ಬಿಗ್​ ಬಾಸ್​ ಸೀಸನ್ 08​ರ ಹೋಸ್ಟ್​ ನಾನಲ್ಲ: ಶಾಕಿಂಗ್ ಸಂಗತಿ ಬಿಚ್ಚಿಟ್ಟ ನಟ ಕಮಲ್ ಹಾಸನ್​!

ವಿಜಯವಾಣಿ - 2024-08-06T180519.655
Published on

ತಮಿಳುನಾಡು: ದೇಶದಲ್ಲಿ ಅತೀ ದೊಡ್ಡ ರಿಯಾಲಿಟಿ ಶೋ ಎಂದೇ ಹೆಸರುವಾಸಿಯಾಗಿರುವ ಬಿಗ್​ ಬಾಸ್​ ಕಾರ್ಯಕ್ರಮ ಆಯಾ ಭಾಷೆಗಳಲ್ಲಿ ಮೂಡಿಬರುತ್ತಿರುವುದ ನಮಗೆಲ್ಲಾ ಗೊತ್ತೇ ಇದೆ. ಹಿಂದಿಯಲ್ಲಿ ಸಲ್ಮಾನ್ ಖಾನ್ ನಡೆಸಿಕೊಟ್ಟರೆ, ಕನ್ನಡದಲ್ಲಿ ಅಭಿನಯದ ಚಕ್ರವರ್ತಿ ಕಿಚ್ಚ ಸುದೀಪ್ 10 ಸೀಸನ್​ಗಳನ್ನು ಯಶಸ್ವಿಯಾಗಿ ಪೂರೈಸಿ, ಇದೀಗ 11ನೇ ಸೀಸನ್​ನತ್ತ​ ಎದುರುನೋಡುತ್ತಿದ್ದಾರೆ. ಇನ್ನು ತಮಿಳಿನಲ್ಲಿ ಬಹುಭಾಷಾ ನಟ ಕಮಲ್ ಹಾಸನ್​ ಕಾರ್ಯಕ್ರಮವನ್ನು ಮುನ್ನಡೆಸಿಕೊಂಡು ಬಂದಿದ್ದೇ ಆದರೂ ಇದೇ ಮೊದಲ ಬಾರಿಗೆ ರಿಯಾಲಿಟಿ ಶೋ ನಡೆಸಿಕೊಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಇದು ಬಿಗ್​ ಬಾಸ್​ ವೀಕ್ಷಕರಲ್ಲಿ ಭಾರೀ ಅಚ್ಚರಿ ಮೂಡಿಸಿದೆ.

ಈ ಕುರಿತಂತೆ ತಮ್ಮ ಅಧಿಕೃತ ಸಾಮಾಜಿಕ ಜಾಲತಾಣದ ಖಾತೆ ಟ್ವಿಟರ್​ನಲ್ಲಿ ಮಾಹಿತಿ ಹಂಚಿಕೊಂಡಿರುವ ಕಮಲ್ ಹಾಸನ್​, ಈ ಬಾರಿಯ ಬಿಗ್​ ಬಾಸ್​ ಸೀಸನ್​ ಅನ್ನು ನಾನು ನಿರ್ವಹಿಸುತ್ತಿಲ್ಲ. ತಮಿಳಿನ ಬಿಬಿ ಸೀಸನ್​ 08ರಿಂದ ಹೊರಗುಳಿದಿದ್ದೇನೆ. ಇದಕ್ಕೆ ಕಾರಣ, ನನ್ನ ಸಿನಿಮಾ ಕೆಲಸಗಳು ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ. 7 ವರ್ಷದ ಪಯಣದಿಂದ ಕೊಂಚ ವಿರಾಮ ತೆಗೆದುಕೊಂಡಿರುವ ನಾನು, ಬಹಳ ಕಷ್ಟದಿಂದ ಈ ನಿರ್ಧಾರ ಕೈಗೊಂಡಿದ್ದೇನೆ ಎಂದು ಹೇಳಿದ್ದಾರೆ.

"ಬಿಗ್​ ಬಾಸ್​ ಕಾರ್ಯಕ್ರಮದ ಮೂಲಕ ನಿಮ್ಮ ಮನ ಹಾಗೂ ಮನೆಗಳಿಗೆ ತಲುಪಿದ್ದೇನೆ. ಅಗಾಧ ಪ್ರೀತಿ, ಕಾಳಜಿಯನ್ನು ತೋರಿದ್ದೀರಿ. ನಿಮ್ಮ ಪ್ರೋತ್ಸಾಹ, ಬೆಂಬಲವೇ ತಮಿಳಿನ ಬಿಗ್​ ಬಾಸ್​ ಕಾರ್ಯಕ್ರಮಕ್ಕೆ ದೊಡ್ಡ ಯಶಸ್ಸು. ಒಂದು ರಿಯಾಲಿಟಿ ಶೋ ಇಷ್ಟು ಚೆನ್ನಾಗಿ ಮೂಡಿಬರಲು ನಿಮ್ಮೆಲ್ಲರ ಬೆಂಬಲವೇ ಕಾರಣ. ಈ ವೇದಿಕೆಯಿಂದ ಸಾಕಷ್ಟು ಕಲಿತಿದ್ದೀನಿ. ಸ್ಪರ್ಧಿಗಳಿಂದ ಹಿಡಿದು ಕ್ಯಾಮರಾಮನ್​, ಎಡಿಟರ್ಸ್​, ಚಾನಲ್​, ಸಿಬ್ಬಂದಿ ವರ್ಗಕ್ಕೆ ನನ್ನ ಹೃತ್ಪೂರ್ವಕ ಧನ್ಯವಾದಗಳು" ಎಂದು ತಿಳಿಸಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net