ವಿಶ್ವದ ಏಳೂ ಶಿಖರ ಏರಿದ ಕಾಮ್ಯಾ

ವಿಜಯವಾಣಿ (6)
Published on

ನವದೆಹಲಿ: ಮುಂಬೈನ ಇಂಡಿಯನ್ ನೇವಿ ಚಿಲ್ಡನ್ಸ್ ಸ್ಕೂಲ್​ನ 17 ವರ್ಷದ ವಿದ್ಯಾರ್ಥಿನಿ ಕಾಮ್ಯಾ ಕಾರ್ತಿಕೇಯನ್, ವಿಶ್ವದ ಏಳು ಖಂಡಗಳಲ್ಲಿನ ಅತ್ಯುನ್ನತ ಶಿಖರಗಳನ್ನು ಏರಿದ ಕಿರಿಯ ವ್ಯಕ್ತಿ ಎಂದು ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ. ಡಿಸೆಂಬರ್ 24ರಂದು ಅಂಟಾರ್ಕ್ಟಿಕಾದ ಮೌಂಟ್ ವಿನ್ಸನ್ ಏರುವ ಮೂಲಕ ಅವರು ಈ ಸಾಧನೆ ಮಾಡಿದರು. ತಂದೆ ಭಾರತೀಯ ನೌಕಾಪಡೆಯ ಕಮಾಂಡರ್ ಆಗಿದ್ದು, ಅವರ ನೆರವಿನಿಂದ ಕಾಮ್ಯ 16,050 ಅಡಿ ಎತ್ತರದ ಅಂಟಾರ್ಕ್ಟಿಕ್ ಶಿಖರವನ್ನು ಏರುವಲ್ಲಿ ಯಶಸ್ವಿಯಾಗಿದ್ದಾರೆ.

13ನೇ ವಯಸ್ಸಿನಲ್ಲಿ ಕಾಮ್ಯಾ ಪರ್ವತಾರೋಹಣ ಆರಂಭಿಸಿದ್ದರು. ಆಫ್ರಿಕಾದ ಮೌಂಟ್ ಕಿಲಿಮಂಜಾರೋ, ಯುರೋಪಿನ ಮೌಂಟ್ ಎಲ್ಬ›ಸ್, ಆಸ್ಟ್ರೇಲಿಯಾದ ಮೌಂಟ್ ಕೊಸ್ಸಿಯುಸ್ಕೊ, ದಕ್ಷಿಣ ಅಮೆರಿಕಾದ ಮೌಂಟ್ ಅಕೊನ್ಕಾಗುವಾ, ಉತ್ತರ ಅಮೆರಿಕಾದ ಮೌಂಟ್ ಡೆನಾಲಿ, ಏಷ್ಯಾದ ಮೌಂಟ್ ಎವರೆಸ್ಟ್ ಮತ್ತು ಅಂತಿಮವಾಗಿ ಅಂಟಾರ್ಕ್ಟಿಕಾದ ಮೌಂಟ್ ವಿನ್ಸನ್ ಪರ್ವತವನ್ನು ಅವರು ಏರಿದ್ದಾರೆ. ಭಾರತೀಯ ನೌಕಾಪಡೆಯು ಕಾಮ್ಯಾ ಮತ್ತು ಅವರ ತಂದೆಯನ್ನು ಅಭಿನಂದಿಸಿದೆ.ಈ ಸಾಧನೆಯು ಭಾರತೀಯ ಯುವ ಅದಮ್ಯ ಮನೋಭಾವಕ್ಕೆ ಸಾಕ್ಷಿಯಾಗಿದೆ ಎಂದು ಬಣ್ಣಿಸಿದೆ. ಈ ಮೊದಲು, ಮೌಂಟ್ ಎವರೆಸ್ಟ್ ಶಿಖರವನ್ನು ಏರಿದ ಅತ್ಯಂತ ಕಿರಿಯ ವ್ಯಕ್ತಿ ಎಂದು ಕಾಮ್ಯ ಗುರುತಿಸಿಕೊಂಡಿದ್ದರು. ಪ್ರತಿಯೊಂದು ಶಿಖರವೂ ನನಗೆ ಧೈರ್ಯ, ಸಹಿಷ್ಣುತೆ ಮತ್ತು ನಮ್ಮ ಗ್ರಹದ ಸೌಂದರ್ಯದ ಬಗ್ಗೆ ಪಾಠ ಕಲಿಸಿತು. ನನ್ನ ಪ್ರಯಾಣವು ಇತರರನ್ನೂ ಪ್ರೇರೇಪಿಸುತ್ತದೆ ಎಂದು ನಾನು ಭಾವಿಸುತ್ತೇನೆ ಎಂದು ಅವರು ಪ್ರತಿಕ್ರಿಯೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net