

ತಮಿಳುನಾಡು: ಅಮೆರಿಕಾ ಅಧ್ಯಕ್ಷೀಯ ಚುನಾವಣೆ ಪೈಪೋಟಿಯಲ್ಲಿ ಡೊನಾಲ್ಡ್ ಟ್ರಂಪ್ ವಿರುದ್ಧ ಕಮಲಾ ಹ್ಯಾರಿಸ್(Kamala Harris) ಪರಾಭವಗೊಂಡ ಬೆನ್ನಲ್ಲೇ ತಮಿಳುನಾಡಿನ ಹ್ಯಾರಿಸ್ ಅವರ ತಾಯಿಯ ಪೂರ್ವಜರ ಗ್ರಾಮ ತುಳಸೇಂದ್ರಪುರಂ ಸಂಪೂರ್ಣ ಸ್ತಬ್ಧವಾಗಿದೆ.
ಬೆಳಿಗ್ಗೆಯಿಂದ ಸ್ಥಳೀಯರು ದೂರದರ್ಶನಗಳನ್ನು ವೀಕ್ಷಿಸುವುದರ ಜತೆಗೆ ಹಲವಾರು ನಿವಾಸಿಗಳು ಹ್ಯಾರಿಸ್ ಅವರ ವಿಜಯಕ್ಕಾಗಿ ಪ್ರಾರ್ಥಿಸಲು ಶ್ರೀ ಧರ್ಮ ಪೆರುಮಾಳ್ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಕಳೆದ ಮೂರರಿಂದ ನಾಲ್ಕು ದಿನಗಳ ಕಾಲ ಗ್ರಾಮದಲ್ಲಿ ಹಬ್ಬದ ವಾತಾವರಣವೇ ಮೂಡಿತ್ತು. ಆದರೆ, ಟ್ರಂಪ್ ವಿರುದ್ಧ ಸೋತ ಬಳಿಕ ಗ್ರಾಮಸ್ಥರು ಅತೀವ ಬೇಸರಕ್ಕೆ ಒಳಗಾಗಿದ್ದಾರೆ. ಇನ್ನು ಇಲ್ಲಿಗೆ ಆಗಮಿಸಿದ್ದ ಹ್ಯಾರಿಸ್ ಅಭಿಮಾನಿಗಳಾದ ಇಬ್ಬರು ಅಮೇರಿಕನ್ನರು ಮತ್ತು ಯುಕೆ ಪ್ರಜೆ ಹಳ್ಳಿಯಿಂದ ನಿರ್ಗಮಿಸಿದ್ದಾರೆ.
ಗ್ರಾಮದ ಮುಖಂಡರು ಮಾಧ್ಯಮಗಳ ಜತೆ ಮತನಾಡಿ, ಹ್ಯಾರಿಸ್ ಗೆಲುವಿನ ನಿರೀಕ್ಷೆ ಇತ್ತು. ಹೀಗಾಗಿ ಪಟಾಕಿ ಸಿಡಿಸಿ, ಸಿಹಿ ಹಂಚುವುದರ ಮೂಲಕ ದೀಪಾವಳಿ ಹಬ್ಬದಂತೆ ದೊಡ್ಡ ಆಚರಣೆಯನ್ನು ಹಮ್ಮಿಕೊಳ್ಳಲಾಗಿತ್ತು. ಅಲ್ಲದೇ, ದೇವರ ಪೂಜೆಗಳನ್ನು ಮತ್ತು ಭೂರಿ ಭೋಜನವನ್ನು ಕೂಡ ಆಯೋಜಿಸಲಾಗಿತ್ತು. ಆದರೆ, ಅವರು ಸೋಲನ್ನು ಕಂಡಿದ್ದಾರೆ. ಕಮಲಾ ಹೋರಾಟಗಾರ್ತಿಯಾಗಿ ಪುನರಾಗಮನ ಮಾಡುತ್ತಾರೆ. ಇದು ಕಠಿಣ ಹೋರಾಟವಾಗಿತ್ತು. ಆಕೆಯ ಹೋರಾಟದ ಮನೋಭಾವವನ್ನು ಮೆಚ್ಚಬೇಕು ಎಂದಿದ್ದಾರೆ.
ಟ್ರಂಪ್ಗೆ ಶುಭಕೋರಿದ ಗ್ರಾಮಸ್ಥರು
"ಕಮಲಾ ಹ್ಯಾರಿಸ್ ಮುಂದಿನ ಬಾರಿ ಗೆದ್ದು ನಮ್ಮ ಗ್ರಾಮಕ್ಕೆ ಭೇಟಿ ನೀಡುತ್ತಾರೆ. ಆ ದಿನ ಬಂದಾಗ, ನಾವು ಆಕೆಗೆ ಭವ್ಯವಾದ ಸ್ವಾಗತವನ್ನು ನೀಡುತ್ತೇವೆ. ಡೊನಾಲ್ಡ್ ಟ್ರಂಪ್ ಅವರಿಗೆ ನಮ್ಮ ಶುಭಾಶಯಗಳನ್ನು ತಿಳಿಸುತ್ತೇವೆ. ಅವರು ಭಾರತದೊಂದಿಗೆ ಉತ್ತಮ ಸಂಬಂಧವನ್ನು ಬೆಳೆಸುತ್ತಾರೆ ಎಂದು ನಾವೆಲ್ಲರೂ ಭಾವಿಸಿದ್ದೇವೆ'' ಎಂದು ಗ್ರಾಮಸ್ಥರು ಹೇಳಿದ್ದಾರೆ.(ಏಜೆನೀಸ್)