'ನನ್ನ ಭವಿಷ್ಯ ಎಮರ್ಜೆನ್ಸಿ ಮೇಲಿದೆ': ಶಾಕಿಂಗ್​ ಹೇಳಿಕೆ ನೀಡಿದ ಕಂಗನಾ..

kangana ranouth
Published on

ಮುಂಬೈ: ಕಂಗನಾ ನಟನೆ ನಿಲ್ಲಿಸಿದ್ದಾಳೆ ಎಂಬ ಆರೋಪಗಳಿಗೆ ನಾನು ಇಂಡಸ್ಟ್ರಿಯಲ್ಲಿ ಮುಂದುವರೆಯಬೇಕೋ ಬೇಡವೋ ಎಂಬುದನ್ನು ಪ್ರೇಕ್ಷಕರು ನಿರ್ಧರಿಸುತ್ತಾರೆ ಎಂದು ನಟಿ, ರಾಜಕಾರಣಿ ಕಂಗನಾ ರಣಾವತ್ ಮತ್ತೊಮ್ಮೆ ಪ್ರತಿಕ್ರಿಯೆ ನೀಡಿದ್ದಾರೆ.

ತನ್ನ ಇತ್ತೀಚಿನ ಚಿತ್ರ 'ಎಮರ್ಜೆನ್ಸಿ' ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಅವರು ಈ ಬಗ್ಗೆ ಮಾತನಾಡಿ, ನಾನು ನಟಿಯಾಗಿ ಮುಂದುವರಿಯಬೇಕೇ ಅಥವಾ ಬೇಡವೇ ಎಂಬುದು ಪ್ರೇಕ್ಷಕರ ತೀರ್ಪಿನ ಮೇಲೆ ಅವಲಂಬಿತವಾಗಿರುತ್ತದೆ. ನಾನು ರಾಜಕೀಯಕ್ಕೆ ಬರುತ್ತೇನೆ ಎಂದು ಅಂದುಕೊಂಡಿರಲಿಲ್ಲ. ಆದರೆ, ಜನರು ನನ್ನನ್ನು ಗೆಲ್ಲಿಸಿದ್ದಾರೆ. ನಾನು ಯಾವ ಪಕ್ಷದಿಂದ ಸ್ಪರ್ಧಿಸಿದ್ದೇನೆ ಎಂಬುದನ್ನು ಬಿಟ್ಟರೆ, ನಾನು ಚುನಾವಣೆಯಲ್ಲಿ ಸ್ಪರ್ಧಿಸಬೇಕೆಂದು ಜನರು ಬಲವಾಗಿ ಬಯಸಿದ್ದರು. ಅದಕ್ಕಾಗಿಯೇ ಅವರು ನನ್ನನ್ನು ಗೆಲ್ಲಿಸಿದರು. ಅಲ್ಲದೆ ನನ್ನ ನಟನಾ ವೃತ್ತಿಯು 'ಎಮರ್ಜೆನ್ಸಿ'ಯ ಯಶಸ್ಸಿನ ಮೇಲೆ ಅವಲಂಬಿತವಾಗಿದೆ. ನಾನು ಬಯಸಿದ ಯಶಸ್ಸು ಸಿಕ್ಕರೆ ಇಂಡಸ್ಟ್ರಿಯಲ್ಲಿ ಉಳಿಯುತ್ತೇನೆ. ರಾಜಕೀಯದಲ್ಲಿ ನನ್ನ ಅವಶ್ಯಕತೆ ಹೆಚ್ಚಿದೆ ಎಂದು ಅನಿಸಿದರೆ ಆ ಕ್ಷೇತ್ರದಲ್ಲಿ ಮುಂದುವರಿಯುತ್ತೇನೆ. ನಮಗೆ ಅಗತ್ಯವಿರುವ ಮತ್ತು ಗೌರವಾನ್ವಿತ ಸ್ಥಳದಲ್ಲಿರಲು ಬಯಸುತ್ತೇನೆ. ಸದ್ಯ ಈ ವಿಚಾರದಲ್ಲಿ ನಾನು ಯಾವುದೇ ನಿರ್ಧಾರ ಕೈಗೊಂಡಿಲ್ಲ’ ಎಂದು ಹೇಳಿದರು.

ಕಂಗನಾ ಅಭಿನಯದ 'ಎಮರ್ಜೆನ್ಸಿ' ಸಿನಿಮಾ ಕೊನೆಗೂ ಬಿಡುಗಡೆಗೆ ಸಿದ್ಧವಾಗಿದೆ. ಹಲವಾರು ಮುಂದೂಡಿಕೆಗಳ ನಂತರ ಸೆಪ್ಟೆಂಬರ್ 6 ರಂದು ಪ್ರೇಕ್ಷಕರ ಮುಂದೆ ಬರಲಿದೆ. ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರ ಜೀವನಾಧಾರಿತ ಚಿತ್ರ ಇದಾಗಿದೆ. ಈ ಸಿನಿಮಾವನ್ನು ನಿರ್ದೇಶಿಸಿ ನಿರ್ಮಿಸಿರುವ ಕಂಗನಾ ಇಂದಿರಾ ಗಾಂಧಿ ಪಾತ್ರದಲ್ಲಿ ನಟಿಸಿದ್ದಾರೆ. ಜಯಪ್ರಕಾಶ್ ನಾರಾಯಣ್ ಪಾತ್ರದಲ್ಲಿ ಅನುಪಮ್ ಖೇರ್ ಮತ್ತು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಪಾತ್ರದಲ್ಲಿ ಶ್ರೇಯಸ್ ತಲ್ಪಾಡೆ ನಟಿಸಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net