ಕನಕದಾಸರಿಂದ ಸಾಹಿತ್ಯಕ್ಕೆ ಅಮೂಲ್ಯ ಕೊಡುಗೆ

ಸೊರಬದಲ್ಲಿ ಆಯೋಜಿಸಿದ್ದ ಕನಕದಾಸ ಜಯಂತಿ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಭಕ್ತ ಮಂಡಳಿ ಅಧ್ಯಕ್ಷ ತಿಪ್ಪಣ್ಣ ಪುಷ್ಪನಮನ ಸಲ್ಲಿಸಿದರು. ವಿನಯಕುಮಾರ್, ಬಾಲಕೃಷ್ಣ, ಯಶವಂತ ಇತರರಿದ್ದರು.
ಸೊರಬದಲ್ಲಿ ಆಯೋಜಿಸಿದ್ದ ಕನಕದಾಸ ಜಯಂತಿ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಭಕ್ತ ಮಂಡಳಿ ಅಧ್ಯಕ್ಷ ತಿಪ್ಪಣ್ಣ ಪುಷ್ಪನಮನ ಸಲ್ಲಿಸಿದರು. ವಿನಯಕುಮಾರ್, ಬಾಲಕೃಷ್ಣ, ಯಶವಂತ ಇತರರಿದ್ದರು.
Published on
ಸೊರಬ: ದಾಸ ಶ್ರೇಷ್ಠರಲ್ಲಿ ಒಬ್ಬರಾದ ಕನಕದಾಸರು ಸಮಾಜದಲ್ಲಿನ ಮೂಢನಂಬಿಕೆ, ಜಾತಿಪದ್ಧತಿ ಸೇರಿ ಅನಿಷ್ಟ ಪದ್ಧತಿಗಳ ವಿರುದ್ಧ ಧ್ವನಿ ಎತ್ತಿ, ಸಮಾಜದ ಅಂಕುಡೊಂಕುಗಳನ್ನು ತಿದ್ದಿದ ಮಹಾನ್ ದಾರ್ಶನಿಕ ಎಂದು ಕನಕದಾಸ ಭಕ್ತ ಮಂಡಳಿ ಅಧ್ಯಕ್ಷ ತಿಪ್ಪಣ್ಣ ಬಣ್ಣಿಸಿದರು.
ಪಟ್ಟಣದ ದಂಡಾವತಿ ಬ್ಲಾಕ್‌ನಲ್ಲಿ ಆಯೋಜಿಸಿದ್ದ ಕನಕದಾಸ ಜಯಂತಿ ಅಂಗವಾಗಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.
ಕನಕದಾಸರು ಒಂದು ವರ್ಗಕ್ಕೆ ಸೀಮಿತವಲ್ಲ. ಅವರು ಕಾವ್ಯ ಹಾಗೂ ಕೀರ್ತನೆಗಳ ಮೂಲಕ ಸಮಾಜದಲ್ಲಿ ಬೇರೂರಿದ್ದ ಕಂದಾಚಾರಗಳನ್ನು ಹೋಗಲಾಡಿಸಲು ಶ್ರಮಿಸಿ ಸಾಹಿತ್ಯಕ್ಕೆ ಅಮೂಲ್ಯ ಕೊಡುಗೆ ನೀಡಿದ್ದಾರೆ. ಎಲ್ಲರನ್ನೂ ಸಮಾನತೆ ದೃಷ್ಟಿಕೋನದಿಂದ ನೋಡುವಂತೆ ತಿಳಿಸಿ ವಿಶ್ವಮಾನವರಾದರು. ಅವರ ಭಕ್ತಿ ಜ್ಞಾನದಿಂದ ಜಾತಿ ವ್ಯವಸ್ಥೆ ವಿರುದ್ಧವಾಗಿ ಧ್ವನಿ ಎತ್ತಿ ದಾಸ ಶ್ರೇಷ್ಠರಾಗಿದ್ದಾರೆ. ಅವರು ಮೂಲ ಹೆಸರು ತಿಮ್ಮಪ್ಪ ನಾಯ್ಕ. ಅವರು ಭಕ್ತಿ ಮಾರ್ಗವನ್ನು ಆಯ್ಕೆ ಮಾಡಿಕೊಂಡು ಕನಕದಾಸ ಎಂಬ ಹೆಸರನ್ನು ಪಡೆದರು. ಅವರು ಜನರ ನಡುವೆ ಸಮಾನತೆ, ವಿನಯ, ಸತ್ಯ, ಅಹಿಂಸೆ ಎಂಬ ಮೌಲ್ಯಗಳನ್ನು ಸಾರಿದರು ಎಂದರು.
ಶಿಕ್ಷಕ ವಿನಯಕುಮಾರ್ ಮಾತನಾಡಿ, ಕನಕದಾಸರು ಕನ್ನಡ ಸಾಹಿತ್ಯಕ್ಕೆ ಬಹುದೊಡ್ಡ ಕೊಡುಗೆಗಳನ್ನು ನೀಡಿದ್ದಾರೆ. ಅವರ ದೃಢವಾದ ಭಕ್ತಿಗೆ ಉಡುಪಿಯ ಶ್ರೀಕೃಷ್ಣನೇ ತನ್ನ ಸ್ಥಾನವನ್ನು ಬದಲಿಸಿದ ಎಂದು ಹೇಳಲಾಗುತ್ತದೆ. ಅಂದಿನಿಂದ ಅದನ್ನು ಕನಕನ ಕಿಂಡಿ ಎಂದು ಕರೆಯಲಾಗುತ್ತದೆ. ಅವರು ತಮ್ಮ ಜೀವಿತಾವಧಿಯಲ್ಲಿ ಅನೇಕ ದೇಗುಲಗಳನ್ನು ಸಂದರ್ಶಿಸಿದ್ದಾರೆ. ಅವರು ಪಾದಸ್ಪರ್ಶ ಮಾಡಿದ ದೇಗುಲಗಳು ಪವಾಡಕ್ಕೆ ಸಾಕ್ಷಿಯಾಗಿವೆ ಎಂದು ತಿಳಿಸಿದರು.
ಸಾರ್ವಜನಿಕ ಹಿತರಕ್ಷಣಾ ಹೋರಾಟ ಸಮಿತಿ ಉಪಾಧ್ಯಕ್ಷ ದತ್ತಾ ಸೊರಬ, ಬಾಲಕೃಷ್ಣ, ಯಶವಂತ, ಈಶ್ವರ, ವೈಷ್ಣವಿ, ಅಲಿನಾ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net