

ಮುಂಬೈ: ಬಾಲಿವುಡ್ ಕ್ವೀನ್ ಕಂಗನಾ ರಣಾವತ್ ಅಭಿನಯದ ಮೂಲಕ ಮಾತ್ರವಲ್ಲದೆ, ನೇರ ನುಡಿಯಿಂದಲೂ ತಮ್ಮದೇ ಅಭಿಮಾನ ಬಳಗವನ್ನು ಹೊಂದಿದ್ದಾರೆ. ಫಿಲ್ಟರ್ ಇಲ್ಲದೆ ಹೇಳುವ ಇವರ ಮಾತುಗಳಿಂದಾಗಿ ಸಾಮಾಜಿಕ ಜಾಲತಾಣದಲ್ಲಿ ಹಲವು ಬಾರಿ ಟ್ರೋಲ್ ಆಗಿದ್ದಾರೆ. ನಟಿಯಾಗಿದ್ದ ಕಂಗನಾ ಲೋಕಸಭೆಯಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದು ಹಿಮಾಚಲ ಪ್ರದೇಶದ ಮಂಡಿಯ ಬಿಜೆಪಿ ಸಂಸದೆಯಾಗಿದ್ದಾರೆ ಎನ್ನುವುದು ಗೊತ್ತೆ ಇದೆ. ಸದ್ಯ ಅವರು ತಮ್ಮ ಮುಂಬರುವ ಎಮರ್ಜೆನ್ಸಿ ಸಿನಿಮಾದಲ್ಲಿ ಬಿಜಿಯಿದ್ದಾರೆ.
ಹೌದು ಇತ್ತೀಚೆಗಷ್ಟೆ ಕಂಗನಾ ಅವರ ಎಮರ್ಜೆನ್ಸಿ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದೆ. ಈ ಸಮಾರಂಭದಲ್ಲಿ ಮಾತನಾಡಿದ ಕಂಗನಾ ತಮ್ಮ ಆಸೆಯನ್ನು ತಿಳಿಸಿದ್ದಾರೆ. ಕಂಗನಾ ಅವರು ಬಾಲಿವುಡ್ನ ಫೇಮಸ್ ಖಾನ್ಗಳೊಂದಿಗೆ ಸಿನಿಮಾ ಮಾಡಬೇಕಂತೆ. ಶಾರೂಖ್ ಖಾನ್, ಸಲ್ಮಾನ್ ಖಾನ್, ಅಮೀರ್ ಖಾನ್ ಅವರ ಸಿನಿಮಾವನ್ನು ತಾವೇ ನಿರ್ದೇಶನ ಮತ್ತು ನಿರ್ಮಾಣ ಮಾಡಬೇಕು ಎಂದು ಹೇಳಿದ್ದಾರೆ. ಅವರಲ್ಲಿನ ಪ್ರತಿಭಾವಂತ ಭಾಗವನ್ನು ಜನರಿಗೆ ತೋರಿಸಲು ಇಷ್ಟಪಡುತ್ತೇನೆ. ಅವರಲ್ಲಿನ ಟ್ಯಾಲೆಂಟ್ ಜನರಿಗೆ ತೋರಿಸುವುದರ ಜತೆಗೆ ಸಮಾಜಕ್ಕೆ ಒಳಿತಾಗುವ ಸಿನಿಮಾ ತೆಗೆಯುವ ಬಗ್ಗೆ ಆಸಕ್ತಿ ಇರುವುದಾಗಿ ತಿಳಿಸಿದರು.
ಅಲ್ಲದೆ ಬಾಲಿವುಡ್ನಲ್ಲಿ ತಮಗಿಷ್ಟವಾದ ಖಾನ್ ಯಾರೆಂಬುದನ್ನು ಹೇಳಿದರು. ಕಂಗನಾ ರಣಾವತ್ ಅವರಿಗೆ ಇರ್ಫಾನ್ ಖಾನ್ ಸಾಬ್ ಎಂದರೆ ಇಷ್ಟವಂತೆ. ಇವರ ಸಿನಿಮಾವನ್ನು ನಿರ್ದೇಶಿಸಬೇಕು ಎಂದುಕೊಂಡಿದ್ದೆ ಆದರೆ ಅದು ಸಾಧ್ಯವಾಗದ ಕಾರಣ ನನಗೆ ಬೇಸರವಿದೆ ಎಂದು ಹೇಳಿದರು. ಕ್ಯಾನ್ಸರ್ನಿಂದಾಗಿ ಇರ್ಫಾನ್ ಖಾನ್ ಅವರು 2020ರಲ್ಲಿ ಮೃತಪಟ್ಟರು. ಅದಷ್ಟೇ ಅಲ್ಲದೆ ಕಂಗನಾ ತಾವು ಇಂಡಸ್ಟ್ರಿಯಿಂದ ಬಹಿಷ್ಕಾರಗೊಂಡಿದ್ದೇನೆ. ಇನ್ನು ಮುಂದೆ ತನ್ನೊಂದಿಗೆ ನಿಲ್ಲುವುದು ಅಥವಾ ಕೆಲಸ ಮಾಡುವುದು ಯಾರಿಗೆ ಆದರೂ ಸುಲಭವಲ್ಲ ಎಂದು ಹೇಳಿದರು.
ಕಂಗನಾ ಅವರ ಮುಂದಿನ ಸಿನಿಮಾ ಎಮರ್ಜೆನ್ಸಿ, ದೇಶದಲ್ಲಿನ ತುರ್ತು ಪರಿಸ್ಥಿತಿ ಹೇರಿದ ಅವಧಿಯನ್ನು ಆಧರಿಸಿದೆ. ಕಂಗನಾ ರಣಾವತ್ ಭಾರತದ ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾ 2024 ಸೆಪ್ಟೆಂಬರ್ 6ರಂದು ಬಿಡುಗಡೆಯಾಗಲಿದೆ. ಸಿನಿಮಾದಲ್ಲಿ ಅನುಪಮ್ ಖೇರ್, ಮಹಿಮಾ ಚೌಧರಿ, ಮಿಲಿಂದ್ ಸೋಮನ್, ಶ್ರೇಯಸ್ ತಲ್ಪಾಡೆ, ವಿಶಾಕ್ ನಾಯರ್ ಮತ್ತು ದಿವಂಗತ ಸತೀಶ್ ಕೌಶಿಕ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. (ಏಜೆನ್ಸೀಸ್)