

ಪತಿ ಮತ್ತು ಮಕ್ಕಳಿಬ್ಬರ ದುರ್ಮರಣದ ನಂತರ ಕಮಲಮ್ಮನವರ ಬದುಕು ತಪಸ್ವಿನಿಯೊಬ್ಬರ ಜೀವನದಂತಿತ್ತು. ವೈಯಕ್ತಿಕ ಬದುಕು ಎನ್ನುವುದನ್ನು ಅವರು ಎಂದೋ ಮರೆತು ಬಿಟ್ಟಿದ್ದರು. ಕನ್ನಡ ಚಳವಳಿಗಾರರು ಸದಾ ಅವರನ್ನು ಮನೆಯ ಹಿರಿಯರಂತೆ ಗೌರವಿಸುತ್ತಿದ್ದುದು ಅವರಿಗೆ ಕೊಂಚ ಚೇತರಿಕೆ ನೀಡಿತು. ಭೇಟಿ ವೇಳೆ ಕನ್ನಡದ ಕುರಿತೇ ಮಾತನಾಡುತ್ತಿದ್ದರು. ಶತಾಯುಷಿ ಕಮಲಮ್ಮ ಕೊನೆಯುಸಿರೆಳೆಯುವ ಹಿಂದಿನ ದಿನದವರೆಗೂ ಚೈತನ್ಯಪೂರ್ಣವಾಗಿ ಓಡಾಡಿಕೊಂಡಿದ್ದರು.
ಕನ್ನಡ ಸಮಾರಂಭಗಳಲ್ಲಿ ನಾವು ಉಪಯೋಗಿಸುವ ಕನ್ನಡ ಬಾವುಟವನ್ನು ರೂಪಿಸಿದ ಮಹನೀಯರು ಮ. ರಾಮಮೂರ್ತಿ. ಅವರು ಕನ್ನಡ ಬಾವುಟವನ್ನು ಮಾತ್ರ ರೂಪಿಸಲಿಲ್ಲ, ಕನ್ನಡಿಗರು ತಲೆ ಎತ್ತಿ ಗೌರವದಿಂದ ಬಾಳುವ ಹಾಗೆ, ಕನ್ನಡದ ಬಾವುಟವು ನಿರಂತರ ಹಾರಾಡುವ ಹಾಗೆ ತಮ್ಮ ಕೊನೆಯ ಉಸಿರಿರುವವರೆಗೂ ಕನ್ನಡ ನಾಡು ನುಡಿಗಾಗಿ ಶ್ರಮಿಸಿದರು. ಅವರ ಬೆನ್ನೆಲುಬಾಗಿ ನಿಂತು, ಕನ್ನಡಪರ ಹೋರಾಟಕ್ಕೆ ಪ್ರೇರಕರಾಗಿದ್ದವರು ಅವರ ಮಡದಿ ಕಮಲಮ್ಮನವರು. ಹತ್ತಾರು ಸಲ ಕಮಲಮ್ಮನವರನ್ನು ಭೇಟಿ ಮಾಡುವ ಸೌಭಾಗ್ಯ ನನಗೆ ದೊರೆತ್ತಿತ್ತು. ಪ್ರತಿ ಭೇಟಿಯಲ್ಲಿಯೂ ಚರಿತ್ರೆಯ ಸ್ಮರಣಾರ್ಹ ಘಟನಾವಳಿಗಳ ಪುಟಗಳು ತೆರೆದುಕೊಳ್ಳುತ್ತಿದ್ದವು. ಕಮಲಮ್ಮನವರ ತ್ಯಾಗ, ಕಷ್ಟ-ನಷ್ಟ, ದುರ್ಭರ ಬದುಕು ಎಂಥದ್ದೆಂಬುದನ್ನು ತಿಳಿಯಬೇಕೆಂದರೆ ಅದಕ್ಕೆ ಮೊದಲು ಅವರ ಪತಿಯ ಕಾರ್ಯ, ಮಕ್ಕಳ ಜೊತೆಗೆ ಪತಿಯೂ ಅಕಾಲಿಕವಾಗಿ ಕಣ್ಮರೆಯಾದ ಘಟನೆ... ಇವೆಲ್ಲವನ್ನೂ ತಿಳಿಯುವುದು ಅನಿವಾರ್ಯ.
1960ರ ದಶಕದಲ್ಲಿ ಕನ್ನಡ ಚಳವಳಿಗೆ ಜೀವ ತುಂಬಿದ್ದ ರಾಮಮೂರ್ತಿ ಅವರು, ತಮ್ಮ ತಂದೆ ವೀರಕೇಸರಿ ಸೀತಾರಾಮ ಶಾಸ್ತ್ರಿಗಳ ಪ್ರೇರಣೆಯಿಂದ ಸಾಹಿತ್ಯದ ಹಾದಿ ಹಿಡಿದವರು. ಕನ್ನಡದ ವಾತಾವರಣವನ್ನು ಮೂಡಿಸಲು, ಸಾಂಸ್ಕೃತಿಕ ಕಾರ್ಯಕ್ರಮಗಳಾದ ರಾಮೋತ್ಸವ ಮುಂತಾದವುಗಳಲ್ಲಿ ಕನ್ನಡ ಕಲಾವಿದರಿಗೆ ಮನ್ನಣೆ ಸಿಗುವಂತೆ ಮಾಡಲು, ಬಿಡುಗಡೆಯಾದ ಕನ್ನಡ ಚಲನಚಿತ್ರಗಳಿಗೆ ಚಿತ್ರಮಂದಿರಗಳು ದೊರೆಯುವಂತೆ ಮಾಡಲು, ಕಾರ್ಖಾನೆಗಳಲ್ಲಿ ಕನ್ನಡಿಗರಿಗೆ ಉದ್ಯೋಗಾವಕಾಶಗಳನ್ನು ದೊರೆಯುವಂತಾಗಲು ಅವರು ನಿರಂತರವಾಗಿ ಶ್ರಮಿಸಿದ್ದರು. ಜನಸಾಮಾನ್ಯರಲ್ಲಿ ಕನ್ನಡದ ಅರಿವು ಮೂಡಿಸಲು ಇರುವ ಏಕೈಕ ಮಾರ್ಗವೆಂದರೆ ಕನ್ನಡವನ್ನು ಎಲ್ಲರೂ ಓದುವಂತಾಗಬೇಕು ಎಂಬುದು ರಾಮಮೂರ್ತಿಯವರ ನಿಲುವಾಗಿತ್ತು. ಇದನ್ನು ಸಾಕಾರಗೊಳಿಸಲು ಕುತೂಹಲಭರಿತ ಕಾದಂಬರಿಗಳ ಕ್ಷೇತ್ರ ಪೂರಕ ಎಂದು ಚಿಂತಿಸಿದ ರಾಮಮೂರ್ತಿ, ಸ್ವತಃ ಅನೇಕ ಪತ್ತೇದಾರಿ ಕಾದಂಬರಿಗಳ ರಚನೆಯನ್ನೂ ಮಾಡಿದರು.
ಆರಡಿ ಎತ್ತರದ ಆಜಾನುಬಾಹು. ದೃಷ್ಟಿನೋಟದಿಂದಲೇ ಎದುರಿಗೆ ನಿಂತವರನ್ನು ಸೆರೆ ಹಿಡಿದುಬಿಡುವ ಬೊಗಸೆ ಕಂಗಳು, ಕಂಚಿನ ಕಂಠ... ಇದು ಮ. ರಾಮಮೂರ್ತಿ ಎಂದ ಕೂಡಲೇ ನೆನಪಿಗೆ ಬರುವ ಚಿತ್ರಣ. ವೇದಿಕೆ ಹತ್ತಿ ನಿಂತರೆ ಸಾಕು, ಆವೇಶಭರಿತರಾಗಿ, ನಿರರ್ಗಳವಾಗಿ ಭಾಷಣ ಮಾಡುತ್ತಿದ್ದರು. ಕನ್ನಡಿಗರ ನರನಾಡಿಗಳನ್ನು ಕನ್ನಡಕ್ಕಾಗಿ ಎಚ್ಚರಿಸುವ ಧ್ವನಿಯೇ ಅವರ ಹೆಗ್ಗುರುತು. ಸದಾ ಕ್ರಿಯಾಶೀಲರಾಗಿದ್ದ ರಾಮಮೂರ್ತಿಯವರು, ಕೃಷಿಕ ಜೀವನವನ್ನು ನಡೆಸಲು ಬಯಸಿ ಬೆಂಗಳೂರಿನ ಕನಕಪುರ ರಸ್ತೆಯ ತಲಘಟ್ಟಪುರದ ತಮ್ಮ ಜಮೀನಿನಲ್ಲಿ ನೀರಿಗಾಗಿ ಬಾವಿ ತೋಡಿಸುತ್ತಿದ್ದರು. 1967ರ ಡಿಸೆಂಬರ್ 25ರಂದು ಬಾವಿಯಲ್ಲಿ ನೀರು ಬಂದಿತು. ಆ ಸಂತಸದಲ್ಲಿ ತಮ್ಮ ಮಕ್ಕಳಾದ ದಿವಾಕರ ಮತ್ತು ಮಂಜುನಾಥ ಅವರೊಡನೆ ಬಾವಿಗಿಳಿದರು. ಹಠಾತ್ತನೇ ಮೇಲಿಂದ ಮಣ್ಣು ಕುಸಿಯಿತು. ಅಲ್ಲಿದ್ದ ಕೂಲಿಗಳೊಡನೆ ಈ ಮೂವರೂ ದುರ್ಮರಣಕ್ಕೀಡಾದರು.
ಪತಿ ಮತ್ತು ಮಕ್ಕಳಿಬ್ಬರ ದುರ್ಮರಣದ ಆಘಾತದಿಂದ ಹೊರಬರುವುದಕ್ಕೇ ಕಮಲಮ್ಮನವರಿಗೆ ಅನೇಕ ವರ್ಷಗಳು ಬೇಕಾದವು. ಮುಂದೆ ಅವರ ಬದುಕು ತಪಸ್ವಿನಿಯೊಬ್ಬರ ಜೀವನದಂತಿತ್ತು. ವೈಯಕ್ತಿಕ ಬದುಕು ಎನ್ನುವುದನ್ನು ಎಂದೋ ಮರೆತು ಬಿಟ್ಟಿದ್ದರು. ಶಾರದಾ ಕುಟೀರ ಅವರಿಗೆ ಆಶ್ರಯ ತಾಣವಾಗಿತ್ತು. ಕನ್ನಡ ಚಳವಳಿಗಾರರು ಆಗಾಗ ಹೋಗಿ ಅವರನ್ನು ಭೇಟಿಯಾಗಿ ಕುಶಲ ವಿಚಾರಿಸುತ್ತಿದ್ದರು. ಸದಾ ಅವರನ್ನು ಮನೆಯ ಹಿರಿಯರಂತೆ ಗೌರವಿಸುತ್ತಿದ್ದರು. ಇದು ಅವರಿಗೆ ಕೊಂಚ ಚೇತರಿಕೆ ನೀಡಿತು. ಅವರ ದರ್ಶನವೇ ಕನ್ನಡ ಹೋರಾಟಗಾರರಿಗೆ ಕನ್ನಡಾಂಬೆಯ ದರ್ಶನದ ಭಾವವನ್ನು ಮೂಡಿಸುತ್ತಿತ್ತು. ಭೇಟಿಯ ವೇಳೆ ಅವರು ಸದಾ ಕನ್ನಡದ ಕುರಿತೇ ಮಾತನಾಡುತ್ತಿದ್ದರು. ನಾವ್ಯಾರೂ ಭೇಟಿಯಲ್ಲಿ ಅವರ ಕುಟುಂಬದ ದುರ್ಮರಣದ ವಿಷಯವನ್ನು ಪ್ರಸ್ತಾಪಿಸುತ್ತಿರಲಿಲ್ಲ. ಅವರೂ ಅದನ್ನು ನೆನಪು ಮಾಡಿಕೊಳ್ಳಲು ಬಯಸುತ್ತಿರಲಿಲ್ಲ.
ಪ್ರತಿ ಮಧ್ಯಾಹ್ನವೂ ಅವರು ಬಸವನಗುಡಿಯ ರಾಮಕೃಷ್ಣ ಆಶ್ರಮಕ್ಕೆ ಬರುತ್ತಿದ್ದರು. ಅವರನ್ನು ನಾನು ಹಲವು ಸಲ ನೋಡಿದ್ದು ಇಲ್ಲಿಯೇ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅವರಿಗೆ ವೃದ್ಧಾಪ್ಯ ವೇತನ ನಿರಾಕರಿಸಿದ್ದು ದೊಡ್ಡ ಸುದ್ದಿಯಾಯಿತು. ಅವರು ಅದಕ್ಕೂ ಯಾವುದೇ ಪ್ರತಿಕ್ರಿಯೆ ನೀಡಿದವರಲ್ಲ. ಅಷ್ಟೊಂದು ನಿರ್ಲಿಪ್ತತೆ ಮತ್ತು ಸ್ಥಿತಪ್ರಜ್ಞ ಮನೋಭಾವ. ಕಮಲಮ್ಮನವರು ತಮ್ಮ ಕೊನೆಯ ದಿನಗಳನ್ನು ಬೆಂಗಳೂರಿನ ಸೇವಾ ಕ್ಷೇತ್ರ ಆಸ್ಪತ್ರೆಯಲ್ಲಿ ಕಳೆದರು. ನೂರು ವರ್ಷ ತಲುಪಿ, ಶತಾಯುಷಿ ಎನಿಸಿಕೊಂಡರೂ ಅವರು ಕೊನೆಯುಸಿರೆಳೆಯುವ ಹಿಂದಿನ ದಿನದವರೆಗೂ ಚೈತನ್ಯಪೂರ್ಣವಾಗಿ ಓಡಾಡಿಕೊಂಡಿದ್ದರು. ಕನ್ನಡ ಸಾಹಿತ್ಯ ಪರಿಷತ್ತು ಅವರ ಕೊನೆಯ ದಿನಗಳ ವೈದ್ಯಕೀಯ ವೆಚ್ಚವನ್ನು ಭರಿಸಿ ತನ್ನ ಹೊಣೆಗಾರಿಕೆಯನ್ನು ಮೆರೆಯಿತು. ಕನ್ನಡ ನಾಡು-ನುಡಿಗೆ ದುಡಿದ ಕುಟುಂಬದವರ ರಕ್ಷಣೆಗೆ ರಾಜ್ಯ ಸರ್ಕಾರ ಕ್ರಿಯಾಶೀಲವಾಗಬೇಕಾದ ಅಗತ್ಯವನ್ನು ಕಮಲಮ್ಮನವರ ಬದುಕೇ ಸಾರಿ ಹೇಳುತ್ತದೆ.
ಕನ್ನಡ ಚಳವಳಿಯ ಸೇನಾನಿ, ಕನ್ನಡ ಬಾವುಟ ಸೃಷ್ಟಿಸಿದ್ದ ಮ. ರಾಮಮೂರ್ತಿ ಅವರ ಪತ್ನಿ ಕಮಲಮ್ಮ (100) ಸೋಮವಾರ ನಿಧನರಾದರು. 1967ರಲ್ಲಿ ಪತಿ ಮ. ರಾಮಮೂರ್ತಿ ಮತ್ತು ಮಕ್ಕಳಾದ ದಿವಾಕರ ಹಾಗೂ ಮಂಜುನಾಥ ಅವರು ಬಾವಿ ಕುಸಿದು ಮೃತಪಟ್ಟ ಬಳಿಕ 58 ವರ್ಷಗಳಿಂದ ಕಮಲಮ್ಮ ‘ಶಾರದಾ ಕುಟೀರ’ದಲ್ಲಿ ಒಂಟಿಯಾಗಿ ಜೀವನ ನಡೆಸುತ್ತಿದ್ದರು. ಇತ್ತೀಚೆಗೆ ವಯೋಸಹಜ ಆರೋಗ್ಯ ಸಮಸ್ಯೆಯಿಂದಾಗಿ ಹೆಚ್ಚಿನ ಆರೈಕೆಗಾಗಿ ಅವರನ್ನು ಬನಶಂಕರಿಯ ಸೇವಾ ಕ್ಷೇತ್ರ ಆಸ್ಪತ್ರೆಗೆ ಸೇರಿಸಲಾಗಿತ್ತು. ಸೋಮವಾರ ಬೆಳಗ್ಗೆ 7.30ಕ್ಕೆ ನಿಧನರಾದರು. ಮಧ್ಯಾಹ್ನ 1 ಗಂಟೆವರೆಗೆ ಮೃತರ ಅಂತಿಮ ದರ್ಶನಕ್ಕೆ ಸೇವಾ ಕ್ಷೇತ್ರದಲ್ಲಿಯೇ ವ್ಯವಸ್ಥೆ ಮಾಡಲಾಗಿತ್ತು. ಕನ್ನಡ ಪರ ಹೋರಾಟಗಾರರು, ರಂಗಕರ್ವಿುಗಳು ಸೇರಿದಂತೆ ಅನೇಕರು ಅಂತಿಮ ದರ್ಶನ ಪಡೆದರು. ಬಳಿಕ ಬನಶಂಕರಿ ಚಿತಾಗಾರದಲ್ಲಿ ಅಂತ್ಯಸಂಸ್ಕಾರ ನೆರವೇರಿಸಲಾಯಿತು.