

ಮುಂಬೈ: ಚಂಡೀಗಢ ವಿಮಾನ ನಿಲ್ದಾಣದಲ್ಲಿ ತನಗೆ ಕಪಾಳಮೋಕ್ಷ ಮಾಡಿದ ಸಿಐಎಸ್‌ಎಫ್ ಕಾನ್‌ಸ್ಟೆಬಲ್‌ನನ್ನು ಹೊಗಳುತ್ತಿರುವವರಿಗೆ ನಟಿ ಮತ್ತು ಹಿಮಾಚಲ ಪ್ರದೇಶದ ಮಂಡಿ ಕ್ಷೇತ್ರದ ಬಿಜೆಪಿ ಸಂಸದೆ ಕಂಗನಾ ರಣಾವತ್ ಪ್ರಶ್ನಿಸಿದ್ದಾರೆ.
"ಪ್ರತಿಯೊಬ್ಬ ಅತ್ಯಾಚಾರಿ, ಕೊಲೆಗಾರ, ಕಳ್ಳರು ಅಪರಾಧ ಮಾಡಲು ಭಾವನಾತ್ಮಕ, ದೈಹಿಕ, ಮಾನಸಿಕ ಅಥವಾ ಆರ್ಥಿಕ ಕಾರಣಗಳನ್ನು ಹೊಂದಿರುತ್ತಾರೆ. ಯಾವುದೇ ಅಪರಾಧವು ಕಾರಣವಿಲ್ಲದೆ ನಡೆಯುವುದಿಲ್ಲ. ಆದರೂ ಅವರು ಅಪರಾಧಿಗಳೆ ಮತ್ತು ಅವರಿಗೆ ಶಿಕ್ಷೆಯಾಗುತ್ತದೆ. ನೀವು ಅಪರಾಧಿಗಳಿಗೆ ಬೆಂಬಲ ನೀಡಿದರೆ, ಇದು ಅಪರಾಧಿಗಳಿಗೆ ಪ್ರೇರಣೆಯಾಗಲಿದೆ" ಎಂದು ಕಂಗನಾ ತಮ್ಮ ಎಕ್ಸ್ ಖಾತೆಯಲ್ಲಿ ಮಾಡಿರುವ ಪೋಸ್ಟ್ನಲ್ಲಿ ಹೇಳಿದ್ದಾರೆ.
ಕಂಗನಾ ರಣಾವತ್ ಅವರು ದೆಹಲಿಗೆ ಆಗಮಿಸಿದ ಸಿಐಎಸ್‌ಎಫ್ ಮಹಾನಿರ್ದೇಶಕ ನೀನಾ ಸಿಂಗ್ ಅವರಿಗೆ ದೂರು ಸಲ್ಲಿಸಿದ್ದಾರೆ. ದೂರಿನಲ್ಲಿ ಚಂಡೀಗಢ ವಿಮಾನ ನಿಲ್ದಾಣದಲ್ಲಿ ಭದ್ರತಾ ತಪಾಸಣೆಯ ನಂತರ ವಿಮಾನ ಹತ್ತುವಾಗ ಸಿಐಎಸ್‌ಎಫ್ ಕಾನ್‌ಸ್ಟೆಬಲ್ ಕುಲ್ವಿಂದರ್ ಕೌರ್ ಕಪಾಳಮೋಕ್ಷ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ರೈತರ ಹೋರಾಟದ ಕುರಿತು ಕಂಗನಾ ಈ ಹಿಂದೆ ಮಾಡಿದ ಹೇಳಿಕೆಗಳಿಂದ ಅಸಮಾಧಾನಗೊಂಡಿದ್ದ ಕುಲ್ವಿಂದರ್ ಕೌರ್ ಕಂಗನಾ ರಣಾವತ್ ಅವರಿಗೆ ಕಪಾಳಮೋಕ್ಷ ಮಾಡಿದ್ದಾರೆ ಎನ್ನಲಾಗಿದೆ. ಇದರ ಬೆನ್ನಲ್ಲೇ ಸಿಐಎಸ್‌ಎಫ್ ಕಾನ್‌ಸ್ಟೆಬಲ್ ಕುಲ್ವಿಂದರ್ ಕೌರ್ ಅವರನ್ನು ವಜಾಗೊಳಿಸಲಾಗಿದೆ. (ಏಜೆನ್ಸೀಸ್)