ಕಾಂತಾರ ತೆರಕಂಡ ಬಳಿಕ ಕಂಬಳ ಮತ್ತಷ್ಟು ಪ್ರಾಮುಖ್ಯತೆ: ಹೈಕೋರ್ಟ್ ನ್ಯಾಯಮೂರ್ತಿ ಅಭಿಮತ

highcourt
Published on

ಬೆಂಗಳೂರು:  ಕಂಬಳ ಕ್ರೀಡೆಯನ್ನು ಸಂಸ್ಕೃತಿಯ ಭಾಗವಾಗಿ ಹಳ್ಳಿಯಲ್ಲಿ ಆಯೋಜನೆ ಮಾಡಲಾಗುತ್ತಿತ್ತು. ಈ ಹಿಂದೆ ದಕ್ಷಿಣಕನ್ನಡ ಹಾಗೂ ಉಡುಪಿ ಭಾಗಕ್ಕೆ ಮಾತ್ರ ಸೀಮಿತವಾಗಿದ್ದ ಕಂಬಳವು, ಕಾಂತಾರ ಚಲನಚಿತ್ರ ತೆರಕಂಡ ಬಳಿಕ ಮತ್ತಷ್ಟು ಪ್ರಾಮುಖ್ಯತೆ ಪಡೆಯಿತು ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

ಕಂಬಳ ಸ್ಪರ್ಧೆಯನ್ನು ಪಿಲಿಕುಳದ ಪ್ರಾಣಿ ಸಂಗ್ರಹಾಲಯದ ಬಳಿ ಆಯೋಜನೆ ಮಾಡುವ ಬಗ್ಗೆ ಆಕ್ಷೇಪಿಸಿ ಪೆಟಾ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್.ವಿ. ಅಂಜಾರಿಯಾ ಮತ್ತು ನ್ಯಾಯಮೂರ್ತಿ ಎಂ.ಐ. ಅರುಣ್ ಅವರಿದ್ದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ಈ ವೇಳೆ ಸರ್ಕಾರಿ ಪರ ವಕೀಲರು ಪ್ರಕರಣ ಸಂಬಂಧಿಸಿದಂತೆ ತಜ್ಞರ ಸಮಿತಿಯನ್ನು ರಚಿಸಲಾಗಿದ್ದು, ಇದರ ವರದಿ ಸಿದ್ಧಗೊಂಡಿದ್ದು, ವರದಿ ಪರಿಶೀಲಿಸಿದ ಬಳಿಕ ಅಂತಿಮ ನಿರ್ಧಾರ ತೆಗೆದುಕೊಳ್ಳುವುದಾಗಿ ತಿಳಿಸಿದರು.

ಹಾಗಿದ್ದರೆ ಪ್ರಕರಣ ಇತ್ಯರ್ಥಪಡಿಸಿಬಿಡೋಣವೇ ಎಂದು ಪೀಠ ನುಡಿಯಿತು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಅರ್ಜಿದಾರರ ಪರ ವಕೀಲರು, ಅರ್ಜಿ ಕುರಿತಾಗಿ ಒಂದಿಷ್ಟು ದಾಖಲೆಗಳು ನ್ಯಾಯಾಲಯಕ್ಕೆ ಸಲ್ಲಿಸಲು ಬಾಕಿಯಿದೆ. ಕಂಬಳ ಆಯೋಜನೆ ಗ್ಗೆ ನಮಗೆ ಆಕ್ಷೇಪವಿಲ್ಲ. ಆದರೆ, ಎಲ್ಲಿ ಆಯೋಜಿಸಲಾಗುತ್ತಿದೆ ಎಂಬುದು ಪ್ರಶ್ನೆ ? ದಕ್ಷಿಣ ಕನ್ನಡ ಮತ್ತು ಉಡುಪಿಯ ಯಾವುದೇ ಭಾಗದಲ್ಲಿ ಕಂಬಳ ಸ್ಪರ್ಧೆಗೆ ಆಕ್ಷೇಪವಿಲ್ಲ ಎಂದರು.

ಆ ಕೂಡಲೇ ನ್ಯಾಯಮೂರ್ತಿ ಎಂ.ಐ. ಅರುಣ್, ಪಿಲಿಕುಳ ದ .ಕ ಜಿಲ್ಲೆಯಲ್ಲಿ ಇರುವುದಲ್ಲವೇ ಎಂದು ಪ್ರಶ್ನೆ ಎತ್ತಿದರು.

ಈ ವೇಳೆ ಅರ್ಜಿದಾರರ ಪರ ವಕೀಲರು ಅರ್ಜಿಯಲ್ಲಿ ಉದ್ದೇಶಿಸಿರುವ ಸ್ಪರ್ಧೆಯು ಪಿಲಿಕುಳದ ಪ್ರಾಣಿ ಸಂಗ್ರಹಾಲಯದ ಸಮೀಪ ನಡೆಯುತ್ತಿದೆ. ಇದರಿಂದ ಅಲ್ಲಿರುವ ವನ್ಯಜೀವಿಗಳಿಗೆ ಸಮಸ್ಯೆಯಾಗುತ್ತದೆ. ಈ ಸಂಬಂಧ ಪ್ರಾಣಿ ಸಂಗ್ರಹಾಲಯದ ನಿರ್ದೇಶಕರು ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದಾರೆಂದು ವಿವರಣೆ ನೀಡಿದರು.

ನ್ಯಾಯಮೂರ್ತಿ ಎಂ.ಐ. ಅರುಣ್ ಅವರು ಈ ಅರ್ಜಿಯಲ್ಲಿ ಎರಡು ವಿಚಾರಗಳು ಅಡಗಿದೆ. ಒಂದು ನಿಸರ್ಗಧಾಮದಲ್ಲಿರುವ ಪ್ರಾಣಿಗಳಿಗೆ ತೊಂದರೆಯಾಗುವ ಬಗ್ಗೆ, ಇನ್ನೊಂದು ಕಂಬಳದಲ್ಲಿ ತೊಡಗಿಸಿಕೊಳ್ಳುವ ಕೋಣಗಳ ಮೇಲಿನ ಕ್ರೌರ್ಯದ ವಿಚಾರ. ಆದರೆ, ತಮಿಳುನಾಡಿನ ಜಲ್ಲಿಕಟ್ಟು ಹೋಲಿಕೆ ಮಾಡಿದರೆ ಈ ಕ್ರೀಡೆಯಲ್ಲಿ ಪ್ರಾಣಿಗಳ ಮೇಲಿನ ಕ್ರೌರ್ಯ ಕಡಿಮೆ ಇದೆ. ಸುಪ್ರೀಂ ಕೋರ್ಟ್ ಎರಡೂ ಕ್ರೀಡೆಗೂ ಅನುಮತಿ ನೀಡಿದೆ ಎಂದು ಹೇಳಿದರು.

ಮುಂದುವರಿದು ನ್ಯಾಯಪೀಠ ಪ್ರಾಣಿ ಸಂಗ್ರಾಲಯವು ಗೋಡೆಯಿಂದ ಸುತ್ತುವರಿದಿಲ್ಲವೇ? ಇಂದು ಮೈಸೂರು ಪ್ರಾಣಿ ಸಂಗ್ರಾಲಯವು ನಗರದ ನಡುವೆ ಇದೆ. ಅಲ್ಲಿ ನಿರಂತರ ವಾಗಿ ವಾಹನಗಳ ಶಬ್ದ, ಜನಸಂಚಾರ ಎಗ್ಗಿಲ್ಲದೇ ಮುಂದುವರಿದಿದೆ ಎಂದರು. ಈ ವೇಳೆ ವಕೀಲರು ಚಲಿಸುತ್ತಿರುವ ಶಬ್ದಕ್ಕೂ, ಸ್ಥಿರ ಶಬ್ದಕ್ಕೂ ಸಾಕಷ್ಟು ವ್ಯತ್ಯಾಸವಿದೆ ಎಂದರು.

ಪ್ರತಿವಾದಿಯೊಬ್ಬರ ಪರ ವಕೀಲರು ವಾದ ಮಂಡಿಸಿ ಪ್ರಾಣಿ ಸಂಗ್ರಾಲಯವು ವಿಮಾನ ನಿಲ್ದಾಣದ ಸಮೀಪವೇ ಇದೆ. ಪ್ರಾಣಿ ಸಂಗ್ರಾಲಯದಲ್ಲಿ ಆನೆ, ಸಿಂಹ ಗರ್ಜನೆ ಇತರ ಪ್ರಾಣಿಗಳಿಗೆ ಯಾವುದೇ ತೊಂದರೆ ಉಂಟುಮಾಡಿಲ್ಲ. ಅರ್ಜಿದಾರರ ವಾದದಲ್ಲಿ ಯಾವುದೇ ಹುರುಳಿಲ್ಲ ಎಂದರು. ಈ ವೇಳೆ ಪೀಠ ಪ್ರಾಣಿಗಳ ಸ್ವಾಭಾವಿಕ ಗರ್ಜನೆಗೂ ಮತ್ತು ಇತರ ಚುಟುವಟಿಕೆಯಿಂದ ಹೊರಹೊಮ್ಮುವ ಶಬ್ದಕ್ಕೂ ವ್ಯತ್ಯಾಸವಿದೆಯಲ್ಲವೇ ಎಂದಿತು.

ರಾಜ್ಯ ಸರ್ಕಾರದ ಪರ ವಕೀಲರು ಈ ಪ್ರಕರಣದಲ್ಲಿ ಅಡ್ವೋಕೆಟ್ ಜನರಲ್ ವಾದ ಮಂಡಿಸಬೇಕಿದ್ದು, ಅವರು ಲಭ್ಯವಿಲ್ಲ. ಆದ್ದರಿಂದ, ವಿಚಾರಣೆಯನ್ನು ಮುಂದೂಡಬೇಕೆಂದು ಕೋರಿದರು. ಇದನ್ನು ಪುರಸ್ಕರಿಸಿದ ಪೀಠವು ೆ. 18ಕ್ಕೆ ಮುಂದೂಡಿದೆ.

300 ಕೋಣಗಳಾ? ಸಿಜೆ ಅಚ್ಚರಿ:

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ ಆಯೋಜನೆ ಮಾಡಲಾಗಿರುವ ಕಂಬಳದಲ್ಲಿ ಸುಮಾರು 300ಕ್ಕೂ ಹೆಚ್ಚು ಕೋಣಗಳು ಭಾಗವಹಿಸಲಿದೆ. ಇದು ಬಹು ದೊಡ್ಡ ಕಾರ್ಯಕ್ರಮವಾಗಿದ್ದು, ಕಳೆದ ವರ್ಷ ಬೆಂಗಳೂರು ಅರಮನೆ ಮೈದಾನದಲ್ಲಿ ಸ್ಪರ್ಧೆ ಆಯೋಜನೆ ಮಾಡಿದ್ದು 11 ಲಕ್ಷಕ್ಕೂ ಹೆಚ್ಚಿನ ಜನರು ಸೇರಿರುವುದಾಗಿ ತಿಳಿಸಿದರು. ಈ ವೇಳೆ ಮುಖ್ಯ ನ್ಯಾಯಮೂರ್ತಿ 300 ಕೋಣಗಳಾ? ಮೈದಾನದಲ್ಲಿ ಓಟವೇ ಎಂದು ಅಚ್ಚರಿ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net