೇಶ್‌ ಕುಮಾರ್‌ ಸಹ ಒಬ್ಬರಾಗಿದ್ದರು.

ಆ ವೇಳೆ, ವಿಮಾನ ನಿಲ್ದಾಣದಲ್ಲಿ ಸಿಬ್ಬಂದಿ ಹಾಗೂ ಪ್ರಯಾಣಿಕರು ಇವರನ್ನು ಸುತ್ತುವರಿದು ಚಪ್ಪಾಳೆ ತಟ್ಟುವ ಮೂಲಕ ಗೌರವದ ಸ್ವಾಗತ ನೀಡಿದ್ದರು. ಆದರೆ, ಇದೀಗ ವಿಮಾನ ದುರಂತದಲ್ಲಿ ಮಡಿದು ಎಲ್ಲರೂ ಕಣ್ಣೀರು ಹಾಕುವಂತೆ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net