

ಸಾಲ್ಟ್ ಲೇಕ್ ಸಿಟಿ: ಅಮೆರಿಕ ಉಪಾಧ್ಯಕ್ಷ ಚುನಾವಣೆಯ ಅಭ್ಯರ್ಥಿಗಳಾದ ರಿಪಬ್ಲಿಕನ್ ಪಕ್ಷದ ನಾಯಕ, ಹಾಲಿ ಉಪಾಧ್ಯಕ್ಷ ಮೈಕ್ ಪೆನ್ಸ್ ಮತ್ತು ಡೆಮಾಕ್ರಟಿಕ್ ಪಕ್ಷದ ಭಾರತ ಮೂಲದ ಸೆನೆಟರ್ ಕಮಲಾ ಹ್ಯಾರಿಸ್ ನಡುವೆ ಬುಧವಾರ ಚರ್ಚೆ ನಡೆಯಿತು.
ಕೋವಿಡ್-19 ಸಾಂಕ್ರಾಮಿಕತೆಯನ್ನು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತ ನಿರ್ವಹಿಸಿದ ರೀತಿ ‘ಮಹಾ ವೈಫಲ್ಯ’ ಎಂದು ಕಮಲಾ ವರ್ಣಿಸಿದರು. ಇದನ್ನು ತೀವ್ರವಾಗಿ ಆಕ್ಷೇಪಿಸಿದ ಪೆನ್ಸ್, ಟ್ರಂಪ್ರ ವಿಶ್ವಾಸಾರ್ಹತೆ ಮೇಲೆ ದಾಳಿ ಮಾಡುವ ಮೂಲಕ ಕರೊನಾ ಲಸಿಕೆಯ ಭವಿಷ್ಯದ ವಿಚಾರದಲ್ಲಿ ಜನರ ವಿಶ್ವಾಸವನ್ನೇ ಕುಂದಿಸುತ್ತಿದ್ದಾರೆ ಎಂದು ತಿರುಗೇಟು ನೀಡಿದರು.
ಕಳೆದ ವಾರ ಟ್ರಂಪ್ ಮತ್ತು ಜೊಯ್ ಬಿಡೆನ್ ನಡುವೆ ಅಧ್ಯಕ್ಷೀಯ ಚರ್ಚೆ ನಡೆದಿತ್ತು. ಈ ವಾರ ನಡೆಯಲಿರುವ 2ನೇ ಡಿಬೇಟ್ ಅನ್ನು ವರ್ಚುವಲ್ ಮೂಲಕ ನಡೆಸಲು ಆಯೋಜಕರು ಪ್ರಸ್ತಾಪಿಸಿದ್ದಾರೆ. ಆದರೆ, ವರ್ಚುವಲ್ ಸಭೆಯಲ್ಲಿ ಭಾಗವಹಿಸುವುದಿಲ್ಲ ಎಂದು ಟ್ರಂಪ್ ಹೇಳಿದ್ದಾರೆ.
ಚಿಟ್ಟೆಗೆ ಕ್ವಾರಂಟೈನ್!
ಉಪಾಧ್ಯಕ್ಷೀಯ ಚುನಾವಣೆಯ ಸ್ಪರ್ಧಿಗಳ ಚರ್ಚೆ ವೇಳೆ ಹಾರಿ ಬಂದ ಚಿಟ್ಟೆಯೊಂದು ಮೈಕ್ ಪೆನ್ಸ್ ತಲೆ ಮೇಲೆ ಕುಳಿತುಕೊಂಡ ಪ್ರಸಂಗ ನೆಟ್ಟಿಗರ ತಮಾಷೆಗೆ ಆಹಾರವಾಯಿತು. ಕರೊನಾ ವೈರಸ್ ಸೋಂಕು ತಡೆಗೆಂದು ಹಾಕಿದ್ದ ಗಾಜಿನ ಪರದೆ ಮೇಲಿಂದ ಹಾರಿ ಬಂದ ಚಿಟ್ಟೆ ಪೆನ್ಸ್ ಕೂದಲಿನ ಮೇಲೆ ಎರಡು ನಿಮಿಷ ಕಾಲ ಕೂತಿತ್ತು. ಪ್ರತಿಸ್ಪರ್ಧಿ ಕಮಲಾ ಹ್ಯಾರಿಸ್ರೊಂದಿಗೆ ಜನಾಂಗೀಯ ತಾರತಮ್ಯ ವಿಚಾರ ರ್ಚಚಿಸುತ್ತಿದ್ದಾಗ ಈ ಘಟನೆ ನಡೆಯಿತು.
ಈ ಕ್ವಾರಂಟೈನ್ ಮಾಡಬೇಕು ಎಂದು ಮಿಸ್ಸೌರಿಯ ಮಾಜಿ ವಿದೇಶಾಂಗ ಕಾರ್ಯದರ್ಶಿ ಜೇಸನ್ ಕಂಡೇರ್ ಟ್ವೀಟ್ ಮಾಡಿದ್ದಾರೆ.